ನ್ಯೂಸ್

ಪ್ರಭಾಸ್​ 'ಕಲ್ಕಿ' ಚಿತ್ರದಲ್ಲಿ ಸ್ಟಾರ್​ ನಟರ ಸಮಾಗಮ! ಈ ವಿಷಯ ನಮಗೆ ತಿಳಿದೇ ಇರಲಿಲ್ಲ ಎಂದ ಫ್ಯಾನ್ಸ್​

ಹೈದರಾಬಾದ್​: ಈ ಹಿಂದಿನಿಂದಲೂ ಸಿನಿಪ್ರೇಕ್ಷಕರಲ್ಲಿ ಭಾರೀ ಕೌತುಕ ಹೆಚ್ಚಿಸಿದ್ದ ಟಾಲಿವುಡ್​ನ​ ರೆಬೆಲ್ ಸ್ಟಾರ್​ ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ, ಸೈನ್ಸ್​ ಫಿಕ್ಷನ್​ ಆಧರಿತ ‘ಕಲ್ಕಿ 2898 ಎಡಿ’ ಸಿನಿಮಾ ಇಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು, ಅಪಾರ ಸಿನಿಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ರಿಲೀಸ್​ಗೂ ಮುನ್ನವೇ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಮಾಲ್ ಮಾಡಲಿದೆ ಹಾಗೂ ಈ ಹಿಂದಿನ ದಾಖಲೆಗಳನ್ನು ಮೀರಿ, ಹೊಸ ರೆಕಾರ್ಡ್​ ಬರೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಇದೀಗ ಪ್ರಭಾಸ್​ ಸಿನಿಮಾ ಹೊಸ ಮೈಲಿಗಲ್ಲನ್ನು ಸಾಧಿಸಲಿದೆ ಎಂದೇ ಅನೇಕರು ಅಭಿಪ್ರಾಯಿಸುತ್ತಿದ್ದಾರೆ.

ವೈಜಯಂತಿ ಮೂವೀಸ್ ಅಡಿಯಲ್ಲಿ ಅಶ್ವಿನಿ ದತ್ ಚಿತ್ರವನ್ನು ನಿರ್ಮಿಸಿದ್ದು, ಸಂತೋಷ್ ನಾರಾಯಣನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಪ್ರಭಾಸ್​ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾನಿ, ಪಶುಪತಿ ರಾಮಸ್ವಾಮಿ, ಶಾಶ್ವತ್ ಚಟರ್ಜಿ ಸೇರಿದಂತೆ ಮುಂತಾದವರ ತಾರಾಗಣವಿದೆ ಎಂದು ಚಿತ್ರತಂಡ ತಿಳಿಸಿತ್ತು. ಆದ್ರೆ, ಅವರನ್ನೆಲ್ಲಾ ಮೀರಿ ತೆಲುಗು ಚಿತ್ರರಂಗದ ಕೆಲವು ಸ್ಟಾರ್​ ನಟರು ಕೂಡ ಚಿತ್ರದ ಭಾಗವಾಗಿದ್ದಾರೆ ಎಂಬ ಸುದ್ದಿ ಸದ್ಯ ಸಿನಿಪ್ರಿಯರಲ್ಲಿ ಅಚ್ಚರಿ ಮೂಡಿಸಿದೆ.

ಚಿತ್ರದಲ್ಲಿ ನಿರ್ದೇಶಕ ರಾಮ್​ಗೋಪಾಲ್ ವರ್ಮ, ನಟ ವಿಜಯ್ ದೇವರಕೊಂಡ, ದುಲ್ಕರ್​ ಸಲ್ಮಾನ್ ಹಾಗೂ ಸ್ಟಾರ್​ ನಿರ್ದೇಶಕ ಎಸ್​.ಎಸ್​. ರಾಜಮೌಳಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂಗತಿ ಸಿನಿಪ್ರೇಕ್ಷಕರಲ್ಲಿ ಭಾರೀ ಅಚ್ಚರಿ ಮೂಡಿಸಿದ್ದು, ತಮ್ಮ ನೆಚ್ಚಿನ ನಟರ ಸಮಾಗಮ ಇರುವುದು ಗೊತ್ತೇ ಇರಲಿಲ್ಲ ಎಂದು ಅಭಿಪ್ರಾಯ ಹೊರಹಾಕಿದ್ದಾರೆ,(ಏಜೆನ್ಸೀಸ್).