ಉದ್ಯಮಿಗಳು, ನೀತಿ ನಿರೂಪಕರು ಮತ್ತು ವಿದೇಶಿ ಹೂಡಿಕೆದಾರರ ಸಮಾವೇಶ ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು, ‘1998ರಲ್ಲಿ ಪರಮಾಣು ಪರೀಕ್ಷೆ ನಡೆಸಿದಾಗಲೂ ಇಂತಹ ನಿರ್ಬಂಧಗಳನ್ನು ಭಾರತದ ಮೇಲೆ ವಿಧಿಸಲಾಗಿತ್ತು. ಅದಕ್ಕೆ ಆಗ ಪ್ರತಿಕ್ರಿಯಿಸಿದ್ದ ಪ್ರಧಾನಿ ವಾಜಪೇಯಿ ‘ಕಾಡು ಹುಲ್ಲಿನಿಂದ ಮಾಡಿದ ರೊಟ್ಟಿ ತಿಂದು ಹೋರಾಡುವ ದೇಶ ಭಾರತ. ಇಂತಹ ನಿರ್ಬಂಧಗಳಿಂದ ಯಾವ ಪರಿಣಾಮವೂ ಆಗುವುದಿಲ್ಲ’ ಎಂದಿದ್ದರು. ನಾವು ದೃಢವಾಗಿ ನಿಂತೆವು. ನಂತರ ನಿರ್ಬಂಧಗಳು ಒಂದೊಂದಾಗಿ ಮರೆಯಾದವು’ ಎಂದು ಹೇಳಿದರು.
ಇಂದಿನ ನಿರ್ಬಂಧಗಳು, ತೆರಿಗೆ ಯುದ್ಧ ಎಷ್ಟು ಕಾಲ ಇರುತ್ತದೆಯೋ ಗೊತ್ತಿಲ್ಲ. ಆದರೆ ಭಾರತ ಆತ್ಮವಿಶ್ವಾಸ ತೋರಿದರೆ, ಈ ಸವಾಲೇ ಒಂದು ಅವಕಾಶ. ಬಳಸಿಕೊಳ್ಳುವುದೋ ಅಥವಾ ಭಯಪಡುವುದೋ ನಮ್ಮ ಕೈಯಲ್ಲಿದೆ. ಸರ್ಕಾರ, ಉದ್ಯಮ ಸಂಸ್ಥೆಗಳು ಮತ್ತು ಸಾಮಾನ್ಯ ಜನರು ಒಟ್ಟಾಗಿ ಒಂದೇ ದಿಕ್ಕಿನಲ್ಲಿ ಯೋಚಿಸಿ ಈ ಸವಾಲನ್ನು ವಿಶ್ವಾಸದಿಂದ ಎದುರಿಸಬೇಕು ಎಂದು ರಾಮ್ಲಾಲ್ ಹೇಳಿದರು.
ಹನುಮಂತನಿಗೆ ಅವನ ಶಕ್ತಿಯನ್ನು ನೆನಪಿಸಿಕೊಟ್ಟಾಗ ಆತ ಸಮುದ್ರವನ್ನೇ ದಾಟಿದ. ಭಯಪಡುವುದು ಭಾರತದ ಸ್ವಭಾವವಲ್ಲ. ಸವಾಲುಗಳಲ್ಲಿ ಅವಕಾಶಗಳನ್ನು ಕಂಡುಕೊಂಡು ಬಳಸಿಕೊಳ್ಳುವುದು ಭಾರತದ ಸ್ವಭಾವ. ನಾವು ಅವಕಾಶಗಳನ್ನು ಸಂಕಲ್ಪವಾಗಿ ಪರಿವರ್ತಿಸುತ್ತೇವೆ. ವಿಶ್ವದಲ್ಲಿ ಎಲ್ಲಿಯಾದರೂ ನಾಲ್ಕನೇ ಕೈಗಾರಿಕಾ ಕ್ರಾಂತಿ ಸಂಭವಿಸಿದರೆ, ಅದನ್ನು ಮುನ್ನಡೆಸುವುದು ಭಾರತ. ಸ್ವಾವಲಂಬನೆಗಾಗಿ ಸ್ವದೇಶಿ ಉತ್ಪನ್ನಗಳನ್ನು ಬಳಸಕೊಳ್ಳಬೇಕು. ಪ್ರಚಾರ ಮಾಡಬೇಕು. ಸರ್ಕಾರ ಉದ್ಯಮಸ್ನೇಹಿ ನೀತಿಗಳನ್ನು ರೂಪಿಸಬೇಕು. ದೇಶದ ಉದ್ಯಮ ಬೆಳೆಯಲು, ರಫ್ತು ಹೆಚ್ಚಲು, ಆಮದು ಕಡಿಮೆಯಾಗಲು ಎಲ್ಲ ಉದ್ಯಮ ಸಂಸ್ಥೆಗಳು ಪಾತ್ರ ವಹಿಸಬೇಕು ಎಂದು ಹೇಳಿದರು.
ವಾಷಿಂಗ್ಟನ್: ಭಾರತದ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸುವಂತೆ ಯೂರೋಪಿಯನ್ ದೇಶಗಳಿಗೆ ಅಮೆರಿಕ ತಾಕೀತು ಮಾಡಿದೆ. ‘ರಷ್ಯಾದಿಂದ ಭಾರತ ತೈಲ ಖರೀದಿ ಸಂಪೂರ್ಣ ನಿಲ್ಲಿಸಬೇಕೆಂದರೆ ಐರೋಪ್ಯ ಒಕ್ಕೂಟವೂ ಕಠಿಣ ನಿರ್ಬಂಧಗಳನ್ನು ವಿಧಿಸಬೇಕು ಎಂಬುದಾಗಿ ಶ್ವೇತಭವನ ಒತ್ತಡ ಹೇರಿದೆ’ ಎಂದು ಮೂಲಗಳು ತಿಳಿಸಿವೆ. ಐರೋಪ್ಯ ಒಕ್ಕೂಟದಲ್ಲಿ ಒಟ್ಟು 27 ರಾಷ್ಟ್ರಗಳಿವೆ. ರಷ್ಯಾದಿಂದ ಭಾರತ ತೈಲ ಖರೀದಿಸುವುದನ್ನು ಐರೋಪ್ಯ ಒಕ್ಕೂಟವೂ ಈ ಹಿಂದೆ ವಿರೋಧಿಸಿತ್ತು.
‘ಟ್ರಂಪ್ ವಿವಿಧ ದೇಶಗಳ ಮೇಲೆ ಮನಬಂದಂತೆ ತೆರಿಗೆ ವಿಧಿಸುತ್ತಿರುವುದು ಅವಿವೇಕದ ಮತ್ತು ಅಜ್ಞಾನದ ಕ್ರಮವಾಗಿದೆ. ಈ ರೀತಿ ನಡೆಸಿಕೊಳ್ಳಲು ಭಾರತವೇನು ಶಾಲೆಗೆ ಹೋಗುವ ಮಗುವೇ?’ ಎಂದು ಪ್ರಶ್ನಿಸಿರುವ ಅಮೆರಿಕದ ಪ್ರಮುಖ ರಾಜಕೀಯ ವಿಮರ್ಶಕ ಮತ್ತು ಪತ್ರಕರ್ತ ರಿಕ್ ಸ್ಯಾಂಚೆಜ್, ಇದಕ್ಕಾಗಿ ಭಾರತದ ಕ್ಷಮೆ ಕೋರಿದ್ದಾರೆ. ‘ಟ್ರಂಪ್ ತೆರಿಗೆ ನೀತಿ ಅವೈಜ್ಞಾನಿಕ, ವಿಡಂಬನಾತ್ಮಕ. ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಮಧ್ಯಸ್ಥಿಕೆಗೆ ಅವಕಾಶ ಸಿಗದ್ದಕ್ಕೆ ಟ್ರಂಪ್ಗೆ ಕೋಪ. ಅಮೆರಿಕ ಯಾರಿಂದ ತೈಲ ಖರೀದಿಸಬೇಕೆಂದು ಭಾರತ ಹೇಳುತ್ತಿದೆಯೇ? ಭಾರತ ಯಾರಿಂದ ಖರೀದಿಸಬಾರದು ಎಂಬುದನ್ನು ಅಮೆರಿಕ ಏಕೆ ಹೇಳಬೇಕು? ಜಾಗತಿಕ ದಕ್ಷಿಣದ ರಾಷ್ಟ್ರಗಳಾದ ಭಾರತ, ಚೀನಾ, ರಷ್ಯಾ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ಶಕ್ತಿಶಾಲಿಯಾಗಿ ಹೊರಹೊಮ್ಮಲು, ಭಾರತವು ಚೀನಾ, ರಷ್ಯಾದೊಂದಿಗೆ ಆರ್ಥಿಕ ಸಂಬಂಧ ಹೆಚ್ಚಿಸಿಕೊಳ್ಳಲು ಟ್ರಂಪ್ ಕಾರಣರಾಗುತ್ತಿದ್ದಾರೆ’ ಎಂದು ವಿಶ್ಲೇಷಿಸಿದ್ದಾರೆ.