ನ್ಯೂಸ್

ಹುಷಾರು..ರಾಜ್ಯದಲ್ಲಿ ಈ ಬಾರಿ ಚಳಿ ಜೋರು...

ಹರೀಶ್​​ ಕೆ.ಸಿ.

ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಚಳಿ ಶುರುವಾಗಿದೆ. ಈ ಬಾರಿ ಚಳಿ ತುಸು ಹೆಚ್ಚು ನಡುಕ ತರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಲಬುರಗಿ, ಯಾದಗಿರಿ, ವಿಜಯಪುರ, ರಾಯಚೂರು, ಬೆಳಗಾವಿ, ಗದಗ, ಬಾಗಲಕೋಟೆ, ಧಾರವಾಡ, ಹಾವೇರಿ, ಚಿತ್ರದುರ್ಗ ಮತ್ತು ಹಾವೇರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕಳೆದ 3 ದಿನಗಳಲ್ಲಿ ಇದ್ದ ಕನಿಷ್ಠ ಉಷ್ಣಾಂಶದಲ್ಲಿ ಏಕಾಏಕಿ ಸರಾಸರಿ 6ರಿಂದ 9 ಡಿಗ್ರಿ ಸೆಲ್ಸಿಯಸ್ ಕುಸಿತವಾಗಿದ್ದು, ಈಗಾಗಲೇ ಚಳಿಯ ಅನುಭವಾಗುತ್ತಿದೆ. ಬೆಂಗಳೂರಿನಲ್ಲಿಯೂ ಕನಿಷ್ಠ ತಾಪಮಾನದಲ್ಲಿ ಸರಾಸರಿ 4 ಡಿಗ್ರಿ ಸೆಲ್ಸಿಯಸ್ ಕುಸಿತವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ ಎಂದು ವರದಿ ನೀಡಿದೆ.

ಲಾ ನಿನಾ ಪರಿಣಾಮ

ಪೂರ್ವ ಹಾಗೂ ಮಧ್ಯ ಫೆಸಿಫಿಕ್​​ ಮಹಾಸಾಗರದಲ್ಲಿ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾದರೆ ಲಾ ನಿನಾ ಎಂದು ಕರೆಯಲಾಗುತ್ತದೆ. ಈ ಲಾ ನಿನಾ ಪರಿಣಾಮದಿಂದ ಈಶಾನ್ಯ ಮಾರುತಗಳು ದುರ್ಬಲಗೊಳ್ಳುವ ಹಿನ್ನೆಲೆಯಲ್ಲಿ ಚಳಿ ಹೆಚ್ಚಾಗಲಿದೆ. ಉತ್ತರದಿಂದ ದಕ್ಷಿಣ ಕಡೆಗೆ ಗಾಳಿ ಬೀಸಿದರೆ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗಲಿದೆ. ಬಂಗಾಳದ ಉಪಸಾಗರದಿಂದ ಗಾಳಿ ಬೀಸಿದರೆ ಕನಿಷ್ಠ ಹಾಗೂ ಗರಿಷ್ಠ ತಾಪಮಾನದಲ್ಲಿ ಉಷ್ಣಾಂಶ ಹೆಚ್ಚಾಗಲಿದೆ. ಅಲ್ಲದೆ, ದಕ್ಷಿಣದ ಹಿಂದೂ ಮಹಾಸಾಗರದಿಂದ ಗಾಳಿ ಬೀಸಿದರೂ ತಾಪಮಾನ ಹೆಚ್ಚಾಗಲಿದೆ ಎಂದು ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ ಮಾಹಿತಿ ನೀಡಿದರು.

7.6 ಡಿಗ್ರಿ ಸೆಲ್ಸಿಯಸ್ ದಾಖಲು

ರಾಜ್ಯದ ಇತರೆ ಜಿಲ್ಲೆಗಳಿಗಿಂತ ಬೀದರ್‌ನಲ್ಲಿ ಮಂಗಳವಾರ ಕನಿಷ್ಠ ಉಷ್ಣಾಂಶದಲ್ಲಿ 7.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ವಿಜಯಪುರದಲ್ಲಿ 11, ಹಾವೇರಿ ಮತ್ತು ರಾಯಚೂರಿನಲ್ಲಿ ತಲಾ 13 ಹಾಗೂ ಧಾರವಾಡದಲ್ಲಿ ಕನಿಷ್ಠ ಉಷ್ಣಾಂಶದಲ್ಲಿ 14 ಡಿಗ್ಸಿ ಸೆಲ್ಸಿಯಸ್ ದಾಖಲಾಗಿದೆ.