ನ್ಯೂಸ್

ಸಾಲಮರದ ತಿಮ್ಮಕ್ಕನ ಸಚಿವ ದರ್ಜೆ ಸ್ಥಾನಮಾನ ದುರ್ಬಳಕೆ ಆರೋಪ : ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದ ತಿಮ್ಮಕ್ಕ

ಬೆಂಗಳೂರು: ಬಿಜೆಪಿ ಟಿಕೆಟ್ ಕೊಡಿಸುವುವ ನೆಪದಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿ ೫ ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತೆ ಚೈತ್ರಾ ಕುಂದಾಪುರ ಸಾಲಮರದ ತಿಮ್ಮಕ್ಕ ಅವರಿಗೆ ನೀಡಿದ ಸಚಿವ ದರ್ಜೆ ಸ್ಥಾನಮಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮತ್ತೊಂದೆಡೆ ಆರೋಪಿತೆಯ ಚೈತ್ರಾ ಐಷಾರಾಮಿ ಕಾರು ಪತ್ತೆಯಾಗಿದೆ.


ಆದರೆ ಈ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸಾಲುಮರದ ತಿಮ್ಮಕ್ಕ ಮತ್ತು ಅವರ ದತ್ತು ಪುತ್ರ ಉಮೇಶ್ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯನ ಪಾತ್ರ ಮಾಡಿದ್ದ ಚನ್ನಾನಾಯ್ಕಾ ಬಳಸಿದ್ದ ಕಾರು ಸಾಲುಮರದ ತಿಮ್ಮಕ್ಕನಿಗೆ ಸೇರಿದ್ದು ಎಂದು ಹೇಳಲಾಗಿದೆ. ಕುಮಾರಕೃಪ ಗೆಸ್ಟ್‌ಹೌಸ್‌ಗೆ ಪ್ರವೇಶಿಸಲು ತಿಮ್ಮಕ್ಕ ಅವರ ಕಾರು ಬಳಸಲಾಗಿದೆ. ದೂರುದಾರ ಗೋವಿಂದ ಬಾಬು ಪೂಜಾರಿಯನ್ನು ನಂಬಿಸಲು ಸರ್ಕಾರಿ ಕಾರು ಬಳಕೆ ಮಾಡಿದ್ದಾರೆ ಎಂದು ಹೇಳಲಾಗಿದೆ.


ಆರೋಪಿ ಗಗನ್ ಕಡೂರು, ಸಾಲುಮರದ ತಿಮ್ಮಕ್ಕನ ಪುತ್ರ ಉಮೇಶ್ ಆತ್ಮೀಯರಾಗಿದ್ದು, ಉಮೇಶ್, ಸಾಲುಮರದ ತಿಮ್ಮಕ್ಕನ ಜತೆ ಗಗನ್ ಕಡೂರು ಮದುವೆಗೆ ಹೋಗಿದ್ದರು. ಹೀಗಾಗಿ ಉಮೇಶ್ ಜತೆಗಿನ ಸ್ನೇಹವನ್ನು ಗಗನ್ ದುರ್ಬಳಕೆ ಮಾಡಿಕೊಂಡಿದ್ದಾನೆ. ವಿಧಾನಸೌಧದ ಸಾಲುಮರದ ತಿಮ್ಮಕ್ಕಗೆ ನೀಡಿರುವ ಕೊಠಡಿಯ ನವೀಕರಣದ ಸಂಪೂರ್ಣ ಜವಾಬ್ದಾರಿಯನ್ನು ಗಗನ್ ಕಡೂರು ಹೊತ್ತುಕೊಂಡಿದ್ದ. ಈ ಹಿನ್ನೆಲೆಯಲ್ಲಿ ಸಾಲುಮರದ ತಿಮ್ಮಕ್ಕ ಅವರ ಸಚಿವ ಸಂಪುಟ ದರ್ಜೆ ಸ್ಥಾನಮಾನವನ್ನು ಗಗನ್ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.


ಪ್ರಕರಣಕ್ಕೂ ನಮಗೂ ಸಂಬಂಧ ಇಲ್ಲ-ತಿಮ್ಮಕ್ಕ
ಈ ಬೆನ್ನಲ್ಲೇ ಸಾಲುಮರದ ತಿಮ್ಮಕ್ಕ ಹಾಸನದ ಬೇಲೂರಿನ ಬಳ್ಳೂರು ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಉದ್ಯಮಿ ಗೋಂವಿದ ಬಾಬು ಪೂಜಾರಿ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಗಗನ್ ಕಡೂರ್‌ಗೂ ನಮ್ಮಗೂ ಯಾವುದೇ ಸಂಬಂಧವಿಲ್ಲ. ಬಳ್ಳೂರು ಗ್ರಾಮದಲ್ಲಿರುವ ತಮ ದತ್ತು ಪುತ್ರ ಉಮೇಶ್ ನಿವಾಸದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಟಿ.ವಿಯಲ್ಲಿ ನಮ್ಮ ಬಗ್ಗೆ ಏನೇನೋ ಬರುತ್ತಿದೆ. ನಾವು ಗಿಡ ನೆಡುತ್ತಾ, ಹೇಗೋ ಜೀವನ ನಡೆಸುತ್ತಿದ್ದೇವೆ. ಸರ್ಕಾರಕ್ಕೆ ಹೆದರಿ ಬದುಕುವ ಜನ.ಇದೆಲ್ಲಾ ನಂಗೆ ಏನು ಗೊತ್ತಾಗಲ್ಲ ಎಂದು ಹೇಳಿದರು.


ಇನ್ನು ಸಾಲುಮರದ ತಿಮ್ಮಕ್ಕ ದತ್ತು ಪುತ್ರ ಬಳ್ಳೂರು ಉಮೇಶ್ ಮಾತನಾಡಿ, ನಾವು ಗಗನ್ ಕಡೂರು ಮದುವೆಗೆ ಹೋಗಿದ್ದು ನಿಜ. ಅವರು ಭಾರತೀಯ ಅಯ್ಯಪ್ಪ ಸೇವಾ ಸಮಿತಿಯ ಸದಸ್ಯರು, ನಾನು ಅದರ ಅಧ್ಯಕ್ಷ. ಗಗನ್, ತಿಮ್ಮಕ್ಕ ಅವರ ಕಾರು ದುರ್ಬಳಕೆ ಮಾಡಿಕೊಂಡಿರುವ, ವಿಧಾನಸೌಧದ ಕೊಠಡಿಯನ್ನು ನವೀಕರಣ ಮಾಡಿಕೊಟ್ಟಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಪರಿಶೀಲಿಸಿ ಸುದ್ದಿ ಮಾಡಬೇಕು. ಅದು ಸತ್ಯಕ್ಕೆ ದೂರವಾಗಿದೆ ಎಂದರು.
ದೇಶದಲ್ಲಿ ತಿಮ್ಮಕ್ಕ ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಹೀಗಾಗಿ ಅವರೊಂದಿಗೆ ಪೋಟೋ ತೆಗೆಸಿಕೊಳ್ಳುತ್ತಾರೆ, ಮದುವೆಗೆ ಕರೆಯುತ್ತಾರೆ, ಪ್ರೀತಿಯಿಂದ ಕರೆದಾಗ ಹೋಗಬೇಕಾಗುತ್ತದೆ. ನಾವು ಅಭಿಮಾನಿಗಳಿಗೆ ಗಿಡ ನೆಡಿ ಪರಿಸರ ಉಳಿಸಿ ಎಂದು ಹೇಳುತ್ತೇವೆ, ಅದೇ ರೀತಿ ಗಗನ್ ಅವರ ಮದುವೆಗೂ ಹೋಗಿದ್ದೇವೆ ಅಷ್ಟೆ. ಅವರು ತಪ್ಪು ಮಾಡಿದ್ದರೆ ಅದು ಅಕ್ಷಮ್ಯ ಅಪರಾಧ, ಅವರಿಗೆ ತಕ್ಕ ಶಿಕ್ಷೆಯಾಗಲಿ ಆದರೆ ಇದರಲ್ಲಿ ನಮ್ಮ ಹೆಸರು ಪ್ರಸ್ತಾಪ ಮಾಡಿರುವುದು ಬಹಳ ತಪ್ಪು ಎಂದು ತಿಳಿಸಿದರು.


ಇನ್ನು ತಿಮ್ಮಕ್ಕ ಅವರ ಕೊಠಡಿಯನ್ನು ನವೀಕರಣ ಮಾಡಲು ಗಗನ್ ಯಾರು? ಅವರು ಸರ್ಕಾರನಾ? ನವೀಕರಣವನ್ನು ಸರ್ಕಾರ ಮಾಡಿಕೊಡುತ್ತದೆ. ಗಗನ್ ತಿಮ್ಮಕ್ಕ ಅವರ ಕಾರು ಬಳಸಿದರೆ ಅದಕ್ಕೆ ದಾಖಲೆ ಕೊಡಿ. ನಾವು ಸಮಾಜಕ್ಕಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ ಹೊರತು ಸಮಾಜಕ್ಕೆ ದ್ರೋಹ, ಅಘಾತವಾಗುವಂತಹ ಕೆಲಸ ಮಾಡುವುದಿಲ್ಲ. ಸಂಕಷ್ಟದ ದಿನಗಳಲ್ಲೇ ನಾವು ತಪ್ಪು ಮಾಡಿಲ್ಲ, ಈಗ ಸರ್ಕಾರ ನಮಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನ ನೀಡಿ ಗೌರವಿಸಿದೆ. ಇಡೀ ಸಮಾಜ ಗೌರವಿಸುತ್ತಿದೆ ಈಗ ತಪ್ಪು ಮಾಡುತ್ತಿವಾ ಎಂದು ಪ್ರಶ್ನಿಸಿದ್ದಾರೆ. ಶ್ರೀಘ್ರದಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಗೃಹಸಚಿವ ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಈ ವಿಷಯದ ಬಗ್ಗೆ ಮಾತನಾಡಲಾಗುವುದು ಎಂದು ತಿಳಿಸಿದರು.

ಮತ್ತೆ ಚಿನ್ನಾಭರಣ, ನಗದು ಜಪ್ತಿ
ಶನಿವಾರವಷ್ಟೇ ಚೈತ್ರಾ ಕುಂದಾಪುರ ಮನೆ, ಬ್ಯಾಂಕ್ ಖಾತೆಗಳು ಮತ್ತು ಆಕೆಯ ಸಂಬಂಧಿಕರ ಬ್ಯಾಂಕ್ ಖಾತೆಗಳಲ್ಲಿದ್ದ ೧.೦೮ ಕೋಟಿ ರೂ. ಮೌಲ್ಯದ ಆಸ್ತಿ, ೬೫ ಲಕ್ಷ ರೂ. ಚಿನ್ನಾಭರಣ, ೪೦ ಲಕ್ಷ ರೂ. ನಗದು ಜಪ್ತಿ ಮಾಡಲಾಗಿತ್ತು. ಇದೀಗ ಚೈತ್ರಾ ಹೆಚ್ಚುವರಿಯಾಗಿ ೨ ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು, ಲಕ್ಷಾಂತರ ರೂ.ಠೇವಣಿ ಇರಿಸಿದ್ದಳು ಎಂಬುದು ಗೊತ್ತಾಗಿದೆ. ಮತ್ತೊಂದೆಡೆ ಚೈತ್ರಾ ನಡೆಸಿದ ಆರೋಗ್ಯ ಪರೀಕ್ಷೆಗಳ ವರದಿ ನಾರ್ಮಲ್ ಬಂದಿದ್ದರೂ ಕೂಡ ಆಕೆಯನ್ನು ವೈದ್ಯರು ಡಿಸ್ಚಾರ್ಜ್ ಮಾಡಿಲ್ಲ:

ಚೈತ್ರಾ ಕಿಯಾ ಕಾರು ಪತ್ತೆ:
ಉದ್ಯಮಿಗೆ ವಂಚಿಸಿರುವ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಚೈತ್ರಾ ಕುಂದಾಪುರ ಕಿಯಾ ಕಾರು ಬಾಗಲಕೋಟೆಯ ಮುಧೋಳದಲ್ಲಿ ಪತ್ತೆಯಾಗಿದೆ. ಕಿಯಾ ಕಾರು ಹಿಂದು ಕಾರ್ಯಕರ್ತ ಕಿರಣ್ ಗಣಪ್ಪಗೋಳ ಎಂಬುವರ ಮನೆಯಲ್ಲಿ ಪತ್ತೆಯಾಗಿದೆ.