ಬಿಹಾರ: ಸಾಮಾನ್ಯವಾಗಿ ಜನರು ಪ್ರತಿದಿನ ಬೆಳಿಗ್ಗೆ ಹಾಲಿಗಾಗಿ ಅಂಗಡಿಗಳಲ್ಲಿ ಸಿಗುವ ಪ್ಯಾಕೆಟ್ ಹಾಲುಗಳ ಮೊರೆ ಹೋಗುತ್ತಾರೆ. ಹಾಲಿನ ಪ್ಯಾಕೆಟ್‌ಗಳನ್ನು ಪಡೆಯಲು ಹತ್ತಿರದ ಹಾಲು ಮಾರಾಟಗಾರರ ಬಳಿಗೆ ಹೋಗಬೇಕಾಗುತ್ತದೆ. ಇನ್ಮುಂದೆ, ಈ ಸಂಕಷ್ಟದಿಂದ ಪಾರಾಗಲು ನಿಮ್ಮ ಮನೆ ಬಾಗಿಲಿಗೇ ತಾಜಾ ಹಾಲು ಬರಲಿದೆ.
ಬಿಹಾರದ ಭಾಗಲ್ಪುರದ ನಿವಾಸಿ ವಿನಯ್ ಕುಮಾರ್ ಇಂಥ ಒಂದು ಐಡಿಯಾವನ್ನು ನಿಜರೂಪಕ್ಕೆ ತಂದಿದ್ದು, ಕೃಷಿ ಮೇಳದಲ್ಲಿ ಭಾರೀ ಚರ್ಚೆಗೆ ಚಾಲನೆ ನೀಡಿದ್ದಾರೆ. ಎಲ್ಲಿಗೆ ಬೇಕಾದರೂ ಸಂಚರಿಸಬಲ್ಲ ಹಾಲಿನ ಎಟಿಎಂ ನಿಮ್ಮ ಮನೆ ಬಾಗಿಲಿಗೇ ತನ್ನಿಂತಾನೇ ಬರಲಿದೆ.
ಸ್ಥಳೀಯರ ಬೇಡಿಕೆಗಳನ್ನು ಪೂರೈಸಲು ವಿನಯ್ ಕುಮಾರ್ ತಮ್ಮ ಅಂಗಡಿಯೊಳಗೆ ಸಣ್ಣದೊಂದು ಎಟಿಎಂ ಸ್ಥಾಪಿಸಿದ್ದಾರೆ. ಆದರೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿರುವುದರಿಂದ ವಿನಯ್ ಕುಮಾರ್, ಹಾಲಿನ ಎಟಿಎಂಗೆ ಚಕ್ರಗಳನ್ನು ಅಳವಡಿಸಿ ಅದನ್ನು ಮೊಬೈಲ್ ಎಟಿಎಂ ಆಗಿ ಪರಿವರ್ತಿಸಿದ್ದಾರೆ. ಮೊದಲ ತಿಂಗಳು ಪ್ರತಿನಿತ್ಯ ಮೊದಲು ಬರುವ 100 ಗ್ರಾಹಕರಿಗೆ ಪ್ರತಿ ಲೀಟರ್ ಮೇಲೆ 50 ಪೈಸೆಯಷ್ಟು ರಿಯಾಯಿತಿ ದೊರೆಯಲಿದೆ. 35 ರೈತರನ್ನು ಒಗ್ಗೂಡಿಸಿಕೊಂಡು ತಮ್ಮದೇ ಆದ ಜಾಲ ಸ್ಥಾಪಿಸುವ ಮೂಲಕ ಮೊಬೈಲ್ ಹಾಲಿನ ಎಟಿಎಂಅನ್ನು ಭಾಗಲ್ಪುರದ ವಿವಿಧ ಪ್ರದೇಶಗಳಿಗೆ ಹಾಲಿನ ಡೆಲಿವರಿ ಮಾಡಲು ಆರಂಭಿಸಿದ್ದಾರೆ. ತಾವು ಇದಕ್ಕೆ ಸರ್ಕಾರದಿಂದ ಯಾವುದೇ ನೆರವನ್ನು ಪಡೆದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಟಿಕೆಟ್ ಪಡೆಯದ ಪ್ರಯಾಣಿಕರಿಂದ ಬರೋಬ್ಬರಿ 1 ಕೋಟಿ ರೂ. ದಂಡ ಸಂಗ್ರಹಿಸಿದ ಮಹಿಳಾ ಟಿಸಿ!
ವಿನಯ್ ಕುಮಾರ್ ಈ ಮುನ್ನ ವಿಮಾ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಈ ಕೆಲಸ ಬಿಟ್ಟು ತಮ್ಮದೇ ಸ್ಟಾರ್ಟ್‌ಅಪ್ ಒಂದನ್ನು ಸ್ಥಾಪಿಸಲು ಒಂದು ವರ್ಷದ ಮಟ್ಟಿಗೆ ಸಂಶೋಧನೆಯಲ್ಲಿ ತೊಡಗಿದರು. ಈ ಸಂಬಂಧ ಭಾಗಲ್ಪುರದಲ್ಲಿರುವ ಆತ್ಮಾ ಕೃಷಿ ಸಂಸ್ಥೆಯಲ್ಲಿ ತರಬೇತಿಯನ್ನೂ ಪಡೆದು ಈ ಹೊಸ ಆವಿಷ್ಕಾರವನ್ನು ಮಾಡಿ ಜನರಿಗೆ ಸಹಾಯವಾಗುತ್ತಿದ್ದಾರೆ.