ಮುಂಬೈ: ಉದ್ಯಮಿ ಮುಕೇಶ್ ಅಂಬಾನಿಯವರ ಮುಂಬೈ ನಿವಾಸ 'ಆಂಟೆಲಿನಾ' ಬಳಿ ಗುರುವಾರ ಸ್ಫೋಟಕ ತುಂಬಿರುವ ಕಾರೊಂದು ಕಾಣಿಸಿಕೊಂಡಿತ್ತು. ಈ ಕಾರ್ನ್ನು ಪೊಲೀಸರು ತಪಾಸಣೆ ನಡೆಸಿದಾಗ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿದೆ.
'ಇದು ಟ್ರೈಲರ್ ಮಾತ್ರ, ಸಿನಿಮಾ ಬಾಕಿ ಇದೆ' ಎಂದು ಇಂಗ್ಲೀಷ್ನಲ್ಲಿ ಬೆದರಿಕೆ ಹಾಕಿರುವ ಪತ್ರ ಸ್ಕಾರ್ಪಿಯೋ ಕಾರ್ನಲ್ಲಿ ಪತ್ತೆಯಾಗಿದೆ. ಮುಕೇಶ್ ಅಂಬಾನಿ, ಅವರ ಪತ್ನಿ ನಿತಾ ಅಂಬಾನಿ ಮತ್ತು ಮಗಳನ್ನು ಕೊಲ್ಲುವ ಬೆದರಿಕೆ ಹಾಕಲಾಗಿದೆ. ಈ ಕುರಿತು ಗಾಂದೇವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅಲ್ಲದೇ ಕೃತ್ಯಕ್ಕೆ ಬಳಸಿರುವ ಸ್ಕಾರ್ಪಿಯೋ ಕಾರ್ ನಂಬರ್ ಪ್ಲೇಟ್ ನಕಲಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಮುಂಬೈನ ಪೆಡ್ಡಾರ್ ರಸ್ತೆಯಲ್ಲಿರುವ ಆಂಟಿಲಿಯಾ ನಿವಾಸದ ಬಳಿ ಸ್ಕಾರ್ಪಿಯೋ ಗಾಡಿ ಒಂದು ಸಾಕಷ್ಟು ಸಮಯದಿಂದ ನಿಂತಿದ್ದನ್ನು ಅಂಬಾನಿಯವರ ಭದ್ರತಾ ಸಿಬ್ಬಂದಿ ನೋಡಿದ್ದರು. ತಕ್ಷಣ ಆ ಮಾಹಿತಿಯನ್ನು ಮುಂಬೈ ಪೊಲೀಸರಿಗೆ ಕೊಡಲಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಬಾಂಬ್ ನಿಗ್ರಹ ದಳಕ್ಕೂ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದರು. ಕಾರಿನ ಒಳಗೆ ಪರಿಶೀಲನೆ ನಡೆಸಿದಾಗ ಅದರಲ್ಲಿ 20 ಜೆಲೆಟಿನ್ ಸ್ಟಿಕ್‌ಗಳು ಕಾಣಿಸಿಕೊಂಡಿದ್ದವು. ಇವುಗಳನ್ನು ಸ್ಫೋಟಕ ತಯಾರು ಮಾಡಲು ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.