ನ್ಯೂಸ್

ಇದು ಹನುಮನ ದೇಶ; ಪಠ್ಯದಲ್ಲಿ ಅಕ್ಬರ್​-ಬಾಬರ್​ನ ನಾಡು ಅಂತ ಇರುವುದು ದುರ್ದೈವ: ಕಲ್ಲಡ್ಕ ಪ್ರಭಾಕರ್ ಭಟ್

ಹಾಸನ: ತಮ್ಮ ಉಗ್ರ ಭಾಷಣಕ್ಕೆ ಹೆಸರಾಗಿರುವ ಆರ್​ಎಸ್​ಎಸ್​ ಮುಖಂಡ, ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಹಿಂದುತ್ವದ ಪರವಾಗಿ ಮತ್ತೊಮ್ಮೆ ಗುಡುಗಿದ್ದಾರೆ. ಹಾಸನಲ್ಲಿ ನಡೆದ ಹನುಮೋತ್ಸವ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇದು ಹನುಮನ ದೇಶ ಎಂದು ಪ್ರತಿಪಾದಿಸಿದ್ದಾರೆ.

ದುರ್ದೈವದಿಂದ ನಮ್ಮ ಪಠ್ಯಪುಸ್ತಕದಲ್ಲಿ ಇದನ್ನು ಬಾಬರ್-ಅಕ್ಬರ್​ನ ನಾಡು ಅಂಥ ಹೇಳಲಾಗಿದೆ. ಆದರೆ ಇದು ಹನುಮನ ದೇಶ, ಹನುಮನನ್ನು ಬದಿಗೆ ತಳ್ಳಿ ವಿದೇಶಿ‌ ಆಕ್ರಮಣಗಾರರನ್ನು ವೈಭವೀಕರಿಸುವ ಕೆಲಸ ನಡೆದಿದೆ. ಪ್ರಾರಂಭದಿಂದ ಈ ದೇಶವನ್ನು ಹಿಂದೂ ದೇಶ ಅಂತ ಹೇಳಲಿಲ್ಲ, ಸೆಕ್ಯುಲರ್ ಹೆಸರಿನಲ್ಲಿ ಬೆರಕೆ ಆಗಿದೆ ಎಂದ ಪ್ರಭಾಕರ್ ಭಟ್, ಕಲ್ಲಿನಲ್ಲಿಯೂ ನೀರಿನಲ್ಲಿಯೂ ದೇವರನ್ನು ನೋಡಿದ ನಾಡಿದು. ಕಾವೇರಿಯನ್ನು ಇಂದಿಗೂ ತೀರ್ಥ ಅಂತ ನೋಡುತ್ತೇವೆ. ಭಾವನೆ ಜೊತೆ ನಾವು ನದಿಯನ್ನು ನೋಡುತ್ತೇವೆ, ಜೀವಮಾನಪೂರ್ತಿ ನಮ್ಮನ್ನು ಬದುಕಿಸಿದ್ದು ನಮ್ಮ ಗೋಮಾತೆ, ಆದರೆ ಕೆಲ ಹುಚ್ಚು ಸಂತತಿ ಆ ಗೋ ಮಾತೆಯನ್ನು ಕತ್ತರಿಸುತ್ತಾರೆ. ಮಾಜಿ ಮುಖ್ಯಮಂತ್ರಿಯೊಬ್ಬರು ನಾವು ಗೋವು ತಿಂತೀವಿ ಅಂತ ರೋಡಲ್ಲಿ ನಿಂತು ಹೇಳಿದ್ದು ನಮ್ಮ ದುರ್ದೈವ ಎಂದರು.

ಕಾಂಗ್ರೆಸ್ ತುಷ್ಟೀಕರಣದಿಂದ ದೇಶ ಇಬ್ಭಾಗವಾಯಿತು, ಈ ದೇಶದ ಅಲ್ಪಸಂಖ್ಯಾತ ತುಷ್ಟೀಕರಣದಿಂದ ದೇಶ ತುಂಡರಿಸುವ ಕೆಲಸ ನಡೆಯುತ್ತಿದೆ. ಈಗ ಹಿಂದೂ ಸಮಾಜ ಒಟ್ಟಾಗಬೇಕು. ಹಿಂದೂ ಎದ್ದರೆ ಮಾತ್ರ ದೇಶ ಏಳುತ್ತದೆ, ಇಲ್ಲವಾದಲ್ಲಿ ಇದು ಬರಡು ಭೂಮಿ ಆಗುತ್ತದೆ, ಈ ದೇಶವನ್ನ ಕಳೆದುಕೊಂಡರೆ ಕಷ್ಟ ಎಂದು ಭಟ್ ಹೇಳಿದರು.

ಜಗತ್ತಿನಲ್ಲಿ ನಾವು ಎಷ್ಟೋ ದೇವರನ್ನು ಯಾವ ದಿಕ್ಕು ಸ್ಥಳದಲ್ಲಾದರೂ ಪೂಜೆ ಮಾಡುತ್ತೇವೆ. ಆದರೆ ಮುಸ್ಲಿಮರು ಶುಕ್ರವಾರ ಮಾತ್ರ ಮಂಡಿ ಬಗ್ಗಿಸಿ ಪೂಜೆ ಮಾಡಿದರಷ್ಟೇ ದೇವರಿಗೆ ಸಲ್ಲುತ್ತದೆ ಎನ್ನುತ್ತಾರೆ. ಹಾಗಾದರೆ ಬಾಕಿ ದಿನ ದೇವರಿಲ್ಲವಾ? ಪಾಕಿಸ್ತಾನದಲ್ಲಿ ಸಾವಿರಾರು ದೇವಸ್ಥಾನಗಳಿದ್ದವಲ್ವ. ಇವತ್ತು ಇವೆಯಾ? ಎಂದು ಪ್ರಶ್ನಿಸಿದ ಪ್ರಭಾಕರ್ ಭಟ್, ಹಿಂದೂ ಸಮಾಜ ಕ್ಷಣಕ್ಷಣವೂ ಯೋಚಿಸುವ ಕಾಲವಿದು ಎಂದು ಕಿವಿಮಾತು ಹೇಳಿದರು.

ಆಂಧ್ರಪ್ರದೇಶದಲ್ಲಿ ಕ್ರೈಸ್ತರು ದೇವಾಲಯ ಕೆಡವುವ ಕೆಲಸ ಈಗಲೂ ಮಾಡುತ್ತಿದ್ದಾರೆ. ಲವ್​ ಜಿಹಾದ್ ಮೂಲಕ ಹೆಣ್ಣು ಮಕ್ಕಳನ್ನು ಪ್ರೀತಿಸಿ ಕರೆದುಕೊಂಡು ಹೋಗಿ ಸುಸೈಡ್ ಬಾಂಬರ್ ಮಾಡಲಾಗುತ್ತಿದೆ. ಮುಸ್ಲಿಂ ಹೆಣ್ಣುಮಕ್ಕಳು ಕೂಡ ಹಿಂದೂ ಮಕ್ಕಳನ್ನು ಮತಾಂತರ ಮಾಡಲು ಪ್ರೋತ್ಸಾಹ ನೀಡುತ್ತಿದ್ದಾರೆ. ಈ ದೇಶದಲ್ಲಿ ಮತಾಂತರ ಎಂದರೆ ಅದು ದೇಶಾಂತರ ಆದಂತೆ. ಮೇಘಾಲಯ-ನಾಗಾಲ್ಯಾಂಡ್ ಶೇ. 90ರಷ್ಟು ಮತಾಂತರಗೊಂಡಿದ್ದು, ಹಿಂದೂಗಳು ಕ್ರೈಸ್ತರಾಗಿದ್ದಾರೆ ಎಂದರು. ಬೇರೆ ಧರ್ಮದ ಮಕ್ಕಳಿಗೆ 3ರಿಂದ 6ರ ವಯಸ್ಸಿನಲ್ಲೇ ಕುರಾನ್-ಬೈಬಲ್ ಬರುತ್ತದೆ, ನಮ್ಮಲ್ಲಿ ಎಷ್ಟು ಮಕ್ಕಳಿಗೆ ಭಗವದ್ಗೀತೆ ಬರುತ್ತಿದೆ? ಎಂದೂ ಪ್ರಭಾಕರ್ ಭಟ್ ಪ್ರಶ್ನಿಸಿದರು.