Mumbai Lalbaugcha Raja: ಲಾಲ್‌ಬಾಗ್‌ಚಾ ರಾಜಾ ವಿಸರ್ಜನಾ ಮೆರವಣಿಗೆಯ ಭಾರಿ ಜನಸ್ತೋಮದಲ್ಲಿ ಕಳ್ಳತನದ ಆರೋಪಗಳು ಕೇಳಿಬಂದಿವೆ. ಗಣೇಶ ಭಕ್ತರ ಮೊಬೈಲ್ ಫೋನ್, ಚಿನ್ನದ ಸರ ಸೇರಿದಂತೆ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿರುವ ಬಗ್ಗೆ ಹಲವು ದೂರುಗಳು ದಾಖಲಾಗಿವೆ.
ಈವರೆಗೆ ಮೊಬೈಲ್ ಕಳ್ಳತನಕ್ಕೆ ಸಂಬಂಧಿಸಿದಂತೆ ಸುಮಾರು 200 ದೂರುಗಳು ಬಂದಿದ್ದು, ಪೊಲೀಸರು 192 ಮೊಬೈಲ್ ನಾಪತ್ತೆ ಪ್ರಕರಣಗಳನ್ನು ದಾಖಲಿಸಿದ್ದಾರೆ. ಜೊತೆಗೆ ಮೊಬೈಲ್ ಹಾಗೂ ಚಿನ್ನದ ಸರ ಕಳ್ಳತನಕ್ಕೆ ಸಂಬಂಧಿಸಿದಂತೆ 10 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಜನದಟ್ಟಣೆಯನ್ನೇ ಬಂಡವಾಳವಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದ ಶಂಕಿತ ಗ್ಯಾಂಗ್‌ಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಸೇರಿದಂತೆ 18 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಮಹಿಳೆಯರೂ ಇದ್ದಾರೆ. ಜನದಟ್ಟಣೆಯ ನಡುವೆ ಭಕ್ತರ ಬ್ಯಾಗ್ ಕದಿಯುತ್ತಿದ್ದ ಆರೋಪದಲ್ಲಿ ಇಬ್ಬರು ಮಹಿಳೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರಿಂದ ಕಳ್ಳತನದ ಜಾಲದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಗ್ಯಾಂಗ್‌ನಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ. ತಪ್ಪಿಸಿಕೊಂಡಿರುವ ಶಂಕಿತರ ಪತ್ತೆಗೂ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಬಂಧಿತರ ವಿರುದ್ಧ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)