ಹುಬ್ಬಳ್ಳಿ: ಟಿಕೆಟ್ ಸಿಗದ ಕಾರಣಕ್ಕೆ ಹತಾಶರಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಜಗದೀಶ ಶೆಟ್ಟರ್ ಅವರ ಮುಂದಿನ ನಿಲುವು ಏನು ಎಂಬುದು ಇನ್ನೂ ಖಚಿತವಾಗಿಲ್ಲ. ಈ ಮಧ್ಯೆ ಅವರ ಸಹೋದರ, ವಿಧಾನಪರಿಷತ್ ಸದಸ್ಯರೂ ಆಗಿರುವ ಪ್ರದೀಪ ಶೆಟ್ಟರ್ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿರುವ ಅವರು, ಅವರ ನಿಲುವು ಬೇರೆ, ವೈಯಕ್ತಿಕ ಸಂಬಂಧ ಬೇರೆ. ನಾನು ದಿನಾ ಈ ಮನೆಗೆ ಬರುತ್ತೇನೆ, ಊಟ ಮಾಡಿ ಹೋಗುತ್ತೇನೆ. ವೈಯಕ್ತಿಕ ಬೇರೆ, ಪಕ್ಷ ಬೇರೆ ಎಂದು ಸಹೋದರ ಜಗದೀಶ ಶೆಟ್ಟರ್ ಅವರ ನಿರ್ಧಾರಕ್ಕೆ ಪ್ರತಿಯಾಗಿ ತಮ್ಮ ನಿಲುವನ್ನು ತಿಳಿಸಿದ್ದಾರೆ.
ಅವರಿನ್ನೂ ಭಾರತೀಯ ಜನತಾ ಪಕ್ಷದಲ್ಲಿಯೇ ಇದ್ದಾರೆ. ಪಕ್ಷದ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ. ಇನ್ನೂ 20ರ ವರೆಗೂ ಸಮಯ ಇದೆ, ಅವರಿನ್ನೂ ಯಾವುದೇ ತೀರ್ಮಾನ ಮಾಡಿಲ್ಲ ಎಂದಿರುವ ಪ್ರದೀಪ ಶೆಟ್ಟರ್, ನಾನು ಭಾರತೀಯ ಜನತಾ ಪಕ್ಷದಲ್ಲೇ ಇರುವುದಾಗಿ ಹೇಳಿದ್ದಾರೆ.
ಕಾಂಗ್ರೆಸ್-ಜೆಡಿಎಸ್ನವರು ಆಹ್ವಾನ ಕೊಟ್ಟಿದ್ದಾರೆ. ಅದು ಜಗದೀಶ ಶೆಟ್ಟರ್ ಬಿಟ್ಟ ನಿರ್ಧಾರ. ಅದಾಗ್ಯೂ ಅವರ ಜತೆ ಇನ್ನೂ ಯಾರೂ ಮಾತನಾಡಿಲ್ಲ ಎಂದ ಪ್ರದೀಪ್ ಶೆಟ್ಟರ್ ತಿಳಿಸಿದರು.