ನ್ಯೂಸ್

ಕೋವಿಡ್ ಅಂತಿಮ ವರದಿ ಬಳಿಕ ಎಸ್‌ಐಟಿಗೆ ಚಿಂತನೆ: ಸಚಿವ ಪರಮೇಶ್ವರ್

ಬೆಂಗಳೂರು: ಬಿಜೆಪಿ ಆಡಳಿತಾವಧಿಯಲ್ಲಿ ಕೋವಿಡ್ ಏಳು ಸಾವಿರ ಕೋಟಿ ರೂ. ಅವ್ಯವಹಾರದ ಬಗ್ಗೆ ನ್ಯಾ.ಮೈಕಲ್ ಜಾನ್ ಡಿ.ಕುನ್ಹಾ ಆಯೋಗ ಅಂತಿಮ ವರದಿ ಸಲ್ಲಿಸಿದ ನಂತರ ಎಸ್‌ಐಟಿ ರಚನೆ ಬಗ್ಗೆ ಚಿಂತನೆಯಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜತೆಗೆ ಬುಧವಾರ ಮಾತನಾಡಿದ ಅವರು, ಕೋವಿಡ್ ನಿಯಂತ್ರಣ, ನಿರ್ವಹಣೆಗಾಗಿ ಪರಿಕರಗಳ ಖರೀದಿ, ಸೇವೆಗಳ ಪೂರೈಕೆಯಲ್ಲಿ 500 ಕೋಟಿ ರೂ. ಅಕ್ರಮವನ್ನು ನ್ಯಾ.ಕುನ್ಹಾ ಆಯೋಗ ಪತ್ತೆ ಹಚ್ಚಿ, ವಸೂಲಿಗೆ ಶಿಾರಸು ಮಾಡಿದೆ.

ಈ ಆಯೋಗ ಸಲ್ಲಿಸಿದ ಮಧ್ಯಂತರ ವರದಿ ವಿವರಗಳ ಪರಿಶೀಲನೆ, ಎಲ್ಲೆಲ್ಲಿ ಲೋಪಗಳಾಗಿವೆ, ಎಷ್ಟೆಲ್ಲ ಮೊತ್ತ ಅನಗತ್ಯ ವೆಚ್ಚ, ಪೋಲು ಇತ್ಯಾದಿಗಳನ್ನು ಸ್ಪಷ್ಟಪಡಿಸಿಕೊಳ್ಳಲು ಡಿಸಿಎಂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಏಳು ಸಚಿವರ ಸಂಪುಟದ ಉಪಸಮಿತಿ ರಚನೆಯಾಗಿದೆ.

ಸಿಎಂ ಸಿದ್ದರಾಮಯ್ಯ ಒಪ್ಪಿಸಿದ ಜವಾಬ್ದಾರಿಯನ್ನು ನಿಭಾಯಿಸಿದೆ. ಸಚಿವ ಸಂಪುಟದ ಉಪಸಮಿತಿ ಇನ್ನೂ ಒಮ್ಮೆಯು ಸಭೆ ನಡೆಸಿಲ್ಲ. ಆದಷ್ಟು ಬೇಗ ಸಭೆ ಸೇರಿ ಮಧ್ಯಂತರ ವರದಿಯನ್ನು ಪರಿಶೀಲಿಸಿ ಸಚಿವ ಸಂಪುಟಕ್ಕೆ ವರದಿ, ಎಸ್‌ಐಟಿ ರಚನೆ ವಿಷಯ ಪ್ರಸ್ತಾಪಿಸಲಾಗುವುದು ಎಂದರು.

ಪ್ರಸ್ತಾವನೆ ಬಂದಿಲ್ಲ

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಕೇಸ್ ಮಾದರಿಯಲ್ಲೇ ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಪ್ರಕರಣಗಳನ್ನು ವಾಪಸ್ ಪಡೆಯಲು ಕೋರಿ ಗೃಹ ಇಲಾಖೆಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಯಾವುದೇ ಪ್ರಕರಣ ಹಿಂಪಡೆಯಲು ಕೋರಿಕೆ ಬಂದಾಗ ನಿಯಮಾವಳಿ ಪ್ರಕಾರ ಇಲಾಖೆ ಪರಿಶೀಲಿಸಿ ಸಚಿವ ಸಂಪುಟದ ಉಪಸಮಿತಿಗೆ ವಿವರ ಸಲ್ಲಿಸುತ್ತದೆ. ಉಪಸಮಿತಿಯು ಕೂಲಂಕಷವಾಗಿ ಪರಾಮರ್ಶಿಸಿ ಸಚಿವ ಸಂಪುಟ ಸಭೆಗೆ ಶಿಾರಸು ಮಾಡುತ್ತದೆ ಎಂದು ಪುನರುಚ್ಚರಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಮಾಜಿ ಸಚಿವ ರೋಷನಬೇಗ್ ಭೇಟಿಯಾಗಿ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಪ್ರಕರಣಗಳನ್ನು ವಾಪಸ್ ಪಡೆಯಬೇಕೆಂದು ಮನವಿ ಮಾಡಿಕೊಂಡಿರುವುದು ಗೊತ್ತಿಲ್ಲ. ಶಾಸಕ ತನ್ವೀರ್ ಸೇಠ್ ಇದೇ ವಿಚಾರ ಮಾಡಿಕೊಂಡು ಮನವಿಯೂ ಅಲ್ಲಿಗೆ ನಿಂತು ಹೋಯಿತಲ್ಲ ಎಂದು ಡಾ.ಜಿ.ಪರಮೇಶ್ವರ್ ಸಮಜಾಯಿಷಿ ನೀಡಿದರು.

ಪರಿಣಾಮಬೀರದು

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣ ಹಾಗೂ ಮುಡಾ ನಿವೇಶನ ಹಂಚಿಕೆ ಪ್ರಕರಣವು ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಮೇಲೆ ಪರಿಣಾಮಬೀರದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮುಡಾ ಪ್ರಕರಣ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಸಂಸ್ಥೆಯವರಿಗೆ ಹೀಗೆಯೇ ಮಾಡಿ ಎಂದು ನಿರ್ದೇಶಿಸಲಾಗದು. ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಎಸ್‌ಐಟಿ, ಇ.ಡಿ. ಪ್ರತ್ಯೇಕವಾಗಿ ತನಿಖೆ ನಡೆಸಿದ್ದರೂ ಯಾವುದೇ ಸಂಘರ್ಷವಾಗಿಲ್ಲ ಎಂದರು.

ಎಸ್‌ಟಿಗೆ ಮೀಸಲಾದ ಸಂಡೂರು ಕ್ಷೇತ್ರದ ಉಪ ಚುನಾವಣೆ ಪ್ರಚಾರದಲ್ಲಿ ವಾಲ್ಮೀಕಿ ನಿಗಮದ ಹಗರಣವನ್ನು ಪ್ರತಿಪಕ್ಷ ಬಿಜೆಪಿ ಪ್ರಚಾರಕ್ಕೆ ಬಳಸಬಹುದು. ನಾವೂ ಕೂಡ ಅಧಿಕಾರಿಗಳ ಹಂತದಲ್ಲಿ ಆಗಿದ್ದೆಂದು ಜನರಿಗೆ ಮನವರಿಕೆ ಮಾಡಿಕೊಡಲು ಸಿದ್ಧರಾಗಿದ್ದೇವೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.