Nose breathing health benefits: ಮುಖದ ಅಂದವನ್ನು ಹೆಚ್ಚಿಸುವ ಮೂಗು, ಮಹಿಳೆಯರಿಗೆ ಮೂಗುಬೊಟ್ಟು ಧರಿಸಿ ಚೆಂದ ಹೆಚ್ಚಿಸಿಕೊಳ್ಳುವ ಅಂಗವೂ ಹೌದು. ಆದರೆ ಮೂಗಿನ ಕೆಲಸ ಕೇವಲ ಉಸಿರಾಟಕ್ಕೆ ಮಾತ್ರ ಸೀಮಿತವಲ್ಲ; ಇದು ನಮ್ಮ ಶ್ವಾಸಕೋಶವನ್ನು ಕಾಯುವ ನಿಸರ್ಗದ ಸ್ವಯಂಚಾಲಿತ ರಕ್ಷಣಾ ಕವಚ. ದೇಹದ ಒಳಗೆ ಇದು ಹೇಗೆಲ್ಲ ಕೆಲಸ ಮಾಡುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೂಗಿನ ಒಳಗಡೆ ಇರುವ ಸಣ್ಣ ಸಣ್ಣ ಕೂದಲುಗಳನ್ನು 'ವೈಬ್ರಿಸೆ' ಅಂತೀವಿ. ನಾವು ಉಸಿರು ತೆಗೆದುಕೊಂಡಾಗ ಗಾಳಿಯಲ್ಲಿರೋ ಧೂಳು, ಮರಳು ಮತ್ತು ದೊಡ್ಡ ಕಸದ ಕಣಗಳು ನೇರವಾಗಿ ಶ್ವಾಸಕೋಶದೊಳಗೆ ಹೋಗದಂತೆ ಇವು ಅಲ್ಲೇ ತಡೆದು ಫಿಲ್ಟರ್ ಮಾಡುತ್ತವೆ.
ಮೂಗಿನ ಒಳಭಾಗದಲ್ಲಿ ಸದಾ ಒಂದು ತರಹದ ಜಿಗುಟಾದ ದ್ರವ (ಲೋಳೆ) ಇರುತ್ತೆ. ಇದರ ಜತೆ 'ಸೀಲಿಯಾ' ಅನ್ನುವ ಸೂಕ್ಷ್ಮ ರೋಮಗಳಿರುತ್ತವೆ. ಗಾಳಿಯಲ್ಲಿರೋ ಬ್ಯಾಕ್ಟೀರಿಯಾ, ವೈರಸ್‌ಗಳು ಈ ಲೋಳೆಗೆ ಅಂಟಿಕೊಳ್ಳುತ್ತವೆ. ಸೀಲಿಯಾಗಳು ಈ ಲೋಳೆಯನ್ನು ಗಂಟಲಿನ ಕಡೆಗೆ ತಳ್ಳುತ್ತವೆ. ಅಲ್ಲಿಂದ ಅದು ಹೊಟ್ಟೆಗೆ ಸೇರಿ, ಹೊಟ್ಟೆಯಲ್ಲಿರುವ ಆಮ್ಲದಿಂದ ಸಂಪೂರ್ಣವಾಗಿ ನಾಶವಾಗುತ್ತೆ.
ಹೊರಗಿನ ವಾತಾವರಣದ ಗಾಳಿ ತುಂಬಾ ತಂಪಾಗಿರಬಹುದು ಅಥವಾ ಬಿಸಿ ಇರಬಹುದು. ಮೂಗಿನ ಒಳಗಿನ ಕೋಣೆಗಳು ರಕ್ತನಾಳಗಳಿಂದ ತುಂಬಿದ್ದು, ಥರ್ಮಲ್ ಚೇಂಬರ್‌ನ ತರ ಕೆಲಸ ಮಾಡುತ್ತವೆ. ತಂಪಾದ ಗಾಳಿಯು ಶ್ವಾಸಕೋಶದ ಸೂಕ್ಷ್ಮ ಜಾಗವನ್ನು ತಲುಪುವ ಮುನ್ನ, ಮೂಗು ಅದನ್ನು ದೇಹದ ತಾಪಮಾನಕ್ಕೆ ತಕ್ಕಂತೆ ಬೆಚ್ಚಗಾಗಿಸಿ ತೇವಾಂಶ ನೀಡುತ್ತೆ.
ಮೂಗಿನ ಮೂಲಕ ಉಸಿರಾಡುವಾಗ ಸೈನಸ್ ಕೋಣೆಗಳಲ್ಲಿ 'ನೈಟ್ರಿಕ್ ಆಕ್ಸೈಡ್' ಅನಿಲ ಉತ್ಪತ್ತಿಯಾಗುತ್ತೆ. ಇದು ಶ್ವಾಸಕೋಶದ ರಕ್ತನಾಳಗಳನ್ನು ವಿಸ್ತರಿಸಿ, ರಕ್ತವು ಗಾಳಿಯಿಂದ ಹೆಚ್ಚಿನ ಆಮ್ಲಜನಕವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತೆ. ಜೊತೆಗೆ ನೈಸರ್ಗಿಕ ವೈರಸ್ ನಿರೋಧಕವಾಗಿಯೂ ಇದು ಕೆಲಸ ಮಾಡುತ್ತೆ.
ಒಟ್ಟಿನಲ್ಲಿ, ಬಾಯಿಯ ಮೂಲಕ ಉಸಿರಾಡುವುದಕ್ಕಿಂತ ಮೂಗಿನ ಮೂಲಕ ಉಸಿರಾಡುವುದು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ನಮ್ಮ ದೇಹದ ಆರೋಗ್ಯ ಕಾಪಾಡುವ ನೈಸರ್ಗಿಕ ರಕ್ಷಕ.