ಜಾರ್ಖಂಡ್: ಜಾರ್ಖಂಡ್ ಸೈಬರ್ ವಂಚನೆಯ ಕೇಂದ್ರವಾಗಿ ದೇಶದಲ್ಲಿ ಕುಖ್ಯಾತವಾಗಿದೆ. ಆದರೆ ಈ ಬಾರಿ ಬೇರೆ ಕಾರಣಕ್ಕೆ ಚರ್ಚೆಯಾಗುತ್ತಿದೆ. ನಿಜ ಹೇಳಬೇಕೆಂದರೆ ಇಲ್ಲಿನ ಕ್ರಿಮಿನಲ್ಗಳ ಧೈರ್ಯ ಎಷ್ಟಿತ್ತೆಂದರೆ ಈಗ ಎಟಿಎಂ ಮಷಿನ್ ದರೋಡೆಗೇ ಮುಂದಾಗಿದ್ದಾರೆ. ಹೌದು, ನಿನ್ನೆ ಅಪರಿಚಿತರು ಎಟಿಎಂ ಯಂತ್ರವನ್ನು ಕಿತ್ತುಕೊಂಡು ತಮ್ಮ ಕಾರಿನಲ್ಲಿ ತುಂಬಿಕೊಂಡು ಓಡಿ ಹೋಗಿದ್ದಾರೆ.
ಮಾಹಿತಿಯ ಪ್ರಕಾರ, ಜಮಾರಾದ ಕಲಾಜಾರಿಯಾ ಕರ್ಮತಾಂಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಬೊಲೆರೊ ವಾಹನದಲ್ಲಿ ಬಂದ ದುರುಳರು ಎಟಿಎಂ ಯಂತ್ರವನ್ನೇ ಕದ್ದೊಯ್ದಿದ್ದಾರೆ. ಈ ಘಟನೆ ಈಗ ಭಾರೀ ಸಂಚಲನ ಮೂಡಿಸಿದೆ. ದುಷ್ಕರ್ಮಿಗಳು ಮೊದಲು ಎಟಿಎಂ ಯಂತ್ರವನ್ನು ಕಿತ್ತು, ನಂತರ ಬೊಲೆರೊಗೆ ಲೋಡ್ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಎಸ್‌ಬಿಐ ಶಾಖೆಯ ಪಕ್ಕದಲ್ಲಿ ಎಟಿಎಂ ಇತ್ತು ಎಂದು ಪೊಲೀಸರು ತಿಳಿಸಿದ್ದು, ರಾತ್ರಿ ಅಪರಿಚಿತ ದುಷ್ಕರ್ಮಿಗಳು ಈ ಎಸ್‌ಬಿಐ ಎಟಿಎಂ ಅನ್ನು ಕಿತ್ತು ಬೊಲೆರೊ ವಾಹನಕ್ಕೆ ತುಂಬಿಸಿ ಪರಾರಿಯಾಗಿದ್ದಾರೆ. ಆದರೆ, ಜಾಗೃತರಾದ ಪೊಲೀಸರು ನಾರಾಯಣಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಹನ ಸಮೇತ ಎಟಿಎಂ ಮಷಿನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಕತ್ತಲೆಯಲ್ಲಿ ಪರಾರಿ
ಜಿಲ್ಲಾ ಎಸ್ಪಿ ಅನಿಮೇಶ ನಥಾನಿ ಮಾತನಾಡಿ, ಇನ್ನೂ ಯಾರನ್ನೂ ಬಂಧಿಸಿಲ್ಲ, ಆದರೆ ಶೀಘ್ರದಲ್ಲೇ ಪೊಲೀಸರಿಗೆ ಸಿಕ್ಕಿಬೀಳುತ್ತಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ, ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ದರೋಡೆಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಕಾರ್ಯ ಪ್ರವೃತ್ತವಾಗಿದ್ದಾರೆ. ಪೊಲೀಸ್ ತಂಡವು ಕಾರನ್ನು ಬೆನ್ನಟ್ಟಿದಾಗ ವಂಚಕರ ಕಾರು ಅಪಘಾತಕ್ಕೀಡಾಗಿದೆ. ಇದರಿಂದಾಗಿ ಅವರು ಎಟಿಎಂ ಮತ್ತು ಕಾರನ್ನು ಬಿಟ್ಟು ಕತ್ತಲೆಯ ಲಾಭವನ್ನು ಪಡೆದುಕೊಂಡು ಓಡಿಹೋಗಿದ್ದಾರೆ.