ಬೆಂಗಳೂರು: ನಂದಿನಿ ಪಾರ್ಲರ್‌ಗಳಲ್ಲಿ ಗ್ರಾಹಕರ ಸೋಗಿನಲ್ಲಿ ಕೆಜಿಟಗಟ್ಟಲೇ ತುಪ್ಪ ಖರೀದಿಸಿದ್ದ ಇಬ್ಬರು ಆರೋಪಿಗಳು ಹಣ ಪಾವತಿಸದೆ ಪರಾರಿಯಾಗಿದ್ದಾರೆ.
ಅನ್ನಪೂರ್ಣೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಜೂನ್ ೮ರಂದು ಠಾಣೆ ವ್ಯಾಪ್ತಿಯ ನಂದಿನಿ ಪಾರ್ಲರ್‌ವೊಂದರಲ್ಲಿ ತುಪ್ಪ ಖರೀದಿ ಸೋಗಿನಲ್ಲಿ ಹೋದ ಇಬ್ಬರು ಆರೋಪಿಗಳ ಪೈಕಿ ಒಬ್ಬ ಅಂಗಡಿ ಮುಂಭಾಗ ಬೈಕ್‌ನಲ್ಲಿ ನಿಂತಿದ್ದ. ಮತ್ತೊಬ್ಬ ಪಾರ್ಲರ್‌ಗೆ ಹೋಗಿ ೧೫ ಕೆ.ಜಿ. ತುಪ್ಪ ಖರೀದಿಸಿದ್ದಾನೆ. ಬಳಿಕ ಅಂಗಡಿ ಮಾಲೀಕ ಒಳಗಡೆ ಮತ್ತೊಂದು ವಸ್ತು ತರಲು ಹೋದಾಗ, ಆರೋಪಿಗಳು ಬೈಕ್‌ನಲ್ಲಿ ತುಪ್ಪದ ಸಮೇತ ಪರಾರಿಯಾಗಿದ್ದಾರೆ. ಕೂಡಲೇ ಅಂಗಡಿ ಮಾಲೀಕ, ಕಳ್ಳರನ್ನು ಹಿಡಿಯಲು ಯತ್ನಿಸಿದ್ದಾನೆ. ಆದರೆ, ಸಾಧ್ಯವಾಗಿಲ್ಲ. ತುಪ್ಪ ಖರೀದಿಸಿದ ಇಬ್ಬರು ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಈ ರೀತಿ ಬೇರೆ ಕಡೆಗಳಲ್ಲಿಯೂ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಒಂದು ತಿಂಗಳ ಹಿಂದೆ ಇದೇ ರೀತಿ ೧೦ ಕೆ.ಜಿ ತುಪ್ಪ ಕದ್ದು ಕಳ್ಳರು ಪರಾರಿಯಾಗಿದ್ದ ಘಟನೆ ಕೆಂಗೇರಿಯ ಕೊಮ್ಮಘಟ್ಟದ ನಂದಿನಿ ಪಾರ್ಲರ್‌ನಲ್ಲಿ ನಡೆದಿತ್ತು.