ನ್ಯೂಸ್

ಈತ ಭಾರತದಲ್ಲೇ ಅತ್ಯಂತ ಎತ್ತರದ ವ್ಯಕ್ತಿ; ಮದುವೆ ಆಗಲು ಈಗ ಅದೇ ಸಮಸ್ಯೆ!

ಉತ್ತರ ಪ್ರದೇಶ: ಯಾರಿಗೇ ಆಗಲಿ.. ಕುಳ್ಳಗಿರುವುದು ಸಾಮಾನ್ಯವಾಗಿ ಸಮಸ್ಯೆ ಅನಿಸಿದ್ದಿದೆಯೇ ಹೊರತು ಎತ್ತರ ಸಮಸ್ಯೆ ಅನಿಸಿದ್ದು ಇಲ್ಲವೇ ಇಲ್ಲ ಎನ್ನಬಹುದು. ಆದರೆ ಇಲ್ಲೊಬ್ಬ ವ್ಯಕ್ತಿಗೆ ಈಗ ಅದೇ ಸಮಸ್ಯೆ ಎನಿಸಿದೆ.

ಇವರ ಹೆಸರು ಧರ್ಮೇಂದ್ರ ಪ್ರತಾಪ್​ ಸಿಂಗ್. ಭಾರತದಲ್ಲೇ ಅತ್ಯಂತ ಎತ್ತರದ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿರುವ ಇವರ ಎತ್ತರ ಬರೋಬ್ಬರಿ 8 ಅಡಿ 2 ಇಂಚು. ಎತ್ತರದಿಂದಾಗಿಯೇ ಗಿನ್ನೆಸ್​ ದಾಖಲೆ ಮಾಡಿರುವ ಇವರಿಗೆ ಆರಂಭದಲ್ಲಿ ಅದು ತುಂಬಾ ಖುಷಿ ನೀಡಿದೆ. ಆದರೆ ಈಗ ಯಾಕಾದರೂ ಇಷ್ಟು ಎತ್ತರ ಬೆಳೆದೆನೋ ಎಂದು ಇವರು ಪರಿತಪಿಸುತ್ತಿದ್ದಾರೆ. ಯಾವುದೇ ಹುಡುಗಿ ಮದುವೆ ಆಗಬೇಕು ಎಂದರೆ ಹುಡುಗನ ಹೈಟು-ವೇಯ್ಟು ಚೆನ್ನಾಗಿರಬೇಕು ಎನ್ನುತ್ತಾಳೆ. ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಈಗ ಇವರ ಅತಿಯಾದ ಎತ್ತರವೇ ಇವರ ಮದುವೆಗೆ ಅಡ್ಡಿಯಾಗಿ ಬಿಟ್ಟಿದೆ.

ಸದ್ಯ 45 ವರ್ಷವಾಗಿದ್ದರೂ ಧರ್ಮೇಂದ್ರಗೆ ಇನ್ನೂ ಮದುವೆ ಆಗಿಲ್ಲ. ವರ್ಷಗಳು ಉರುಳುತ್ತಿರುವುದರಿಂದ ನನಗೆ ಸಂಗಾತಿ ಬೇಕು ಅನಿಸುತ್ತಿದೆ. ಹೀಗಾಗಿ ಸಂಬಂಧಿಕರನೇಕರು ನನ್ನ ಮದುವೆಗೆ ಹೆಣ್ಣನ್ನು ತೋರಿಸಿದ್ದರು. ಆದರೆ ನನ್ನ ಎತ್ತರ ನೋಡಿದ ಹುಡುಗಿಯರು ಮದುವೆ ಆಗಲು ನಿರಾಕರಿಸಿದ್ದಾರೆ. ನನಗಂತೂ ಮದುವೆ ಮೇಲಿನ ಭರವಸೆಯೇ ಹೋಗಿದ್ದು, ನನ್ನದೇ ಸಂಸಾರವನ್ನು ಹೊಂದುವ ಕನಸು ನನಸಾಗುವುದಿಲ್ಲ ಅನಿಸುತ್ತಿದೆ ಎಂದು ಬೇಸರದಿಂದ ಹೇಳುತ್ತಾರೆ ಧರ್ಮೇಂದ್ರ.

ಉತ್ತರ ಪ್ರದೇಶದ ಪ್ರತಾಪಗಢದ ನರಹರಪುರದ ನಿವಾಸಿ ಆಗಿರುವ ಧರ್ಮೇಂದ್ರ ಸ್ನಾತಕೋತ್ತರ ಪದವೀಧರ. ಇವರು ತಮ್ಮ ಎತ್ತರದಿಂದಾಗಿ ಗಮನ ಸೆಳೆಯುತ್ತಿದ್ದು, ಈ ಹಿಂದೆ ಸಮಾಜವಾದಿ ಪಕ್ಷದ ಚುನವಣಾ ಪ್ರಚಾರದಲ್ಲೂ ಪಾಲ್ಗೊಂಡಿದ್ದರು. ಎತ್ತರದ ಕಾರಣಕ್ಕೆ ನಾನು ಆಫೀಸ್​ ಹಾಗೂ ಕೆಲವು ಕಟ್ಟಡಗಳಿಗೆ ಹೋಗಲಿಕ್ಕೆ ಆಗುತ್ತಿಲ್ಲ ಎಂದು ಬೇಸರ ಪಟ್ಟಿರುವ ಇವರು, ತಮ್ಮ ಪರಿಸ್ಥಿತಿಗೆ ತಕ್ಕ ಕೆಲಸ ಕೊಡಿಸುವಂತೆ ಮುಖ್ಯಮಂತ್ರಿ ಅವರಲ್ಲಿ ಕೋರಿಕೊಳ್ಳಲು ನಿರ್ಧರಿಸಿದ್ದಾರೆ. (ಏಜೆನ್ಸೀಸ್​)