ಬೆಂಗಳೂರು: ರಾಜ್ಯದ 40 ಸಾವಿರ ಕೆರೆಗಳ ಹೂಳೆತ್ತಿ, ರೈತರ ಜಮೀನಿಗೆ ಸಾಗಿಸುವ ಚಿಂತನೆಯಿದೆ. ಈ ನಿಟ್ಟಿನಲ್ಲಿ ವಿಸ್ತೃತ ಯೋಜನೆ ತಯಾರಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದರು.
ವಿಧಾನಸೌಧದ ಸಿಎಂ ಕೊಠಡಿಯಲ್ಲಿ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದ ನಿಯೋಗ ಮಂಗಳವಾರ ಭೇಟಿ ಮಾಡಿತು. 10ಕ್ಕೂ ಹೆಚ್ಚು ಬೇಡಿಕೆಗಳ ಕುರಿತು ಚರ್ಚಿಸಿ, ಈಡೇರಿಸಲು ಗಡುವು ನೀಡಿತು.
ತೆಲಂಗಾಣ ಸರ್ಕಾರವು 24 ಸಾವಿರ ಕೆರೆಗಳ ಹೂಳೆತ್ತಿ, ರೈತರ ಜಮೀನಿಗೆ ಸಾಗಿಸಿದೆ. ಇದರಿಂದಾಗಿ ತೆರೆದ, ಕೊಳವೆ ಬಾವಿಗಳ ಅಂರ್ತಜಲ ವೃದ್ಧಿಸಿ, ರೈತರ ಜಮೀನಿನ ಲವತ್ತತೆ ಹೆಚ್ಚಲು ನೆರವಾಗಿದೆ ಎಂದು ಕುರುಬೂರ್ ಶಾಂತಕುಮಾರ್ ಗಮನಸೆಳೆದರು.
ಈ ಪ್ರಸ್ತಾಪಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಕೆರೆಗಳ ಹೂಳು ತೆಗೆಸಿದರೆ ಹಲವು ಪ್ರಯೋಜನಗಳಿವೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರದ್ದು ಮಾಡುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ವಿಧಾನ ಪರಿಷತ್‌ನಲ್ಲಿ ಪಕ್ಷ ಬಹುಮತ ಸಾಧಿಸಿದ ನಂತರ ತಿದ್ದುಪಡಿ ವಿಧೇಯಕ ಮಂಡಿಸಿ ಹಿಂದಿನ ಕಾಯ್ದೆ ಮರು ಸ್ಥಾಪಿಸಲಾಗುವುದು.
ನೀರಾವರಿ ಪಂಪ್‌ಸೆಟ್‌ಗಳಿಗೆ ರೈತರ ಆಧಾರ್ ಸಂಖ್ಯೆ ಜೋಡಣೆ ಮಾಹಿತಿಯಿಲ್ಲ. ಈ ಬಗ್ಗೆ ವಿವರ ಪಡೆದು ಇಂಧನ ಇಲಾಖೆಗೆ ಸೂಕ್ತ ಕ್ರಮವಹಿಸುವೆ. ಇನ್ನುಳಿದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲು ಕ್ರಮವಹಿಸುವೆ. ಅಧಿಕಾರಿಗಳಿಗೆ ಈ ಕುರಿತು ಸೂಕ್ತ ನಿರ್ದೇಶನ ನೀಡುವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ರೈತರ ಸಮಸ್ಯೆಗಳಿಗೆ 25 ದಿನಗಳೊಳಗೆ ಪರಿಹಾರ ನೀಡದಿದ್ದರೆ ವಿಧಾನಸೌಧ ಮುತ್ತಿಗೆ ಹಾಕಲು ರೈತ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ ಎಂದು ಇದೇ ಸಂದರ್ಭದಲ್ಲಿ ಕುರುಬೂರು ಶಾಂತಕುಮಾರ್ ತಿಳಿಸಿದರು.
- ತೆಲಂಗಾಣ ಮಾದರಿಯಲ್ಲಿ ಕೆರೆಗಳ ಹೂಳೆತ್ತಿ ರೈತರ ಜಮೀನಿಗೆ ಸಾಗಣೆ
- ನೀರಾವರಿ ಪಂಪ್‌ಸೆಟ್‌ಗಳಿಗೆ ರೈತರ ಆಧಾರ್ ಸಂಖ್ಯೆ ಜೋಡಣೆ ಕೈಬಿಡಬೇಕು
- ಕೃಷಿ ಪಂಪ್‌ಸೆಟ್‌ಗಳ ಅಕ್ರಮ ಸಕ್ರಮ ಯೋಜನೆ ಮರು ಜಾರಿ
- ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರದ್ದು
- ಕೃಷಿ ಸಾಲ ಪಾವತಿಸದ ರೈತರ ಜಮೀನು ವಶಕ್ಕೆ ಪಡೆಯುವ ಸಪ್ರೈಸಿ ಕಾಯ್ದೆ ರದ್ದು
- ಪ್ರಕೃತಿ ವಿಕೋಪದಿಂದ ಉಂಟಾಗುವ ಬೆಳೆ ಹಾನಿ ಪರಿಹಾರಕ್ಕೆ ವೈಜ್ಞಾನಿಕ ಮಾನದಂಡ
- ಖಾಸಗಿ ೈನಾನ್ಸ್, ಬ್ಯಾಂಕ್‌ಗಳು ಸಾಲ ವಸೂಲಿಗೆ ಕಿರುಕುಳ, ಜಮೀನು ಹರಾಜು ನಿಲ್ಲಿಸಬೇಕು
- ಜಿಂದಾಲ್ ಕಂಪನಿಗೆ 3,677 ಎಕರೆ ಜಮೀನು ಮಾರಾಟದ ನಿರ್ಧಾರ ಕೈಬಿಡುವುದು
-ಕಳಸಾ-ಬಂಡೂರಿ ಯೋಜನೆಗೆ ಕೇಂದ್ರದ ವನ್ಯಜೀವಿ ಮಂಡಳಿ ಅನುಮತಿಗೆ ಕೇಂದ್ರಕ್ಕೆ ಒತ್ತಾಯ
- ಕಬ್ಬು ಇಳುವರಿ ಕುಸಿತ ಸಾಧ್ಯತೆ, ಪ್ರಸಕ್ತ ಸಾಲಿನ ಎಫ್ ಆರ್ ಪಿ ಗಿಂತ ಹೆಚ್ಚುವರಿ ದರ ನಿಗದಿ
- ಹಿಂದಿನ ವರ್ಷ ನಿಗದಿತ ಕಬ್ಬು ಪ್ರತಿ ಟನ್‌ಗೆ ಹೆಚ್ಚುವರಿ ದರ 150 ರೂ. ಪಾವತಿಗೆ ಕ್ರಮ