ವಿಶ್ವ ಹವ್ಯಕ ಸಮ್ಮೇಳನದ ಅಂಗವಾಗಿ ಸಾಗರದಲ್ಲಿ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಅವರನ್ನು ಸನ್ಮಾನಿಸಲಾಯಿತು. ಹರನಾಥರಾವ್, ವೇಣು ವಿಘ್ನೇಶ ಸಂಪ, ಕೃಷ್ಣಮೂರ್ತಿ, ಶ್ರೀಧರ್, ಉಮೇಶ್, ಹು.ಭಾ.ಅಶೋಕ ಇತರರಿದ್ದರು. 
ನ್ಯೂಸ್

27ಕ್ಕೆ ಬೆಂಗಳೂರಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ

ಸಾಗರ: ಹವ್ಯಕ ಸಮಾಜವು ಎಲ್ಲ ಸಮುದಾಯಗಳ ಜತೆ ಸಮನ್ವಯದಿಂದ ತೊಡಗಿಸಿಕೊಳ್ಳುತ್ತ ಬಂದಿದೆ. ಜಾತಿ ಮೀರಿದ ಸಮಾಜವಾಗಿ ರೂಪುಗೊಂಡಿದೆ. ಡಿ.27ರಿಂದ ಬೆಂಗಳೂರಿನಲ್ಲಿ ಮೂರು ದಿನ ತೃತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಜಾತಿ ಮೀರಿದ ಕಾರ್ಯಕ್ರಮವಾಗಿಸುವ ಆಲೋಚನೆಯಿದೆ ಎಂದು ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಹೇಳಿದರು.

ನಗರದ ಶ್ರೀ ರಾಘವೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಹವ್ಯಕರು ಮಾತ್ರವಲ್ಲದೆ ಬೇರೆ ಜಾತಿ, ಸಮುದಾಯದವರು ಸಮ್ಮೇಳನಕ್ಕೆ ಬರಬೇಕು. ಹವ್ಯಕ ಸಂಸ್ಕೃತಿಯನ್ನು ಇತರ ಸಮುದಾಯಗಳೂ ಗಮನಿಸಬೇಕು ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಬ್ರಾಹ್ಮಣರ ಸಮಸ್ಯೆಗಳಿಗೆ ಉತ್ತರ ಕಂಡುಕೂಳ್ಳುವ ಕೆಲಸ ಮಾಡಲಾಗುತ್ತದೆ. ಉದ್ಯೋಗ ಕ್ಷೇತ್ರ, ಮದುವೆ ವಿವಿಧ ವಿಷಯಗಳಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗುವುದು. ಹವ್ಯಕರ ಕೃಷಿ, ಸಮುದಾಯದ ಹತ್ತು ಹಲವು ವೈಶಿಷ್ಟ್ಯಗಳನ್ನು ಪರಿಚಯಿಸಲಾಗುವುದು ಎಂದು ಹೇಳಿದರು.

ಗಾಯತ್ರಿ ಥೀಮ್ ಪಾರ್ಕ್ ಸಿದ್ಧತೆ: ಸಮ್ಮೇಳನದಲ್ಲಿ ಗಾಯತ್ರಿ ಥೀಮ್ ಪಾರ್ಕ್ ಮೂಲಕ ಪವಿತ್ರ ಗಾಯತ್ರಿ ಮಂತ್ರ, ಇತರ ವಿಷಯಗಳನ್ನು ಪರಿಚಯಿಸಲಾಗುವುದು. ವಿವಿಧ ಸಮಾಜದ ಪ್ರಮುಖರನ್ನು ಸನ್ಮಾನಿಸುವ ವಿಶೇಷ ಸೌಹಾರ್ದ ಸನ್ಮಾನ ನಡೆಸಲಿದ್ದೇವೆ. ತ್ರಿಮತಸ್ಥ ಬ್ರಾಹ್ಮಣ ಸಮುದಾಯದ ಯತಿಗಳು ಪಾಲ್ಗೊಳ್ಳುವರು. ಸಮ್ಮೇಳನದ ನಂತರ ಹವ್ಯಕ ಮಹಾಸಭಾದಿಂದ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು ಸ್ಥಾಪಿಸುವ ಯೋಚನೆಯಿದೆ ಎಂದು ಡಾ. ಗಿರಿಧರ ಕಜೆ ಹೇಳಿದರು.

ಈಗಾಗಲೆ ವಿವಿಧ ಸಮಿತಿಗಳನ್ನು ರಚಿಸಿ, 1,200 ಸಂಚಾಲಕರನ್ನು ನೇಮಿಸಲಾಗಿದೆ. ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿ ಸುವರ್ಣ ಮಂತ್ರಾಕ್ಷತೆ ನೀಡಿ ಆಶೀರ್ವದಿಸುವರು. ಸಮ್ಮೇಳಕ್ಕೆ ಸಾಕಷ್ಟು ಜನರು ಆರ್ಥಿಕ ಸಹಕಾರ ನೀಡುತ್ತಿದ್ದಾರೆ. ಇದು ಎಲ್ಲರ ಸಮ್ಮೇಳನ, ಎಲ್ಲರೂ ಒಟ್ಟಾಗಿ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಹವ್ಯಕ ಸಂಸ್ಕೃತಿ ವೈಶಿಷ್ಟೃದ ಬಗ್ಗೆ ನಾವು ಹೆಮ್ಮೆ ಪಡಬೇಕು. ಜಾತಿಗೆ ಮೀಸಲಾದ ಭಾಷೆ ಎಲ್ಲ ಸಮುದಾಯದಲ್ಲಿ ಇದೆ. ಆದರೆ ಹವ್ಯಕ ಭಾಷೆಯಲ್ಲಿ ಆರೇಳು ಭಾಷೆಗಳನ್ನು ಒಳಗೊಂಡಿದೆ. 1887ರಲ್ಲಿ ಕನ್ನಡದಲ್ಲಿ ಬರೆದ ಪ್ರಪ್ರಥಮ ನಾಟಕ ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ ಹವ್ಯಕ ಭಾಷೆಯಲ್ಲಿದೆ. ಕನ್ನಡಕ್ಕೆ ತನ್ನದೇ ಆದ ಕೊಡುಗೆಯನ್ನು ಹವ್ಯಕ ಭಾಷೆ ನೀಡಿದೆ. ಸಮ್ಮೇಳನದಲ್ಲಿ ನಾಟಕ ಪ್ರದರ್ಶನ ಇರಲಿದೆ. ಡಾ. ಗಿರಿಧರ ಕಜೆ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ

ಸಮಾಜದ ಹಿರಿಯ ಮುಖಂಡರಾದ ಹರನಾಥ ರಾವ್, ಅಖಿಲ ಹವ್ಯಕ ಮಹಾಸಭಾ ಪ್ರಧಾನ ಕಾರ್ಯದರ್ಶಿ ವೇಣುವಿಘ್ನೇಶ ಸಂಪ, ಕೋಶಾಧ್ಯಕ್ಷ ಕೃಷ್ಣಮೂರ್ತಿ, ಶ್ರೀಧರ್, ಉಮೇಶ್, ಹು.ಭಾ.ಅಶೋಕ ಇತರರಿದ್ದರು.