ನವದೆಹಲಿ: ದೆಹಲಿಯ ಹಜರತ್ ನಿಜಾಮುದ್ದೀನ್ನಲ್ಲಿರುವ ತಬ್ಲಿಘಿ ಜಮಾತ್ ಸುನ್ನಿ ಮುಸ್ಲಿಂ ಸಂಘಟನೆಯ ಧಾರ್ವಿುಕ ಸಭೆಯಲ್ಲಿ ಪಾಲ್ಗೊಂಡಿದ್ದ ವಿದೇಶಿ ಧರ್ಮ ಪ್ರಚಾರಕರು ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಆಗಮಿಸುವ ಮೂಲಕ ವೀಸಾ ನಿಯಮಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟವಾಗಿದೆ.
ಸಾಮಾನ್ಯವಾಗಿ ಭಾರತಕ್ಕೆ ಧಾರ್ವಿುಕ ಸಂಬಂಧಿ ಚಟುವಟಿಕೆಗಳಿಗೆಂದು ವಿದೇಶಿಯರು ಮಿಷನರಿ ಅಥವಾ ಕಾನ್ಪರೆನ್ಸ್ ವೀಸಾ ಪಡೆದುಕೊಳ್ಳಬೇಕು. ಆದರೆ, ಈ ಧರ್ಮಸಭೆಯಲ್ಲಿ ಪಾಲ್ಗೊಂಡ ವಿದೇಶಿ ಧರ್ಮ ಪ್ರಚಾರಕರಲ್ಲಿ ಯಾರೊಬ್ಬರೂ ಮಿಷನರಿ ಅಥವಾ ಕಾನ್ಪರೆನ್ಸ್ ವೀಸಾ ಮೂಲಕ ಭಾರತಕ್ಕೆ ಬಂದಿಲ್ಲ. ಧಾರ್ವಿುಕ ಸಭೆಯಲ್ಲಿ ಭಾಗಿಯಾಗುವ ಉದ್ದೇಶದಿಂದ ತೆರಳುತ್ತಿರುವುದಾಗಿ ನಿರ್ದಿಷ್ಟ ದೇಶದಲ್ಲಿರುವ ರಾಯಭಾರ ಕಚೇರಿಗಳಿಗೆ ಪ್ರವಾಸಿಗರು ಪೂರ್ವ ಮಾಹಿತಿ ನೀಡಿಲ್ಲ. ಕೇವಲ ವೈಯಕ್ತಿಕ ಪ್ರವಾಸಿ ವೀಸಾಕ್ಕೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಸಹಜವಾಗಿಯೇ ಅವರಿಗೆ ವೀಸಾ ನೀಡಲಾಗಿದೆ. ಹೀಗಾಗಿ, ಈ ಪ್ರವಚನಕಾರರ ವಿರುದ್ಧ ಕೇಂದ್ರ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.
ಭಾರತ ಸರ್ಕಾರಕ್ಕೆ ಸೇರಿದ ಸಂಸ್ಥೆಗಳು ಧರ್ಮಕ್ಕೆ ಸಂಬಂಧಿಸಿದ ಸಭೆಗಳಿಗೆ ವಿದೇಶಿಯರನ್ನು ಆಹ್ವಾನಿಸಿದರೆ, ಅಂಥ ವ್ಯಕ್ತಿಗಳಿಗೆ ವೀಸಾ ನೀಡುವ ಮುನ್ನ ಗೃಹ ಸಚಿವಾಲಯ ಸಮ್ಮತಿ ಪಡೆದುಕೊಂಡು, ‘ಕಾನ್ಪರೆನ್ಸ್ ವೀಸಾ’ಕ್ಕೆ ಅರ್ಜಿ ಸಲ್ಲಿಸುವಂತೆ ತಿಳಿಸಲಾಗುತ್ತದೆ. ಅಲ್ಲದೆ, ಭಾರತಕ್ಕೆ ಬರುವ ವ್ಯಕ್ತಿಗಳು ಇರಾನ್, ಇರಾಕ್, ಪಾಕಿಸ್ತಾನ, ಅಫ್ಘಾನಿಸ್ತಾನವರೆಂದರೆ ಅವರ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ನಂತರ ವೀಸಾ ನೀಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ವಿದೇಶಾಂಗ ಇಲಾಖೆ ಸಿಬ್ಬಂದಿಯೊಬ್ಬರು ಹೇಳುತ್ತಾರೆ.
ವಾಸ್ತವದಲ್ಲಿ, ತಬ್ಲಿಘಿ ಜಮಾತ್ ಧರ್ಮಸಭೆಗೆ ಬಂದ ವಿದೇಶಿಯರು ‘ಮಿಷನರಿ ಅಥವಾ ಕಾನ್ಪರೆನ್ಸ್ ವೀಸಾ’ಕ್ಕೆ ಅರ್ಜಿ ಸಲ್ಲಿಸಬೇಕಿತ್ತು. ಈ ಹಿಂದೆ ಕೇಂದ್ರ ಸರ್ಕಾರದ ಇಮಿಗ್ರೇಷನ್ (ವಲಸೆ) ವಿಭಾಗವು ತಬ್ಲಿಘಿ ಜಮಾತ್ನ ಅನೇಕ ಸದಸ್ಯರನ್ನು ವೀಸಾ ನೀತಿ ಉಲ್ಲಂಘಿಸಿದ ಆರೋಪದ ಮೇಲೆ ಕಪು್ಪಪಟ್ಟಿಗೆ ಸೇರಿಸಿದ ಉದಾಹರಣೆಗಳಿವೆ. ಸಾಕಷ್ಟು ಸುತ್ತಿನ ಪರಿಶೀಲನೆ ಬಳಿಕವಷ್ಟೇ ಇವರಿಗೆ ಧಾರ್ವಿುಕ ಮಿಷನರಿ ವೀಸಾಗಳನ್ನು ನೀಡುವುದರಿಂದ, ಬಹುಶಃ ಅದೇ ಕಾರಣಕ್ಕೆ ತಬ್ಲಿಘಿ ಜಮಾತ್ನ ವಿದೇಶಿ ಸದಸ್ಯರು ಟೂರಿಸ್ಟ್ (ಪ್ರವಾಸಿ) ವೀಸಾ ಮೂಲಕ ಭಾರತಕ್ಕೆ ಬಂದು ಧರ್ಮ ಪ್ರವಚನದಲ್ಲಿ ತೊಡಗಿಸಿಕೊಂಡಿರಬಹುದು. ನಿಜಾಮುದ್ದೀನ್ ಜಮಾತ್ ಸಭೆ ಹೊರತುಪಡಿಸಿ ದೇಶದ ವಿವಿಧ ರಾಜ್ಯಗಳಲ್ಲಿ ಸುಮಾರು 800ರಷ್ಟು ವಿದೇಶದ ಮುಸ್ಲಿಂ ಧರ್ಮ ಪ್ರಚಾರಕರಿದ್ದಾರೆ ಎನ್ನಲಾಗಿದೆ.
ಏತನ್ಮಧ್ಯೆ, ಕೇಂದ್ರ ಸರ್ಕಾರ ಜಾರಿ ಮಾಡಿರುವ ಪೌರತ್ವ ತಿದ್ದುಪಡಿ ಕಾನೂನು ಹಾಗೂ ಮುಸ್ಲಿಂ ಸಂಘಟನೆಗಳು ಒಗ್ಗೂಡಿ ಹೇಗೆ ಇದರ ವಿರುದ್ಧ ಹೋರಾಟ ನಡೆಸಬೇಕು ಎಂಬ ಬಗ್ಗೆಯೂ ಜಮಾತ್ ಸಭೆಯಲ್ಲಿ ಚರ್ಚೆಗಳು ನಡೆದಿವೆ ಎನ್ನಲಾಗಿದ್ದು, ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ಕೋಮು ಹಿಂಸಾಚಾರ, ಶಾಹಿನ್ಭಾಗ್ ಹೋರಾಟ ಸೇರಿ ಸಿಎಎಗೆ ಸಂಬಂಧಿಸಿದ ಹಲವು ವಿಷಯಗಳು ಚರ್ಚೆಯಾಗಿರುವ ಬಗ್ಗೆ ಮಾತುಗಳು ಕೇಳಿಬಂದಿವೆ.
ವಿದೇಶದಿಂದ ಆಮದು!: ಮಲೇಷ್ಯಾ, ಇಂಡೋನೇಷ್ಯಾ, ಥಾಯ್ಲೆಂಡ್, ಮ್ಯಾನ್ಮಾರ್, ಬಾಂಗ್ಲಾದೇಶ ಸೇರಿ ವಿವಿಧ ದೇಶಗಳ ಸುಮಾರು 250ಕ್ಕಿಂತಲೂ ಹೆಚ್ಚು ವಿದೇಶಗಳ ಧರ್ಮ ಪ್ರಚಾರಕರು ಈ ಸಭೆಯಲ್ಲಿದ್ದರು. ಸಭೆಗೆ ಮುನ್ನ, ಫೆಬ್ರವರಿ 27ರಂದು ಮಲೇಷ್ಯಾದ ಕೌಲಾಲಂಪುರದಲ್ಲಿ ನಾಲ್ಕು ದಿನಗಳ ಕಾಲ ಇಂಥದ್ದೇ ಪ್ರವಚನ ಸಭೆಯೊಂದು ನಡೆದಿತ್ತು. ಅದರಲ್ಲಿ, ಸುಮಾರು 16000 ಮಂದಿ ಭಾಗಿಯಾಗಿದ್ದರು ಮತ್ತು ನೂರಾರು ಮಂದಿ ಅತಿ ಸಮೀಪದಲ್ಲಿ ನಮಾಜ್, ಆಹಾರ ಸೇವನೆ ಚಟುವಟಿಕೆಗಳನ್ನು ಮಾಡಿದ್ದರು. ಈ ಸಭೆಯಲ್ಲಿ ಚೀನಾ, ದಕ್ಷಿಣ ಕೊರಿಯಾದವರೂ ಇದ್ದರು. ಇದಾದ ಕೆಲವೇ ವಾರಗಳಲ್ಲಿ ಮಲೇಷ್ಯಾದಲ್ಲಿ 600ಕ್ಕಿಂತಲೂ ಹೆಚ್ಚು ಕರೊನಾ ಪೀಡಿತರು ಪತ್ತೆಯಾಗಿದ್ದರು. ಹಾಗೇ ಬ್ರೂನಿ, ಕಾಂಬೋಡಿಯಾ, ಥಾಯ್ಲೆಂಡ್, ಸಿಂಗಾಪುರ ಸೇರಿದಂತೆ ವಿವಿಧ ದೇಶಗಳಲ್ಲೂ ಕರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಾ ಹೋಗಿತ್ತು. ಮಲೇಷ್ಯಾ ಸಭೆಯಲ್ಲಿದ್ದ ಕೆಲವರು ನಿಜಾಮುದ್ದೀನ್ನಲ್ಲಿ ನಡೆದಿದ್ದ ಸಭೆಗೆ ಬಂದಿದ್ದರಿಂದ ಅವರ ಮೂಲಕ ಭಾರತೀಯರಿಗೂ ಕರೊನಾ ಹಬ್ಬಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಜಮಾತ್ ಸಭೆಯಲ್ಲಿದ್ದ ಇಂಡೋನೇಷ್ಯಾದ 10 ಮಂದಿ ಮಾರ್ಚ್ 13ರಂದು ದೆಹಲಿಯಲ್ಲಿ ಆಂಧ್ರಪ್ರದೇಶ ಸಂಪರ್ಕ ಕ್ರಾಂತಿ ರೈಲಿನ ಮೂಲಕ ತೆಲಂಗಾಣದ ರಾಮಗುಂಡಂಗೆ ತೆರಳಿದ್ದರು. ಅಲ್ಲೂ ಕೆಲ ಧಾರ್ವಿುಕ ಸಭೆಯಲ್ಲಿ ಭಾಗಿಯಾದರು. ನಂತರ ಅವರನ್ನು ಕರೊನಾ ಪರೀಕ್ಷೆಗೊಳಪಡಿಸಲಾಯ್ತು ಮತ್ತು 10 ಮಂದಿಗೂ ವೈರಸ್ ಇರುವುದು ಖಚಿತವಾಗುತ್ತಿದ್ದಂತೆಯೇ ಕೇಂದ್ರ ಗೃಹ ಇಲಾಖೆ ಇತರೆ ರಾಜ್ಯ ಸರ್ಕಾರಗಳೊಂದಿಗೂ ಮಾಹಿತಿ ಹಂಚಿಕೊಂಡಿತು. ದೆಹಲಿ ಪೊಲೀಸ್ ಮತ್ತು ಆರೋಗ್ಯಾಧಿಕಾರಿಗಳ ಸುಮಾರು 36 ಗಂಟೆಗಳ ಕಾರ್ಯಾಚರಣೆ ಬಳಿಕ ನಿಜಾಮುದ್ದೀನ್ನ ಜಮಾತ್ ಸಭೆಯ ಸ್ಥಳದಿಂದ 2361 ಮಂದಿಯ ಸ್ಕಾ್ಯನಿಂಗ್ ನಡೆಸಿ, ಹೊರ ಕರೆತರಲಾಗಿದೆ.
ಸಾಮಾಜಿಕ ಅಂತರ ಬೇಡ?
‘‘ನೀವು ಸಾವಿನಿಂದ ಎಲ್ಲಿಗೆ ಓಡುತ್ತಿದ್ದೀರಿ? ಸಾವು ನಿಮ್ಮ ಮುಂದೆಯೇ ಇದೆ. ಇದು ದೇವರ ಮುಂದೆ ಪ್ರಾಯಶ್ಚಿತ್ತ ಮಾಡುವ ಸಮಯ. ವೈದ್ಯರ ಮಾತಿನ ಪ್ರಭಾವಕ್ಕೊಳಗಾಗಿ ನಮಾಜ್ ನಿಲ್ಲಿಸುವುದು, ಪರಸ್ಪರ ಭೇಟಿ ಮಾಡದಿರುವುದು, ಅಂತರ ಕಾಯ್ದುಕೊಳ್ಳುವುದನ್ನು ಒಪ್ಪಲಾಗದು. ಹೌದು, ವೈರಸ್ ಇದೆಯೆಂದು ಗೊತ್ತಿದೆ. ಆದರೆ, 70000 ದೇವದೂತರು ನಮ್ಮೊಂದಿಗಿದ್ದಾರೆ. ಅವರು ನಮ್ಮನ್ನು ಕಾಪಾಡದಿದ್ದರೆ, ಬೇರ್ಯಾರು ಕಾಪಾಡುತ್ತಾರೆ? ಇಂಥಾ ಹಲವು ಸಭೆ, ಕೂಟಗಳನ್ನು ನಡೆಸುವ ಕಾಲವಿದು. ಬೇರೆಯಾಗುವ ಸಮಯವಿದಲ್ಲ. ಪರಸ್ಪರ ಭೇಟಿ ಮಾಡಿದರೆ ವೈರಸ್ ಹಬ್ಬುತ್ತದೆ ಎಂದಿದ್ಯಾರು? ರೋಗವು ತನ್ನಿಂತಾನೇ ಹಾದು ಹೋಗುತ್ತದೆ. ನಾವು ಪರಸ್ಪರ ಒಂದೇ ತಟ್ಟೆಯಿಂದ ಆಹಾರ ತಿನ್ನುವುದರಿಂದ ನಮ್ಮೆಲ್ಲರಿಗೂ ಪ್ರಯೋಜನವಿದೆ. ಆದರೆ, ಷಡ್ಯಂತ್ರದ ವಾಸನೆ ಮೂಗಿಗೆ ಬಡಿಯುತ್ತಿದೆ. ಇದು ಮುಸ್ಲಿಮರ ಸೌಹಾರ್ದತೆಯನ್ನು ಕೊನೆಗೊಳಿಸುವ, ಪರಸ್ಪರ ದೂರವಾಗಿಸುವ ಪಿತೂರಿ ಎಂದೇ ಭಾಸವಾಗುತ್ತಿದೆ’ ಎಂದು ಪ್ರವಚನ ಸಭೆಯಲ್ಲೊಬ್ಬರು ಮಾತನಾಡಿರುವ ಆಡಿಯೋ ತುಣುಕೊಂದನ್ನು ದೆಹಲಿ ಪೊಲೀಸರು ತನಿಖೆಗೊಳಪಡಿಸಿದ್ದಾರೆ. ಈ ಧ್ವನಿ ನಿಜಾಮುದ್ದೀನ್ ಬಂಗಲೇವಾಲಿ ಮಸ್ಜೀದ್ನ ಪ್ರಮುಖರದ್ದು ಎಂದು ಹೇಳಲಾಗುತ್ತಿದೆ.
| ರಾಘವ ಶರ್ಮನಿಡ್ಲೆ