ಬೆಂಗಳೂರು: ರಾಜ್ಯದಲ್ಲಿರುವ ಎಲ್ಲಾ ಮಾಜಿ ಯೋಧರಿಗೆ ನೆರವಾಗಲು ಪ್ರತ್ಯೇಕ ನಿಗಮ (ಕಾರ್ಪೊರೇಷನ್) ಸ್ಥಾಪಿಸಲು ಚಿಂತನೆ ನಡೆಸಲಾಗಿದ್ದು, ಈ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ಡಿಸಿಎಂ DK ಶಿವಕುಮಾರ್ ತಿಳಿಸಿದರು.
ನಗರದ ಟೌನ್ ಹಾಲ್ನಲ್ಲಿ ಬುಧವಾರ ನಡೆದ ಜೈ ಹಿಂದ್ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷದ ಸೈನಿಕರ ವಿಭಾಗದ ಅಧ್ಯಕ್ಷರಾದ ಮಲ್ಲಿಕಾರ್ಜುನ ಅವರ ಸಲಹೆ ಮೇರೆಗೆ ಕಾರ್ಪೊರೇಷನ್ ರಚಿಸಲು ಆಲೋಚಿಸುತ್ತಿದ್ದೇವೆ. ನಮ್ಮ ದೇಶಕ್ಕೆ ಸೇವೆ ಸಲ್ಲಿಸಿರುವ ಯೋಧರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಎಂದರು.
ದೇಶಕ್ಕೆ ಶಕ್ತಿ ತುಂಬಿರುವ ನಿಮ್ಮಲ್ಲರಿಗೆ ದೇಶ ಹಾಗೂ ಕಾಂಗ್ರೆಸ್ ಪಕ್ಷದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕಾಂಗ್ರೆಸ್ ಪಕ್ಷ ಸದಾ ದೇಶ ಹಾಗೂ ನಮ್ಮ ಸಶಸ್ತ್ರ ಪಡೆಗಳ ಪರವಾಗಿ ನಿಲ್ಲಲಿದೆ. ನಿಮ್ಮ ಕೊಡುಗೆಯನ್ನು ಸದಾ ಸ್ಮರಿಸಲಿದೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಸೇನಾಧಿಕರಿಗಳು ಹಾಗೂ ಮಾಜಿ ಯೋಧರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಇನ್ನು ದೇಶ ಸೇವೆಯಲ್ಲಿ ಹುತಾತ್ಮರಾದ ವೀರ ಯೋಧರ ಕುಟುಂಬ ಸದಸ್ಯರಿಗೆ ಸನ್ಮಾನ ಸಲ್ಲಿಸಿದರು.
ಅಶೋಕ ಚಕ್ರ ಪ್ರಶಸ್ತಿ ಪುರಸ್ಕೃತರಾದ ದಿವಂಗತ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಕರ್ನಲ್ ಜೋಜನ್ ಥಾಮಸ್, ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತರಾದ ಮೇಜರ್ ಎಂ.ಸಿ ಮುತ್ತಣ್ಣ, ಮೇಜರ್ ಗಣೇಶ್ ಮದ್ದಪ್ಪ, ಮೇಜರ್ ಎಂ.ಸಿ ಮುತ್ತಣ್ಣ, ಕ್ಯಾಪ್ಟನ್ ಎಂ.ವಿ ಪಂಜಲ್, ಮೇಜರ್ ಮೋಹನ್ ಗಂಗಾಧರನ್, ಮೇಜರ್ ಶಫೀಕ್ ಮೊಹಮದ್ ಖಾನ್, ಸೇನಾ ಪದಕ ಪುರಸ್ಕೃತ ಕರ್ನಲ್ ರಾಮಮೂರ್ತಿ ಕುಟುಂಬ ಸದಸ್ಯರನ್ನು ಸನ್ಮಾನಿಸಲಾಯಿತು.