ನ್ಯೂಸ್

ಹಿಂಸಾಚಾರಕ್ಕೆ ನಲುಗುತ್ತಿದೆ ದೆಹಲಿ; 4 ದಿನಗಳಿಂದ ಸುಳಿವಿಲ್ಲದ ಮಗನನ್ನು ಹುಡುಕುತ್ತಿದ್ದ ಮುಸ್ಲಿಂ ಕುಟುಂಬಕ್ಕೆ ಎದುರಾಗಿದ್ದು ಬಹುದೊಡ್ಡ ಶಾಕ್​...

ನವದೆಹಲಿ: ದೆಹಲಿ ಗಲಭೆ ಎಷ್ಟರಮಟ್ಟಿಗೆ ಹೆಚ್ಚಾಗಿದೆ ಎಂದರೆ ಅದೆಷ್ಟೋ ಜನರು ಮನೆಗೆ ಹೋಗಲೂ ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ. ಗಲಾಟೆಯಲ್ಲಿ ಪಾಲ್ಗೊಂಡವರು ಮಾತ್ರವಲ್ಲದೆ, ಸಾಮಾನ್ಯರೂ ಸಹ ಗಾಯಗೊಂಡು ಆಸ್ಪತ್ರೆ ಸೇರುವಂತಾಗಿದೆ. ಮುಗ್ಧರ ಪ್ರಾಣವೂ ಹೋಗುತ್ತಿದೆ.

ನಾಲ್ಕುದಿನದಿಂದ ನಾಪತ್ತೆಯಾಗಿದ್ದ ಗುಪ್ತಚರ ದಳದ ಅಧಿಕಾರಿಯೋರ್ವನ ಮೃತದೇಹ ಮೋರಿಯಲ್ಲಿ ಸಿಕ್ಕಿತ್ತು. ಈಗ ಅಂಥದ್ದೇ ಮತ್ತೊಂದು ಘಟನೆ ನಡೆದಿದ್ದಾಗಿ ವರದಿಯಾಗಿದೆ. ತಮ್ಮ 22 ವರ್ಷದ ಮಗನನ್ನು ನಾಲ್ಕು ದಿನದಿಂದಲೂ ಹುಡುಕುತ್ತಿದ್ದ ಮುಸ್ಲಿಂ ಪಾಲಕರಿಗೆ ಆತನ ಶವ ಜಿಟಿಬಿ ಆಸ್ಪತ್ರೆಯ ಶವಾಗಾರದಲ್ಲಿ ಸಿಕ್ಕಿದೆ.

ಅವನ ಹೆಸರು ಮೋನಿಸ್​. ಫೆ.25ರಿಂದಲೂ ನಾಪತ್ತೆಯಾಗಿದ್ದ. ಈತ ಯಾವುದೇ ಗಲಾಟೆ, ಗಲಭೆಯಲ್ಲೂ ಭಾಗವಹಿಸಿದವನು ಅಲ್ಲ. ಆದರೆ ಉದ್ರಿಕ್ತರ ದಾಳಿಗೆ ಜೀವ ಕಳೆದುಕೊಂಡಿದ್ದಾನೆ.

ಮೋನಿಸ್​ನ ಸೋದರ ಸಂಬಂಧಿ ಇಬ್ರಾಹಿಂ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಮೋನಿಸ್​ ಮುಸ್ತಫಾಬಾದ್​ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಬಡ್ಲಿಯಲ್ಲಿರುವ ತಾಯಿಯನ್ನು ಭೇಟಿಯಾಗಲು ಹೋಗಿದ್ದ. ಬಡ್ಲಿಯಿಂದ ವಾಪಸ್ ಬರುವಾಗ ಮಧ್ಯಾಹ್ನ 3.30ರ ಸಮಯದಲ್ಲಿ ಯಮುನಾ ವಿಹಾರದ ಬಳಿ ಗಲಭೆಯಲ್ಲಿ ಸಿಲುಕಿದ್ದಾನೆ. ಈ ಬಗ್ಗೆ ನನಗೆ ಫೋನ್ ಮಾಡಿದ್ದ. ಅಲ್ಲದೆ, ಏನೂ ತೊಂದರೆಯಿಲ್ಲ, ಸುರಕ್ಷಿತವಾಗಿ ವಾಪಸ್ ಬರುತ್ತೇನೆ ಎಂದಿದ್ದ. ಆದರೆ ಬರಲಿಲ್ಲ. ಫೋನ್​ ಕೂಡ ಸ್ವಿಚ್​ ಆಫ್​ ಆಗಿತ್ತು. ಇದು ನಡೆದದ್ದು ಫೆ.25ರಂದು. ಅವತ್ತಿನಿಂದಲೂ ಹುಡುಕುತ್ತಿದ್ದೆವು ಎಂದು ಇಬ್ರಾಹಿಂ ತಿಳಿಸಿದ್ದಾರೆ.

ಗಲಭೆಯಲ್ಲಿ ಸಿಕ್ಕಿಕೊಂಡ ಮಾಹಿತಿ ಸಿಕ್ಕಿದ್ದರಿಂದ ನಮಗೆ ಅನುಮಾನವಿತ್ತು. ಹಾಗಾಗಿ ಏಮ್ಸ್​, ಸಫ್ದರ್ಜಂಗ್ ಸೇರಿ ಸುಮಾರು ಏಳು ಆಸ್ಪತ್ರೆಗಳಲ್ಲಿ ಮೋನಿಸ್​ಗಾಗಿ ಹುಡುಕಿದ್ದೇವೆ. ಅದಾದ ನಂತರ ಆಪ್​ ಮುಖಂಡ ಹಾಜಿ ಯೂನಿಸ್​ ಅವರ ಕಚೇರಿಗೂ ಸಂಪರ್ಕಿಸಿ ವಿಷಯ ತಿಳಿಸಿದೆವು. ಅವರು ನಮ್ಮ ದೂರನ್ನು ಪೊಲೀಸರಿಗೆ ನೀಡುವುದಾಗಿ ಹೇಳಿದ್ದರು. ಆದರೆ ಏನೂ ಪ್ರಯೋಜನವಾಗಿರಲಿಲ್ಲ. ಹೀಗೆ ಒಂದಾದ ಬಳಿಕ ಮತ್ತೊಂದು ಆಸ್ಪತ್ರೆಗೆ ತೆರಳಿ ವಿಚಾರಿಸಿದಾಗ ಕೊನೆಯಲ್ಲಿ ಜಿಟಿಬಿ ಆಸ್ಪತ್ರೆಯಲ್ಲಿ ಆತನ ಶವ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಹಾಗೇ 35 ವರ್ಷದ ಮಹಮ್ಮದ್​ ಫಿರೋಜ್​ ಎಂಬಾತ ಕೂಡ ನಾಪತ್ತೆಯಾಗಿದ್ದಾನೆ. ಅವನ ಕುಟುಂಬ ಕೂಡ ಹಲವು ಆಸ್ಪತ್ರೆಗಳಿಗೆ ತೆರಳಿ ಹುಡುಕುತ್ತಿದೆ. ಫಿರೋಜ್​ ಅವರು ಲೋನಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಂದ ವಾಪಸ್ ಬರುವಾಗ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಆತನ ಮೊಬೈಲ್​ ಕೂಡ ಮುರಿದಿರಬಹುದು. ಅವರಿಗೆ ಮುಸ್ಲಿಂ ಕುಟುಂಬವೊಂದು ರಕ್ಷಣೆ ಮಾಡಿತ್ತು. ಫೆ.24ರಂದು ಅಲ್ಲಿಂದಲೇ ನಮಗೆ ಫೋನ್ ಮಾಡಿದ್ದರು. ನನಗೆ ತುಂಬ ಮಾತನಾಡಲು ಆಗುತ್ತಿಲ್ಲ. ಗಾಯವಾಗಿದೆ ಎಂದು ಹೇಳಿದ್ದರು. ಆದರೆ ಅದಾದ ಮೇಲೆ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಫಿರೋಜ್ ಪತ್ನಿ ಶಬಾನಾ ತಿಳಿಸಿದ್ದಾರೆ. (ಏಜೆನ್ಸೀಸ್​)