ನ್ಯೂಸ್

ಲಾಕ್​ಡೌನ್​ನಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿರುವ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ಚಿಂತನೆ

ಬೆಂಗಳೂರು: ಲಾಕ್​ಡೌನ್​ನಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಕುಸಿದಿರುವ ಹಿನ್ನೆಲೆಯಲ್ಲಿ ಪ್ರಮುಖ ಆದಾಯ ಮೂಲವಾದ ‘ಮದ್ಯ’ ವಹಿವಾಟು ಪುನರಾರಂಭಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ನಿರ್ಬಂಧಗಳಲ್ಲಿ ಕೆಲವು ಏ.20ರ ಬಳಿಕ ಸಡಿಲುಗೊಳ್ಳಲಿವೆ ಎಂಬ ಸುಳಿವು ಈ ನಿರ್ಧಾರಕ್ಕೆ ಮೂಲ ಕಾರಣ. ಕೆಲವು ಸಚಿವರು, ಅಧಿಕಾರಿಗಳು ಇದಕ್ಕೆ ಒತ್ತಾಸೆಯಾಗಿದ್ದು, ಸಿಎಂ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಏ.20ರಂದು ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗುವ ಸಾಧ್ಯತೆ ಇದೆ.

ಈ ಹಿಂದೆ ಎಂಎಸ್​ಐಎಲ್ ಮಳಿಗೆಗಳಲ್ಲಿ ಪಾರ್ಸೆಲ್ ಮಾರಾಟಕ್ಕೆ ಅನುಮತಿ ನೀಡಬೇಕೆಂಬ ಹಂತದವರೆಗೆ ಪ್ರಸ್ತಾವನೆ ತಲುಪಿತ್ತು. ಆದರೆ ಕೇಂದ್ರ ಸರ್ಕಾರದ ನಿರ್ದೇಶನದ ಬಳಿಕ ಮುಂದಿನ ನಿರ್ಧಾರ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟಪಡಿಸಿ, ವಿಷಯದ ಚರ್ಚೆಗೆ ತೆರೆ ಎಳೆದಿದ್ದರು. ಪರಿಸ್ಥಿತಿ ಅವಲೋಕಿಸಿ ಏ.20ರ ಬಳಿಕ ಲಾಕ್​ಡೌನ್ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದನ್ನು ಕೇಂದ್ರ ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದು, ವಿವಿಧ ದುಷ್ಪರಿಣಾಮಗಳಿಗೆ ಪರಿಹಾರ ಹಾಗೂ ರಾಜ್ಯದ ಆದಾಯದ ದೃಷ್ಟಿಯಿಂದ ಮದ್ಯದ ಸೀಮಿತ ವಹಿವಾಟಿಗೆ ಅನುಮತಿ ಸಿಗಬಹುದು ಎಂದು ಕೆಲವರು ಆಸೆಗಣ್ಣಿನಿಂದ ನೋಡುತ್ತಿದ್ದಾರೆ.