ಶಿವಮೊಗ್ಗ: ಪರಿಸರದಲ್ಲಿ ಸಮತೋಲನ ಕಾಪಾಡಲು ನಾವೆಲ್ಲ ಸಸಿಗಳನ್ನು ನೆಟ್ಟು ಪೋಷಿಸಬೇಕು. ನಗರದ ಹಸರೀಕರಣ ಮತ್ತು ಪರಿಸರ ಸಂರಕ್ಷಣೆ ದೃಷ್ಟಿಯಿಂದ ಸೂಡಾ(ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ)ದಿಂದ ವಿವಿಧ ಬಡಾವಣೆಗಳಲ್ಲಿ ಸುಮಾರು 5ರಿಂದ 6 ಸಾವಿರ ಗಿಡಗಳನ್ನು ನೆಟ್ಟು ಪೋಷಿಸಲಾಗುವುದು ಎಂದು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಹೇಳಿದರು.
ನಗರದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಶನಿವಾರ ಸೂಡಾದಿಂದ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ನಿರಂತರ ಪರಿಸರ ಹಾನಿಯಿಂದ ಪ್ರಸ್ತುತ ಮಲೆನಾಡಿನಲ್ಲೂ 43 ಡಿಗ್ರಿಗಿಂತಲೂ ಹೆಚ್ಚು ತಾಪಮಾನ ಕಂಡುಬರುತ್ತಿದೆ. ಹೀಗೆಯೇ ಸಾಗಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ. ಹೀಗಾಗಿ ನಮ್ಮ ಸುತ್ತಮುತ್ತಲಿನಲ್ಲಿ ಗಿಡಗಳನ್ನು ನೆಟ್ಟು ಮಕ್ಕಳಂತೆ ಅವುಗಳನ್ನು ಪೋಷಿಸಿ ಸಲಹಬೇಕು ಎಂದು ತಿಳಿಸಿದರು.
ಪ್ರಾಧಿಕಾರದಿಂದ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ 1000, ಊರುಗಡೂರು ಬಡಾವಣೆಯಲ್ಲಿ 1,500, ನಿದಿಗೆ ಬಡಾವಣೆ, ಭದ್ರಾವತಿಯ ಕುವೆಂಪು ಬಡಾವಣೆ ಸೇರಿ 5ರಿಂದ 6 ಸಾವಿರ ಗಿಡ ನೆಡಲಾಗುವುದು. ಅರಣ್ಯ ಇಲಾಖೆ 2 ವರ್ಷಗಳ ಕಾಲ ಗಿಡಗಳ ನಿರ್ವಹಣೆ ಮಾಡಲಿದೆ ಎಂದರು.
ಅಟಲ್ ಬಿಹಾರಿ ವಾಜಪೇಯಿ ಬಡಾವಣೆ ಸೇರಿ ನಿವಾಸಿಗಳ ಸಮಸ್ಯೆಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಒದಗಿಸಲಾಗುವುದು. ಬಡಾವಣೆಗಳಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯವರ ಸಹಕಾರ ಮತ್ತು ಪಾತ್ರ ಮಹತ್ತರವಾಗಿದ್ದು, ಅವರಿಗೆ ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಸೂಡಾ ಸದಸ್ಯ ಎಚ್.ಎಸ್.ಸಿದ್ದಪ್ಪ, ಎಸಿಎಫ್ ವಿಜಯಕುಮಾರ್, ಆರ್‌ಎಫ್‌ಒ ವಿಜಯಕುಮಾರ್, ಸೂಡಾ ಎಇಇ ಬಸವರಾಜ್, ಎಇ ಗಂಗಾಧರಸ್ವಾಮಿ ಮತ್ತಿತರರಿದ್ದರು.