ರೈತ ದುರ್ಗಪ್ಪ ಜತೆ ಸಚಿವ ಬಿ.ಸಿ. ಪಾಟೀಲ್ 
ನ್ಯೂಸ್

13 ಲಕ್ಷ ಸಾಲಕ್ಕೆ ಹೆದರಿದ್ದ ದುರ್ಗಪ್ಪನಿಗೆ ವಾರ್ಷಿಕ 7 ಲಕ್ಷ ರೂ. ಆದಾಯ!; ಮಂಗಳೂರು ವಿವಿ ವಿದ್ಯಾರ್ಥಿಗಳಿಗೆ ಪಠ್ಯವಾದ ಸಾಧನೆ

ಬೆಂಗಳೂರು: ಸಮಗ್ರ ಕೃಷಿ ಪದ್ಧತಿಯನ್ನು ವಾಹಿನಿಯೊಂದರಲ್ಲಿ ನೋಡಿ, ಅದರಿಂದ ಪ್ರೇರಿತಗೊಂಡು ಆತ್ಮಹತ್ಯೆಯಂತಹ ಮೂರ್ಖತನದ ನಿರ್ಧಾರವನ್ನು ಕೈಬಿಟ್ಟು ಈಗ ರೈತರಿಗೆ ಮಾದರಿಯಾಗಿದ್ದಾರೆ ಶಿಕಾರಿಪುರ ತಾಲೂಕು ಸಾಸರವಳ್ಳಿಯ ದುರ್ಗಪ್ಪ ಅಂಗಡಿ. ಇವರ ಕೃಷಿ ಪ್ರೀತಿ ಕಂಡ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ಕೆ.ಎ.ದಯಾನಂದ್ ಅವರ ಕುರಿತು ಪುಸ್ತಕವನ್ನೇ ಬರೆದಿದ್ದರೆ, ಮಂಗಳೂರು ವಿಶ್ವವಿದ್ಯಾನಿಲಯ ವಿಜ್ಞಾನ ಗಂಗೋತ್ರಿ ದ್ವಿತೀಯ ಪದವಿ ವಿದ್ಯಾರ್ಥಿಗಳಿಗೆ ‘ಕೃಷಿ, ಋಷಿ, ಖುಷಿ’ ಹೆಸರಿನಲ್ಲಿ ಪಠ್ಯವಾಗಿಸಿದೆ.

2009ರಲ್ಲಿ 13 ಲಕ್ಷ ರೂ. ಸಾಲದಿಂದ ಹೊರಬರಲಾಗದೆ ಆತ್ಮಹತ್ಯೆಗೆ ಶರಣಾಗಲು ಹೊರಟಿದ್ದ ದುರ್ಗಪ್ಪ ಅಂಗಡಿ ಈಗ ವಾರ್ಷಿಕ 6-7 ಲಕ್ಷ ರೂ. ಆದಾಯ ಗಳಿಸುತ್ತಾರೆ! ರೈತರಿಂದ ರೈತರಿಗೆ ಸಮಗ್ರ ಕೃಷಿ ಪದ್ಧತಿ ಬಗ್ಗೆ ಮಾಹಿತಿ ನೀಡಿ ಆತ್ಮಸ್ಥೈರ್ಯ ತುಂಬಿ ಪ್ರೋತ್ಸಾಹಿಸುತ್ತಿದ್ದಾರೆ. ಇವರಿಂದ ಸ್ಪೂರ್ತಿ ಪಡೆದ ಅದೆಷ್ಟೋ ರೈತರು ಶಿಕಾರಿಪುರ, ಸೊರಬ ತಾಲೂಕಿನ ಗಡಿ ಭಾಗದ ಜಮೀನುಗಳಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಯಾವುದೇ ಆಳು-ಕೂಲಿಕಾರರ ಸಹಾಯ ಪಡೆಯದೆ, ಒಂದು ಪೈಸೆ ಕೂಲಿ ಕೊಡದೆ ಪತ್ನಿಯೊಂದಿಗೆ ಮುಂಜಾನೆಯಿಂದ ಸಂಜೆಯವರೆಗೆ ಜಮೀನಿನಲ್ಲಿ ದುಡಿಯುತ್ತಾರೆ. ಜೇನು, ಮೀನು, ಕೋಳಿ, ಕುರಿ, ಹಸು, ನಾಯಿ ಸಾಕಣೆ, ವಿವಿಧ ತರಕಾರಿ, ಅಡಕೆ, ಹಣ್ಣು ಬೆಳೆಯುತ್ತಾರೆ. ಎರಡು ಕಾಲು ಎಕರೆ ಜಮೀನಿನಲ್ಲಿ ರಾಸಾಯನಿಕ ಮುಕ್ತ ಸಾವಯವ ಪದ್ಧತಿ ಬಳಸಿ ಸಾಧನೆಗೈದಿದ್ದಾರೆ ದುರ್ಗಪ್ಪ ಅಂಗಡಿ.

ಜೀವಾಮೃತ, ಹಸಿಮೀನಿನ ಟಾನಿಕ್ ಸ್ಪ್ರೇ, ಸೊಪ್ಪನ್ನು ಕೊಳೆಸಿ ಗೊಬ್ಬರನ್ನಾಗಿಸಿ ಬಳಸುತ್ತಾರೆ. ವಿಶೇಷವೆಂದರೆ, ಯಾವುದೇ ಸಣ್ಣ ರಾಸಾಯನಿಕಗಳನ್ನು ಬಳಸುವುದಿಲ್ಲ. ಕೋವಿಡ್ ಲಾಕ್​ಡೌನ್ ಸಂದರ್ಭ ತಮ್ಮ ಉತ್ಪನ್ನಗಳು ಮಾರಾಟವಾಗದೆ ನಷ್ಟವಾಯಿತೆಂದು ಕಣ್ಣೀರಿಡದೆ ತಾವೇ ಖುದ್ದಾಗಿ ತರಕಾರಿ, ಹಣ್ಣುಗಳನ್ನು ಮಾರಾಟ ಮಾಡಿ 3 ಲಕ್ಷ ರೂ. ಆದಾಯ ಗಳಿಸಿದ್ದಾರೆ. ರಾಜ್ಯಮಟ್ಟದ ಡಾ.ವೀರೇಶ ದತ್ತಿ ಪ್ರಶಸ್ತಿ, ಕೃಷಿಕ ಸಮಾಜದಿಂದ ರಾಜ್ಯಮಟ್ಟದ ಪ್ರಶಸ್ತಿ ಸೇರಿದಂತೆ 4 ರಾಜ್ಯಮಟ್ಟದ ಪ್ರಶಸ್ತಿಗಳು, ಜಿಲ್ಲಾ ಪ್ರಶಸ್ತಿ ಸೇರಿ ವಿವಿಧ ಪ್ರಶಸ್ತಿಗಳು ದುರ್ಗಪ್ಪ ಅವರನ್ನು ಅರಸಿ ಬಂದಿವೆ. ಶಿವಮೊಗ್ಗ ಜಿಲ್ಲೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ದುರ್ಗಪ್ಪ, ವಿದ್ಯಾರ್ಥಿಗಳಿಗೆ ಪಾಠ ಮಾಡುವುದಲ್ಲದೇ ಕೃಷಿ ಬಗ್ಗೆಯೂ ಅರಿವು ಮೂಡಿಸುತ್ತಿದ್ದಾರೆ.

ಕೃಷಿ ಸಚಿವರು ನನ್ನನ್ನು ತಮ್ಮ ಕಚೇರಿಗೆ ಕರೆದು ಸಮಗ್ರ ಕೃಷಿ ಬಗ್ಗೆ ರ್ಚಚಿಸಿ, ಆತ್ಮಸ್ಥೈರ್ಯ ತುಂಬಿದ್ದು ಖುಷಿ ತಂದಿದೆ. ಸಮಗ್ರ ಕೃಷಿ ಬಗೆಗಿನ ಸಚಿವರ ಕಾಳಜಿ ಮತ್ತಷ್ಟು ಸ್ಪೂರ್ತಿ ತುಂಬಿದೆ. ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಆದಾಯ ಹೆಚ್ಚಿಸಿಕೊಳ್ಳಬೇಕೆಂಬ ಬಿ.ಸಿ.ಪಾಟೀಲರ ಕಾಳಜಿ ಸ್ವಾಗತಾರ್ಹ. | ದುರ್ಗಪ್ಪ ಅಂಗಡಿ ಸಮಗ್ರ ಕೃಷಿ ಪರಿಚಾರಕ

ಕೃಷಿ ಸಚಿವರ ಮೆಚ್ಚುಗೆ: ಕೃಷಿ ಸಂಕಷ್ಟದಿಂದ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ದುರ್ಗಪ್ಪ ಅಂಗಡಿ ಈಗ ಸಮಗ್ರ ಕೃಷಿ ಅಳವಡಿಸಿಕೊಂಡು ಸ್ವಾವಲಂಬಿ ಯಾಗಿದ್ದಾರೆ. ಅವರ ಸಾಹಸ ಗಾಥೆಯನ್ನು ಕೇಳಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಖುದ್ದು ತಮ್ಮ ಕಚೇರಿಗೆ ಕರೆಸಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ‘ಸಾಲ ಮಾಡಿದೆನೆಂದು ಕೊರಗು ವುದನ್ನು ಬಿಟ್ಟು ಅದರಿಂದ ಹೊರಬಂದು ಆದಾಯವನ್ನು ದ್ವಿಗುಣಗೊಳಿಸುವುದು ಹೇಗೆ ಎಂಬುದನ್ನು ದುರ್ಗಪ್ಪ ಅಂಗಡಿ ಮಾಡಿ ತೋರಿಸಿದ್ದಾರೆ. ಇಂತಹ ರೈತರು ಎಲ್ಲ ಅನ್ನದಾತರಿಗೂ ಸ್ಪೂರ್ತಿ’ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.