ಫರೀದ್‌ಕೋಟ್: ಸಾಮಾನ್ಯವಾಗಿ ಕಳ್ಳರು ಕಣ್ಣಿಗೆ ಬಿದ್ದರೆ ಜನರು ಪೊಲೀಸರಿಗೆ ದೂರು ನೀಡುತ್ತಾರೆ ಅಥವಾ ಧರ್ಮದೇಟು ಕೊಡುತ್ತಾರೆ. ಆದರೆ ಪಂಜಾಬ್‌ನ ಗ್ರಾಮವೊಂದರಲ್ಲಿ ಕಳ್ಳರ ಕಾಟಕ್ಕೆ ಬೇಸತ್ತ ರೈತರು, ಕಳ್ಳರಿಗೆ ಕೈಮುಗಿದು ಒಂದು ವಿಚಿತ್ರ ಬೇಡಿಕೆ ಇಟ್ಟಿದ್ದಾರೆ! "ದಯವಿಟ್ಟು ನಮ್ಮ ಮೋಟಾರ್‌ಗಳನ್ನು ಕದಿಯಬೇಡಿ, ನಿಮ್ಮ ಕ್ಯೂಆರ್ ಕೋಡ್ (QR Code) ತಂದು ಹಳ್ಳಿಯಲ್ಲಿ ಹಾಕಿ, ನಾವೇ ಎಲ್ಲರೂ ಸೇರಿ ನಿಮ್ಮ ಖಾತೆಗೆ ದುಡ್ಡು ಹಾಕ್ತೀವಿ" ಎಂದು ಪೋಸ್ಟರ್‌ಗಳನ್ನು ಹಾಕಿದ್ದಾರೆ.
ಒಂದೇ ರಾತ್ರಿಯಲ್ಲಿ 25 ಮೋಟಾರ್ ಕಳವು!
ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯ ಪಕ್ಕಿ ಕಲಾನ್ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಈ ಗ್ರಾಮದಲ್ಲಿ ಕಳ್ಳರು ಒಂದೇ ರಾತ್ರಿಯಲ್ಲಿ ಬರೋಬ್ಬರಿ 25 ನೀರಾವರಿ ಪಂಪ್‌ಸೆಟ್ ಮೋಟಾರ್‌ಗಳನ್ನು ಕದ್ದು ಪರಾರಿಯಾಗಿದ್ದಾರೆ. ಕಳ್ಳರು ರೈತರ ಜಮೀನುಗಳಿಗೆ ನುಗ್ಗಿ, ಮಣ್ಣಿನಲ್ಲಿದ್ದ ಬೆಲೆಬಾಳುವ ಮೋಟಾರ್‌ಗಳನ್ನು ಕಿತ್ತುಕೊಂಡು ಹೋಗಿದ್ದಾರೆ.
ರೈತರ ಅಳಲು ಮತ್ತು ವಿಶಿಷ್ಟ ಪೋಸ್ಟರ್
ರೈತರು ಕಂಗಾಲಾಗಲು ಮುಖ್ಯ ಕಾರಣವೆಂದರೆ ಇದು ಭತ್ತ ಬಿತ್ತನೆ ಮಾಡುವ ಪ್ರಮುಖ ಸಮಯ. ಹೊಲಗಳಿಗೆ ನೀರು ಹರಿಸಲು ಮೋಟಾರ್‌ಗಳು ಅತ್ಯಗತ್ಯ.
ಹೆಚ್ಚಿನ ಬೆಲೆ: ಈ ಮೋಟಾರ್‌ಗಳು ತುಂಬಾ ದುಬಾರಿಯಾಗಿದ್ದು, ಪದೇ ಪದೇ ಹೊಸ ಮೋಟಾರ್ ಖರೀದಿಸಲು ರೈತರ ಬಳಿ ಹಣವಿಲ್ಲ. ಆದರೆ ಕಳ್ಳರು ಇವುಗಳನ್ನು ಗುಜರಿ ಅಂಗಡಿಗಳಲ್ಲಿ ಕೇವಲ ಕೆಲವು ರೂಪಾಯಿಗಳಿಗೆ ಮಾರಿಬಿಡುತ್ತಾರೆ.
ಅಸಹಾಯಕತೆ: "ಪ್ರತಿದಿನ ಮೋಟಾರ್ ಕಳ್ಳತನದಿಂದ ನಮಗೆ ಭಾರಿ ನಷ್ಟವಾಗುತ್ತಿದೆ. ಹಿಂದೆ ದಿನಕ್ಕೆ ಒಂದು ಅಥವಾ ಎರಡು ಮೋಟಾರ್ ಕಳ್ಳತನವಾಗುತ್ತಿತ್ತು, ಆದರೆ ಈಗ ಒಂದೇ ಸಾರಿಗೆ 25 ಮೋಟಾರ್‌ಗಳನ್ನು ಎಗರಿಸಿದ್ದಾರೆ. ಪೊಲೀಸರು ನಮ್ಮ ದೂರಿಗೆ ಯಾವುದೇ ಆಸಕ್ತಿ ತೋರಿಸುತ್ತಿಲ್ಲ" ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ರೈತರ ಆಫರ್: ಇದರಿಂದ ಬೇಸತ್ತ ರೈತರು, "ಕಳ್ಳ ಸಹೋದರರೇ, ದಯವಿಟ್ಟು ನಿಮ್ಮ ಸ್ಕ್ಯಾನರ್ ಅಥವಾ ಕ್ಯೂಆರ್ ಕೋಡ್ ಅನ್ನು ಹಳ್ಳಿಯ ಯಾವುದಾದರೂ ಒಂದು ಜಾಗದಲ್ಲಿ ಅಂಟಿಸಿ. ನಾವು ಇಡೀ ಹಳ್ಳಿಯವರು ಸೇರಿ ಹಣ ಸಂಗ್ರಹಿಸಿ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಾಕುತ್ತೇವೆ" ಎಂದು ಪೋಸ್ಟರ್ ರಿಲೀಸ್ ಮಾಡಿದ್ದಾರೆ.
ಜೀವದ ಭಯದಲ್ಲಿ ಗ್ರಾಮಸ್ಥರು!
ಹಳ್ಳಿಯ ರೈತ ಸಿಮ್ರಂಜಿತ್ ಸಿಂಗ್ ಬ್ರಾರ್ ಅವರು ಮಾತನಾಡಿ, "ಹಿಂದೆಲ್ಲಾ ರೈತರು ಮತ್ತು ಕೂಲಿ ಕಾರ್ಮಿಕರು ರಾತ್ರಿ ವೇಳೆ ಜಮೀನುಗಳಲ್ಲೇ ಮಲಗಿ ಮೋಟಾರ್‌ಗಳನ್ನು ಕಾಯುತ್ತಿದ್ದರು. ಆದರೆ ಈಗ ಕಳ್ಳರ ಸಂಖ್ಯೆ ದೊಡ್ಡದಾಗಿದೆ. 10 ರಿಂದ 12 ಜನರ ಸಶಸ್ತ್ರ ಗ್ಯಾಂಗ್‌ಗಳು (ಆಯುಧಗಳನ್ನು ಹಿಡಿದ ಕಳ್ಳರು) ಹಳ್ಳಿಗಳಲ್ಲಿ ಸುತ್ತಾಡುತ್ತಿವೆ. ಅವರ ಬಳಿ ಮಾರಕಾಸ್ತ್ರಗಳಿರುವುದರಿಂದ ಜೀವದ ಭಯಕ್ಕೆ ಯಾರೂ ರಾತ್ರಿ ಹೊಲಕ್ಕೆ ಹೋಗುತ್ತಿಲ್ಲ. ಜೀವ ಪಣಕ್ಕಿಡುವ ಬದಲು ಇಂತಹ ಪೋಸ್ಟರ್ ಹಾಕಿ ಅಸಹಾಯಕತೆ ವ್ಯಕ್ತಪಡಿಸುವುದೇ ಮೇಲು ಎಂದುಕೊಂಡೆವು" ಎಂದಿದ್ದಾರೆ.
ಪೊಲೀಸರು ಹೇಳುವುದೇನು?
ಈ ವಿಚಿತ್ರ ಪೋಸ್ಟರ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಸ್ಥಳೀಯ ಡಿಎಸ್‌ಪಿ, ಶೀಘ್ರದಲ್ಲೇ ಕಳ್ಳರನ್ನು ಬಂಧಿಸುವುದಾಗಿ ಹೇಳಿದ್ದಾರೆ. "ನಮ್ಮ ಭಾಗದ ಪೊಲೀಸರು ರಾತ್ರಿ ವೇಳೆ ಜಮೀನುಗಳಿಂದ ವಾಹನಗಳನ್ನು ಕದಿಯುತ್ತಿದ್ದ ಇಬ್ಬರು ಕಳ್ಳರನ್ನು ಈಗಾಗಲೇ ಬಂಧಿಸಿದ್ದಾರೆ. ಈ ಮೋಟಾರ್ ಕಳ್ಳತನದಲ್ಲೂ ಅವರ ಕೈವಾಡ ಇದೆಯೇ ಎಂದು ವಿಚಾರಣೆ ನಡೆಸಲಾಗುತ್ತಿದೆ. ಅವರ ಕೊಡುವ ಮಾಹಿತಿ ಆಧಾರದ ಮೇಲೆ ಉಳಿದ ಕಳ್ಳರನ್ನು ಶೀಘ್ರದಲ್ಲೇ ಹಿಡಿಯುತ್ತೇವೆ" ಎಂದು ಭರವಸೆ ನೀಡಿದ್ದಾರೆ,(ಏಜೆನ್ಸೀಸ್).