ನ್ಯೂಸ್

ಒಗ್ಗಟ್ಟಿನಿಂದಿರಬೇಕಾದ ಸಮಯವಿದು, ಆಗಿದ್ದೆಲ್ಲ ಕೆದಕುವುದಲ್ಲ: ಕಾಂಗ್ರೆಸ್ ಗೆ ಆರ್.ಅಶೋಕ್ ಸಲಹೆ |Tiranga Yatra from 15th in support of the Army

ಬೆಂಗಳೂರು: ಕಾಶ್ಮೀರ ಸಮಸ್ಯೆ ದೀರ್ಘಾವಧಿವರೆಗೆ ಉಳಿಯಲು ಯಾರು ಕಾರಣ ?. ಪಿಒಕೆ ಬಿಟ್ಟು ಕೊಟ್ಟಿದ್ದೇಕೆ ? ಏಕಪಕ್ಷೀಯ ಸಿಂಧೂ ನದಿ ಒಪ್ಪಂದಕ್ಕೆ ಸಹಿ ಹಾಕಿದ್ಯಾರು ? 1971ರ ಯುದ್ಧ ಗೆದ್ದ ಬಳಿಕ ಶರಣಾಗಿದ್ದ 93 ಸಾವಿರ ಸೈನಿಕರನ್ನು ಬಿಟ್ಟಿದ್ಯಾರು? ಈ ರೀತಿಯ ಪ್ರಶ್ನೆಗಳನ್ನು ನಾವು ಕೇಳಲು ಬಯಸುವುದಿಲ್ಲ. ಆಗಿದ್ದೆಲ್ಲ ಕೆದಕುವುದಲ್ಲ, ಒಗ್ಗಟ್ಟಿನಿಂದಿರಬೇಕಾದ ಸಮಯವಿದು. ಕಾಂಗ್ರೆಸ್ ಮಿತ್ರರು ಒಡಕಿನ ಮಾತಾಡಬಾರದು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಸಲಹೆ ನೀಡಿದರು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಸಿಂಧೂರ ಕಾರ್ಯಾಚರಣೆ ವಿಷಯದಲ್ಲಿ ಮೂರು ಸೇನಾ ಪಡೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಸೇನಾಧಿಕಾರಿಗಳು ನೀಡಿದ ಅಭಿಪ್ರಾಯದಂತೆ ಕದನ ವಿರಾಮ ನಿರ್ಧಾರಕ್ಕೆ ಪ್ರಧಾನಿ ಸಮ್ಮತಿಸಿದ್ದು, ಈ ಬಗ್ಗೆ ಟೀಕಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಸಾಮಾನ್ಯ ಜ್ಞಾನ ಇರಬೇಕು ಎಂದು ತಿವಿದರು.

ಕದನ ವಿರಾಮವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. ಆದರೆ ಅವರದೇ ಸಚಿವ ಸಂಪುಟದ ಸದಸ್ಯರು ಯುದ್ಧ ಮುಂದುವರಿಸಬೇಕು ಎನ್ನುತ್ತಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಮಧ್ಯೆ ಒಮ್ಮತವಿದ್ಸಂತಿಲ್ಲ. ಹಿಂದೆ ಯುದ್ಧ ಬೇಡವೆಂದರು, ಆಪರೇಷನ್ ಸಿಂಧೂರ ಶುರುವಾದಾಗ ಗಾಂಧಿಯವರ ಶಾಂತಿ ಸಂದೇಶ ಹಂಚಿದರು. ಕದನ ವಿರಾಮ ಘೋಷಿಸಿದರೆ ಯುದ್ಧ ಮುಂದುವರಿಸಿ ಎನ್ನುತ್ತಿದ್ದು, ಆ ಪಕ್ಷದ ನಿಲುವಿನಲ್ಲೇ ಸ್ಪಷ್ಟತೆ ಇಲ್ಲವೆಂದು ಆರ್.ಅಶೋಕ್ ಕುಟುಕಿದರು.

15ರಿಂದ ತಿರಂಗಾ ಯಾತ್ರೆ

ಭಯೋತ್ಪಾದನೆ ಸಹಿಸಲ್ಲ, ತಂಟೆಗೆ ಬಂದರೆ ಸುಮ್ಮನಿರಲ್ಲ ಎಂಬ ಸ್ಪಷ್ಟ ಹಾಗೂ ದಿಟ್ಟ ಸಂದೇಶವನ್ನು ಜಗತ್ತಿಗೆ ಆಪರೇಷನ್ ಸಿಂಧೂರ ಮೂಲಕ ನಮ್ಮ ಸೇನೆ ರವಾನಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೈನಿಕರಿಗೆ ಬೆಂಬಲಿಸಿ, ದೇಶ ಒಗ್ಗಟ್ಟಾಗಿದೆ ಎಂದು ಸಾರಲು ಪಕ್ಷಾತೀತವಾದ ತಿರಂಗಾ ಯಾತ್ರೆ 15 ರಿಂದ 23ರವರೆಗೆ ರಾಜ್ಯಾದ್ಯಂತ ನಡೆಯಲಿದೆ ಎಂದು ಆರ್.ಅಶೋಕ್ ತಿಳಿಸಿದರು.

ಭಯೋತ್ಪಾದಕರ ನೆಲೆಗಳು, ಪಾಕಿಸ್ತಾನದ 11 ಏರ್ ಬೇಸ್ ಗಳನ್ನು ಧ್ವಂಸಗೊಳಿಸುವ ಮೂಲಕ ಭಾರತದ ಶಕ್ತಿ ತೋರಿಸಿ, ಪಾಕಿಸ್ತಾನಕ್ಕೂ ಪಾಠ ಕಲಿಸಲಾಗಿದೆ. ಈ ಸಂದರ್ಭದಲ್ಲಿ ಭಾರತೀಯರೆಲ್ಲ ಒಂದಾಗಿ ನಮ್ಮ ಸೇನೆ ಬೆಂಬಲಕ್ಕೆ ನಿಂತಿದ್ದೇವೆ ಎಂಬುದನ್ನು ವಿಶ್ವಕ್ಕೆ ತಿಳಿಸಲು ಪಕ್ಷಾತೀತವಾಗಿ ತಿರಂಗಾ ಯಾತ್ರೆ ಸಂಘಟಿಸಲಾಗುತ್ತಿದ್ದು, ರಾಷ್ಟ್ರ ಧ್ವಜದಡಿ ಯಾತ್ರೆ ನಡೆಯಲಿದ್ದು, ಪಕ್ಷದ ಬ್ಯಾಡ್ಜ್ ಬಳಸುವುದಿಲ್ಲ ಎಂದು ಸ್ಪಷ್ಟಪಡಿಸಿದರು‌.

ಬೆಂಗಳೂರಿನ ಮಲ್ಲೇಶ್ವರದ ಶಿರೂರು ಪಾರ್ಕ್ ನಿಂದ 18ನೇ ಕ್ರಾಸ್ ವರೆಗೆ 15ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. 16 ಮತ್ತು 17 ರಂದು ಜಿಲ್ಲಾ ಕೇಂದ್ರಗಳು, 18 ರಿಂದ 23ರವರೆಗೆ ತಾಲೂಕು, ಹೋಬಳಿ, ಹಳ್ಳಿಗಳಲ್ಲಿ ಯಾತ್ರೆ ನಡೆಯಲಿದ್ದು, ಆ ಮೂಲಕ ನಮ್ಮ ಸೇನೆ ಹಾಗೂ ಪ್ರಧಾನಿ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಆರ್.ಅಶೋಕ್ ವಿವರಿಸಿದರು.