ಲಖನೌ: ಉತ್ತರ ಪ್ರದೇಶ ಹತ್ರಾಸ್ನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ದೇಶಾದ್ಯಂತ ಕಿಚ್ಚು ಹೊತ್ತಿಸಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿರುವುದು ಒಂದೆಡೆಯಾದರೆ..ಇನ್ನೊಂದೆಡೆ ಉತ್ತರ ಪ್ರದೇಶ ಸರ್ಕಾರ, ಪೊಲೀಸರ ನಡವಳಿಕೆಯನ್ನು ವಿರೋಧಿಸಿ ಆಕ್ರೋಶ ವ್ಯಕ್ತವಾಗುತ್ತಿದೆ.
ಗ್ಯಾಂಗ್ ರೇಪ್ ಮಾಡಿದ ನಾಲ್ವರು ಆರೋಪಿಗಳಾದ ಸಂದೀಪ್, ರಾಮು, ಲವಕುಶ್ ಮತ್ತು ರವಿ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈಗಾಗಲೇ ನೀಡಿದ್ದಾರೆ.
ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂಬ ಕೂಗು ದೇಶಾದ್ಯಂತ ಹೆಚ್ಚುತ್ತಿರುವ ಬೆನ್ನಲ್ಲೇ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿವೆ. ಅದು ವ್ಯಕ್ತಿಯೋರ್ವ ಬಿಜೆಪಿಯ ಪ್ರಮುಖ ನಾಯಕರೊಂದಿಗೆ ಇರುವ ಚಿತ್ರ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಇರುವ ಆತ ಹತ್ರಾಸ್ ಅತ್ಯಾಚಾರ ಆರೋಪಿಗಳಲ್ಲೋರ್ವನಾದ ಸಂದೀಪ್ನ ತಂದೆ ಎಂದು ಪ್ರತಿಪಾದಿಸಲಾಗಿದೆ.
ಫೋಟೋಗಳನ್ನು ಶೇರ್ ಮಾಡಿರುವ ಫೇಸ್ಬುಕ್ ಬಳಕೆದಾರನೋರ್ವ, ಇಲ್ಲಿ ನೋಡಿ...ಹತ್ರಾಸ್ ಗ್ಯಾಂಗ್ರೇಪ್ ಆರೋಪಿ ಸಂದೀಪ್ ತಂದೆ ಯೋಗಿ ಜೀ..ಮೋದಿ ಜೀ ಅವರೊಂದಿಗೆ ಇದ್ದಾರೆ. ಅಂದ ಮೇಲೆ ನಾಲ್ವರೂ ಆರೋಪಿಗಳು ಸುರಕ್ಷಿತ, ಅವರಿಗೆ ಯಾವುದೇ ಕಠಿಣ ಶಿಕ್ಷೆ ನೀಡದೆ ರಕ್ಷಿಸಲಾಗುತ್ತದೆ ಎಂದಾಯಿತು ಎಂದು ಕ್ಯಾಪ್ಷನ್ ಬರೆದಿದ್ದಾರೆ.
ಆದರೆ ಇಂಡಿಯಾ ಟುಡೆ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಂನ ಫ್ಯಾಕ್ಟ್ಚೆಕ್ನಿಂದ ವಾಸ್ತವಾಂಶ ಬಯಲಾಗಿದೆ. ಬಿಜೆಪಿಯ ಪ್ರಮುಖ ನಾಯಕರೊಂದಿಗೆ ಇರುವ ಆ ವ್ಯಕ್ತಿ ಸಂದೀಪ್ ತಂದೆ ಅಲ್ಲ. ಹತ್ರಾಸ್ ಗ್ಯಾಂಗ್ ರೇಪ್ ಆರೋಪಿಗಳಿಗೂ, ಆತನಿಗೂ ಯಾವುದೇ ಸಂಬಂಧವಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.
ವೈರಲ್ ಫೋಟೋದಲ್ಲಿ ಇರುವ ವ್ಯಕ್ತಿಯ ಹೆಸರು ಶ್ಯಾಮ್ ಪ್ರಕಾಶ್ ದ್ವಿವೇದಿ. ಉತ್ತರ ಪ್ರದೇಶದ ಬಿಜೆಪಿ ನಾಯಕ. ಬಿಜೆಪಿ ಯುವ ಮೋರ್ಚಾದ ಕಾಶಿ ವಿಭಾಗದ ಪ್ರಾದೇಶಿಕ ಉಪಾಧ್ಯಕ್ಷ ಎನ್ನಲಾಗಿದೆ.
ವೈರಲ್ ಫೋಟೋಗಳನ್ನು ರಿವರ್ಸ್ ಇಮೇಜ್ ಸರ್ಚ್ಗೆ ಹಾಕಿ ಪರಿಶೀಲನೆ ನಡೆಸಿದಾಗ, ಈ ಫೋಟೋಗಳು ಹಿಂದೆ ಡಾ. ಶ್ಯಾಮ್ ಪ್ರಕಾಶ್ ದ್ವಿವೇದಿ ಅವರ ಫೇಸ್ಬುಕ್ ಅಕೌಂಟ್ನಲ್ಲಿಯೇ ಶೇರ್ ಆಗಿದ್ದು ಕಂಡುಬಂದಿದೆ. ಹಾಗೇ ಇಂಡಿಯಾ ಟುಡೆ ಫ್ಯಾಕ್ಟ್ಚೆಕ್ನಲ್ಲಿ, ಹತ್ರಾಸ್ ಆರೋಪಿ ಸಂದೀಪ್ ತಂದೆಯ ಹೆಸರು ನರೇಂದ್ರ ಎಂಬುದು ಗೊತ್ತಾಗಿದೆ. ಇದೀಗ ಸಂದೀಪ್ನಿಂದ ಅತ್ಯಾಚಾರಕ್ಕೀಡಾದ ಯುವತಿಯ ಅಜ್ಜನ ಮೇಲೆ ನರೇಂದ್ರ 2001ರಲ್ಲಿ ಹಲ್ಲೆ ಮಾಡಿದ್ದ ಎಂಬ ಸತ್ಯ ಬೆಳಕಿಗೆ ಬಂದಿದೆ. (ಏಜೆನ್ಸೀಸ್)
ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿ ಪಕ್ಕದಲ್ಲಿರುವ ಇವರು ಹತ್ರಾಸ್ ಗ್ಯಾಂಗ್ ರೇಪ್ ಆರೋಪಿಯ ತಂದೆ ಅಲ್ವೇ ಅಲ್ಲ...