ನ್ಯೂಸ್

ಯಾವಾಗ ಕರೆದರೂ ರಾಜ್ಯಕ್ಕೆ ಬರಲು ಸಿದ್ಧ; ಕರ್ನಾಟಕದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ತರಲು ಸರ್ವ ಸಹಕಾರ: ರಾಹುಲ್ ಗಾಂಧಿ

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಮೇಲಿಂದ ಮೇಲೆ ಬಂದು ಹೋಗುತ್ತಿರುವುದನ್ನು ನೋಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಪ್ರೇರಣೆಗೊಂಡಂತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ತರಲು ಸರ್ವ ಸಹಕಾರ ನೀಡುವುದಾಗಿ ಹೇಳಿರುವ ಅವರು, ಯಾವಾಗ ಕರೆದರೂ ನಾನು ರಾಜ್ಯಕ್ಕೆ ಬರಲು ಸಿದ್ಧ ಎಂದು ಹೇಳಿದ್ದಾರೆ.

ಕೋಲಾರದಲ್ಲಿನ ಸಮಾವೇಶದ ಬಳಿಕ ಇಂದು ರಾಜಧಾನಿ ಬೆಂಗಳೂರಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ದೇಶದಲ್ಲಿ ಬಿಜೆಪಿ ಏನು ಮಾಡುತ್ತಿದೆ, ಕಾಂಗ್ರೆಸ್ ಏನು ಮಾಡುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ ಎಂದ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿರುವ ವಿಶ್ವಾಸ ವ್ಯಕ್ತಪಡಿಸಿದರು.

ಇಡೀ ದೇಶದಲ್ಲಿ ಕರ್ನಾಟಕ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಇರೋದು 40% ಬಿಜೆಪಿ ಸರ್ಕಾರ. ಈ ಸಲ ಬಿಜೆಪಿಯನ್ನು ಗುಡಿಸಿಬಿಡಬೇಕು, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ನಾನು ಎಲ್ಲಾ ಸಹಕಾರ ನೀಡುತ್ತೇನೆ. ನಮ್ಮ ಪಕ್ಷ 150 ಸೀಟ್​​ಗಳಿಂದ ಗೆಲುವು ಸಾಧಿಸಬೇಕು ಎಂದ ರಾಹುಲ್, ರಾಜ್ಯದಲ್ಲಿರುವ ಕಾಂಗ್ರೆಸ್​ ಅಲೆ ನೋಡಿದರೆ ಗೊತ್ತಾಗುತ್ತದೆ, ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ಸೇ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.