ಲಖನೌ: ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿರುವಾಗ ಯಾರಿಗೂ ಅನುಮಾನ ಬರದಂತೆ ಕಳ್ಳತನ ಮಾಡಿ ಖದೀಮರು ಎಸ್ಕೇಪ್ ಆಗುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಖದೀಮ ಕಳ್ಳತನಕ್ಕೆ ಬಂದು ಸ್ವಲ್ಪ ನಿದ್ರೆ ಮಾಡೋಣ ಅಂತ ನಿದ್ರೆಗೆ ಜಾರಿದ ಪರಿಣಾಮ ಬೆಳಗ್ಗೆ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ನಡೆದಿದೆ.
ಲಖನೌದ ಇಂದಿರಾನಗರ ಸೆಕ್ಟರ್ 20ರಲ್ಲಿರುವ ಡಾ.ಸುನೀಲ್ ಪಾಂಡೆ ಅವರ ಮನೆಗೆ ಭಾನುವಾರ ಬೆಳಗಿನ ಜಾವ ಕಳ್ಳನೊಬ್ಬ ನುಗ್ಗಿ, ಬೀಗ ಒಡೆದು ಪಾತ್ರೆ ಹಾಗೂ ಇನ್ನಿತರ ವಸ್ತುಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡಿದ್ದ. ಬಳಿಕ ಎಸಿ ಆನ್ ಮಾಡಿ ಅಲ್ಲೇ ಮಲಗಿದ್ದಾನೆ. ಪರಿಣಾಮ ಆತ ಗಾಢ ನಿದ್ರೆಗೆ ಜಾರಿದ್ದ. ಮರುದಿನ ಬೆಳಗ್ಗೆ ಎದ್ದಾಗ ಸುತ್ತಮುತ್ತ ಪೊಲೀಸರನ್ನು ಕಂಡು ಬೆಚ್ಚಿಬಿದ್ದಿದ್ದಾನೆ. ನೆರೆಹೊರೆಯವರಿಂದ ಮಾಹಿತಿ ಪಡೆದ ಪೊಲೀಸರು ಬೆಳಗ್ಗೆ ಒಂಬತ್ತು ಗಂಟೆಗೆ ಬಂದು ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಗಾಜಿಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿಕಾಸ್ ರಾಯ್ ಪ್ರಕಾರ, ಬಂಧಿತ ಕಳ್ಳನನ್ನು ಮುಸದ್ದಿಪುರ ನಿವಾಸಿ ಕಪಿಲ್ ಕಶ್ಯಪ್ ಎಂದು ಗುರುತಿಸಲಾಗಿದೆ. ಅವಕಾಶವನ್ನು ನೋಡಿ ಕಪಿಲ್, ಬೀಗ ಒಡೆದು ಮನೆ ಪ್ರವೇಶಿಸಿದ್ದ. ಬಳಿಕ ಮನೆಯಲ್ಲಿದ್ದ ಇನ್ವರ್ಟರ್ ಬ್ಯಾಟರಿ, ಗೀಸರ್, ಪಾತ್ರೆಗಳು ಮತ್ತು ಇತರ ಕೆಲವು ವಸ್ತುಗಳನ್ನು ಎರಡು ಚೀಲಗಳಲ್ಲಿ ಪ್ಯಾಕ್ ಮಾಡಿದ್ದ. ಬಳಿಕ ಎಸಿ ಆನ್ ಮಾಡಿ ಅಲ್ಲಿಯೇ ಸಿಗರೇಟು ಸೇದುತ್ತಾ ಗಾಢ ನಿದ್ರೆಗೆ ಜಾರಿದ್ದ. ಬೆಳಗ್ಗೆ ಅಕ್ಕಪಕ್ಕದ ಮನೆಯವರು ಬೀಗ ಮುರಿದಿರುವುದನ್ನು ಕಂಡು ಮನೆ ಮಾಲೀಕರಿಗೆ ಮಾಹಿತಿ ನೀಡಿದರು. ಬಳಿಕ ಮಾಲೀಕರು ಪೊಲೀಸ್ ನಿಯಂತ್ರಣ ಕೊಠಡಿಗೆ ತಿಳಿಸಿದರು. ಕೂಡಲೇ ನಾವು ಸ್ಥಳಕ್ಕೆ ಧಾವಿಸಿ, ಮನೆಯೊಳಗೆ ನುಗ್ಗಿ, ಅಲ್ಲಿಯೇ ಮಲಗಿದ್ದ ಖದೀಮನನ್ನು ಎಚ್ಚರಗೊಳಿಸಿ, ಬಂಧಿಸಿದೆವು ಎಂದು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಎಲ್ಲ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಐಪಿಸಿ ಸೆಕ್ಷನ್ 379 ಎ ಅಡಿಯಲ್ಲಿ ಖದೀಮನ ವಿರುದ್ಧ ಕಳ್ಳತನ ಪ್ರಕರಣ ದಾಖಲಿಸಲಾಗಿದೆ. ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಕಪಿಲ್ ವಿರುದ್ಧ ಈಗಾಗಲೇ ಆರು ಕಳ್ಳತನ ಪ್ರಕರಣಗಳು ದಾಖಲಾಗಿವೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಆತ ಕಳ್ಳತನ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ವಿಕಾಸ್ ರಾಯ್ ಹೇಳಿದ್ದಾರೆ. (ಏಜೆನ್ಸೀಸ್)