ಪುಷ್ಕರ್: ಇತ್ತೀಚಿನ ವರ್ಷಗಳಲ್ಲಿ ಬಹುತೇಕ ರೈತರು ಕೃಷಿಯ ಜೊತೆಗೆ ಹೈನುಗಾರಿಕೆಯನ್ನು (Animal Husbandary) ಸಹ ಮಾಡುತ್ತಾರೆ. ಸ್ಥಳೀಯ ದೇಶಿ ತಳಿಯ ಎಮ್ಮೆಗಳು (Buffalo) ಕಡಿಮೆ ಹಾಲನ್ನು ನೀಡುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ರೈತರು ಹರಿಯಾಣ ಮೂಲದ ಮುರ್ರಾ ತಳಿಯತ್ತ ಹೆಚ್ಚಿನ ಒಲವು ತೋರುತ್ತಿದ್ದು, ಮುರ್ರಾ ತಳಿಯ ಎಮ್ಮೆ ಹಾಗೂ ಕೋಣಕ್ಕೆ ದೇಶೀಯ ಹಾಗೂ ವಿದೇಶದ ಮಾರುಕಟ್ಟೆಯಲ್ಲಿರುವ ಬೆಲೆ ಮಾತ್ರ ಹೇಳಿ ತೀರಲಾಗದು. ಇದೀಗ ಮುರ್ರಾ ತಳಿಯ ಕೋಣವೊಂದರ ಬೆಲೆ 23 ಕೋಟಿ ರೂಪಾಯಿ ಎಂದು ಹೇಳಲಾಗಿದ್ದು, ಇದನ್ನು ಖರೀದಿಸಲು ಜನರು ಮುಗಿಬಿದ್ದಿದ್ದಾರೆ.
ರಾಜಸ್ಥಾನದ ಪುಷ್ಕರ್ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಜಾನುವಾರು ಮೇಳದಲ್ಲಿ (Pushkar Animal Fair) ಹರಿಯಾಣದ ಅನ್ಮೋಲ್ ಹೆಸರಿನ ಕೋಣದ ಬೆಲೆ 23 ಕೋಟಿ ರೂಪಾಯಿ ಎಂದು ಹೇಳಲಾಗಿದ್ದು, ಈ ಹಣಕ್ಕೆ 10 ಬೆಂಜ್ ಹಾಗೂ ಎರಡು ರೋಲ್ಸ್ ರಾಯ್ಸ್ ಕಾರು ಬರುತ್ತದೆ ಎಂದು ಹೇಳಲಾಗಿದೆ. ಈ ಕೋಣವನ್ನು (Buffalo) ಖರೀದಿಸಲು ಜನರು ಮುಂದಾಗಿದ್ದು, ಇದರ ಮಾಲೀಕ ಮಾತ್ರ ಯಾವುದೇ ಕಾರಣಕ್ಕೂ ಕೋಣವನ್ನು ಮಾರಾಟ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಬರೋಬ್ಬರಿ 1500 ಕೆಜಿ ತೂಕದ ಎಂಟು ವರ್ಷ ವಯಸ್ಸಿನ ಅನ್ಮೋಲ್ (Anmol) ಹೆಸರಿನ ಈ ಕೋಣವು (Buffalo) ಹರಿಯಾಣ ಸೇರಿದಂತೆ ಉತ್ತರಭಾರತದ ಅನೇಕ ಕಡೆ ನಡೆಯುವ ಜಾನುವಾರು ಹಾಗೂ ಕೃಷಿ ಮೇಳದಲ್ಲಿ ಭಾಗಿಯಾಗುವ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದೆ. ಇದರ ಮಾಲೀಕರಾದ ಪಾಲ್ಮಿಂದ್ರ ಗಿಲ್ (Palmindra Gill) ಪ್ರತಿನಿತ್ಯ ಇದಕ್ಕೆ 4 ಕೆಜಿ ತಾಜಾ ದಾಳಿಂಬೆ, 30 ಬಾಳೆಹಣ್ಣುಗಳು, 20 ಮೊಟ್ಟೆ, ಕಾಲು ಕಿಲೋಗ್ರಾಂ ಬಾದಾಮಿ ನೀಡುತ್ತಾರೆ. ಇದಲ್ಲದೆ ದಿನಕ್ಕೆ ಎರಡು ಬಾರಿ ಸಾಸಿವೆ ಮತ್ತು ಬಾದಾಮಿ ಎಣ್ಣೆಯನ್ನು ಬಳಸಿ ಮಸಾಜ್ ಮಾಡಿ, ಸ್ನಾನ ಮಾಡಿಸಲಾಗುತ್ತದೆ.
ಪುಷ್ಕರ ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾದ ಈ ಎಮ್ಮೆಯ ಖರೀದಿಗಾಗಿ ಸಾಕಷ್ಟು ಜನ ಮುಂದಾಗಿದ್ದು, ಆದರೆ ಅದರ ಮಾಲೀಕ ಪಾಲ್ಮಿಂದ್ರ ಗಿಲ್ ಮಾತ್ರ ಅದನ್ನು ಮಾರಾಟ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಭಾರತದ ಅತ್ಯಂತ ದುಬಾರಿ ಕೋಣ ಎಂಬ ಖ್ಯಾತಿಯನ್ನು ಗಳಿಸಿದೆ.