ನ್ಯೂಸ್

ಯೋಚಿಸಿ ಮಾತನಾಡಬೇಕು ಹೊರತು ಮಾತನಾಡಿದ ಮೇಲಲ್ಲ

ದಿಟ್ಟ ಸಂದೇಶವನ್ನು ಸಾರಿದ ಮಹಾಭಾರತದಲ್ಲಿ ನಡೆದ ಒಂದು ಪುಟ್ಟ ಘಟನೆಯಿದು. ನುಡಿದಂತೆ ನಡೆದ ನಡೆದಂತೆ ನುಡಿದ ಭೀಷ್ಮಾಚಾರ್ಯರು ತಮ್ಮ ಪ್ರತಿಜ್ಞೆಗೆ ಹೆಸರಾದವರು. ಅವರು ಒಮ್ಮೆ ಪ್ರತಿಜ್ಞೆ ಮಾಡಿದರೆಂದರೆ ತೀರಿತು; ಅಲ್ಲಿಗೆ ಆ ಕೆಲಸ ಆದಂತೆಯೇ. ಆದುದರಿಂದಲೇ ಭೀಷ್ಮ ಪ್ರತಿಜ್ಞೆ ಎಂಬ ಮಾತು ಜನಜನಿತವಾಗಿದೆ. ಕೌರವನ ಅನ್ನದ ಋಣಕ್ಕೆ ಒಳಗಾಗಿದ್ದ ಭೀಷ್ಮರು ಒಂದು ಸಂದರ್ಭದಲ್ಲಿ ಧರ್ಯೋಧನನನ್ನು ತೃಪ್ತಿಪಡಿಸಲು ನಾನು ಪಾಂಡವರನ್ನು ನಾಶ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತಾರೆ. ಭೀಷ್ಮ ಪ್ರತಿಜ್ಞೆ ಸುಳ್ಳಾಗಲು ಹೇಗೆ ಸಾಧ್ಯ? ಇದನ್ನು ತಿಳಿದ ಪಾಂಡವರು ಚಿಂತಕ್ರಾಂತರಾಗುತ್ತಾರೆ.

ಆದರೆ ದ್ರೌಪದಿಗೆ ಶ್ರೀಕೃಷ್ಣ ಪರಮಾತ್ಮನ ಮೇಲಿದ್ದ ನಂಬಿಕೆ ಮಾತ್ರ ಬಲವಾಗಿತ್ತು. ಆಕೆ ಪಾಂಡವರಿಗೆ ನಾವು ಶ್ರೀಕೃಷ್ಣನ ಮೊರೆ ಹೋಗೋಣ ಎಂಬ ಸಲಹೆಯನ್ನಿತ್ತಳು. ಅಂತೆಯೇ ಪಾಂಡವರು ಶ್ರೀಕೃಷ್ಣನನ್ನು ಭೇಟಿ ಮಾಡಿ ಮುಂದಾಗಬಹುದಾದ ಆಪತ್ತನ್ನು ಅರುಹಿದರು. ಚತುರನಾದ ಶ್ರೀಕೃಷ್ಣ ಭೀಷ್ಮ ಪ್ರತಿಜ್ಞೆ ಹೇಗೆ ಹುಸಿಯಾದೀತು! ಆದರೂ ಒಂದು ಪ್ರಯತ್ನವನ್ನು ಮಾಡೋಣ ಎಂದನು. ಅಂತೆಯೇ ಆ ದಿನ ರಾತ್ರಿಯ ವೇಳೆ ಕೃಷ್ಣನು ದ್ರೌಪದಿಯನ್ನು ಕರೆದುಕೊಂಡು ಭೀಷ್ಮಾಚಾರ್ಯರು ಬೀಡು ಬಿಟ್ಟಿದ್ದ ಕಡೆ ಹೊರಟನು. ಅಲ್ಲಿಗೆ ತಲುಪುತ್ತಲೇ ದ್ರೌಪದಿಗೆ ಈಗ ಭೀಷ್ಮಾಚಾರ್ಯರು ಮಲಗುವ ವೇಳೆ, ನೀನು ಅವರ ಕುಟೀರದ ಒಳಗಡೆ ಹೋಗಿ, ಬಳೆಗಳ ಸದ್ದು ಮಾಡುತ್ತಾ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಬಾ ಎಂದು ಹೇಳಿ ತಾನು ಮಾತ್ರ ಹೊರಗೆ ಉಳಿದನು. ಅದೇ ಪ್ರಕಾರ ದ್ರೌಪದಿಯು ಒಳಗೆ ಹೋಗಿ ಭೀಷ್ಮಾಚಾರ್ಯರಿಗೆ ನಮಸ್ಕರಿಸಿದಳು. ನಿದ್ದೆಯ ಕಣ್ಣಿನಲ್ಲಿದ್ದ ಭೀಷ್ಮಾಚಾರ್ಯರು ಅವಳಿಗೆ ತಕ್ಷಣ ಅಖಂಡ ಸೌಭಾಗ್ಯವತೀ ಭವ ಎಂದು ಹರಸಿದರು. ಮರುಕ್ಷಣ ಭೀಷ್ಮಾಚಾರ್ಯರು ನಿದ್ದೆಗಣ್ಣನ್ನು ತೆರೆದು ನೋಡಲು ತನ್ನಿಂದ ಹೀಗೆ ಆಶೀರ್ವಾದ ಪಡೆದವಳು ಇನ್ಯಾರೂ ಆಗಿರದೇ ದ್ರೌಪದಿಯೇ ಆಗಿದ್ದಳು. ಅಷ್ಟು ಹೊತ್ತಿಗೆ ತಡವಾಗಿತ್ತು. ಭೀಷ್ಮಾಚಾರ್ಯರ ಅಭಯಹಸ್ತ ದ್ರೌಪದಿಗೆ ಅಷ್ಟರಲ್ಲೇ ಪ್ರಾಪ್ತವಾಗಿತ್ತು. ದ್ರೌಪದಿ ಸೌಭಾಗ್ಯವತಿಯಾಗಿರಲು ಪಾಂಡವರು ಜೀವಂತವಾಗಿರಲೇ ಬೇಕಾಗಿತ್ತು. ಅರ್ಥಾತ್ ಅವರನ್ನು ನಾಶಮಾಡುವ ಪ್ರತಿಜ್ಞೆಯಿಂದ ಭೀಷ್ಮಾಚಾರ್ಯರು ಹಿಂದೆ ಸರಿಯಲೇ ಬೇಕಾಯಿತು. ಇದೆಲ್ಲವೂ ಕಪಟನಾಟಕ ಸೂತ್ರಧಾರಿ ಕೃಷ್ಣನ ಕೆಲಸವೇ ಎಂದು ತಿಳಿದುಕೊಳ್ಳಲು ಭೀಷ್ಮಾಚಾರ್ಯರಿಗೆ ತಡವಾಗಲಿಲ್ಲ.

ತಾತ್ಪರ್ಯ ಇಷ್ಟೆ : ಮಾತುಬೇರೆ, ಮಾತುಗಾರಿಕೆ ಬೇರೆ, ಏನನ್ನು ಮಾತನಾಡಬೇಕು; ಏನನ್ನು ಮಾತನಾಡಬಾರದು, ಎಲ್ಲಿ ಹೇಗೆ ಎಷ್ಟು ಮಾತನಾಡಬೇಕೆಂಬ ಪ್ರಜ್ಞೆಯೇ ಮಾತುಗಾರಿಕೆ. ಕೆಲವರು ಯೋಚಿಸಿ ಮಾತನಾಡುತ್ತಾರೆ. ಆದರೆ ಇನ್ನೂ ಕೆಲವರು ಮಾತನಾಡಿದ ಮೇಲೆ ಯೋಚಿಸುತ್ತಾರೆ. ಅಷ್ಟು ಹೊತ್ತಿಗೆ ತಡವಾಗಿ ಬಿಟ್ಟಿರುತ್ತದೆ. ಕಾರಣ ಒಡೆದುಹೋದ ಕನ್ನಡಿ, ಕಳೆದುಹೋದ ಸಮಯ ಹಾಗೂ ಆಡಿ ಬಿಟ್ಟ ಮಾತು ಮರಳಿ ಬಾರದು. ಆಡದ ಮಾತು ನಮ್ಮ ಸೇವಕನಿದ್ದಂತೆ. ಆದರೆ ಆಡಿಬಿಟ್ಟ ಮಾತು ನಮ್ಮ ಒಡೆಯನಿದ್ದಂತೆ. ಕಾಲು ಎಡವಿದರೆ ಆಗುವ ಅಪಾಯಕ್ಕಿಂತ ನಾಲಿಗೆ ಎಡವಿದರೆ ಆಗುವ ಅಪಾಯ ದೊಡ್ಡದು. ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕೆಂಬುದನ್ನು ತಿಳಿಯದವ ಯಾವ ಸಂದರ್ಭದಲ್ಲಿ ಸುಮ್ಮನಿರಬೇಕೆಂಬುದನ್ನು ಅರಿತಿರುವುದಿಲ್ಲ. ಮಾತುಗಳನ್ನು ಆಡಬೇಕು; ಉಗುಳಬಾರದು. ಆದರೆ ಆಡುವ ಮುನ್ನ ಅದರ ಸವಿಯನ್ನು ನಾವೇ ಮೊದಲು ಸವಿದಿರಬೇಕು. ನಾವಾಡುವ ಮಾತುಗಳನ್ನು ತೂಕ ಮಾಡಬೇಕೇ ಹೊರತು ಅಳೆಯಬಾರದು. ಮನಸ್ಸಿಗೆ ತೋಚಿದ್ದನ್ನೆಲ್ಲಾ ಮಾತನಾಡದೆ ಕೊಂಚ ಯೋಚಿಸಿ ಮಾತನಾಡಿದರೆ ಮಾತ್ರ ಎಲ್ಲರ ಪ್ರೀತಿ ಮೆಚ್ಚುಗೆಗೆ ಪಾತ್ರರಾಗುತ್ತೇವೆ. ಹೆಚ್ಚು ಮಾತನಾಡುವವರು, ವೇಗವಾಗಿ ಮಾತನಾಡುವವರು ಹಾಗೂ ಯೋಚಿಸದೇ ಮಾತನಾಡುವವರು ತಪ್ಪುಗಳನ್ನು ಮಾಡುವುದು ಸರ್ವೇ ಸಾಮಾನ್ಯ. ಹೇಳಬೇಕೆಂದಿರುವ ಮಾತುಗಳನ್ನು ವಿವೇಕ-ವಿವೇಚನೆಗಳೆಂಬ ತಕ್ಕಡಿಯಲ್ಲಿ ತೂಗಿ, ಬಾಯಿಯಿಂದ ಒಂದೊಂದಾಗಿ ಹೊರಚೆಲ್ಲಬೇಕು. ಮಾತನಾಡುವ ಮುನ್ನ ಅದರ ಪರಿಣಾಮ ಮತ್ತು ಪ್ರತಿಕ್ರಿಯೆಗಳನ್ನು ಅರಿತಿರಬೇಕು. ಹಾರುವ ಹಕ್ಕಿಗೆ ಏಣಿ ಬೇಕೇ? ಈಜುವ ಮೀನಿಗೆ ದೋಣಿ ಬೇಕೇ? ಪ್ರೇಮದ ಭಾಷೆಗೆ ಪೆನ್ನುಬೇಕೇ? ಒಳ್ಳೆಯ ಮಾತಿಗೆ ಹೊನ್ನು ಬೇಕೇ? ಎಂಬ ಮಾತಿನಂತೆ ಆರೋಗ್ಯ ಸಂಪಾದನೆ ಸಾಧ್ಯ, ಉತ್ತಮ ಆಹಾರ ಅಭ್ಯಾಸ ಬಲದಿಂದ; ಯಾವುದೇ ಕಲೆಯನ್ನು ಕರಗತ ಮಾಡಿಕೊಳ್ಳಲು ಸಾಧ್ಯ ಸತತವಾದ ಅಭ್ಯಾಸಬಲದಿಂದ; ಜ್ಞಾನಸಂಪಾದನೆ ಸಾಧ್ಯ ವಿದ್ಯಾ ಬಲದಿಂದ; ಧನ ಸಂಪಾದನೆ ಸಾಧ್ಯ ಶ್ರಮ ಬಲದಿಂದ; ಎಲ್ಲವೂ ಸಾಧ್ಯ ಪ್ರೀತಿಯ ಬಲದಿಂದ; ಮನೋಬಲದಿಂದ. ಆದರೆ ಎಲ್ಲರನ್ನೂ ಗೆಲ್ಲಲು ಸಾಧ್ಯ ಮಾತಿನ ಬಲದಿಂದ. ಅಂತೆಯೇ ಮಾತಿಗೆ ಮಾತು ಬೆಳೆಸಿದರೆ ಎಲ್ಲವೂ ಕಷ್ಟ, ಎಲ್ಲವೂ ನಷ್ಟ; ಮಾತಿಗೆ ಮಾತು ಇಳಿಸಿದರೆ, ಎಲ್ಲವೂ ಸರಳ ಎಲ್ಲವೂ ಸುಲಭ ಎಂಬ ಮಾತು ಸದಾ ನೆನಪಿರಲಿ.

(ಪ್ರತಿಕ್ರಿಯಿಸಿ: drputhuraya@yahoo.co.in)