ಬೆಂಗಳೂರು: ಎಸ್‌ಜೆಪಿ ರಸ್ತೆಯಲ್ಲಿ ಚೇರ್ ಮೇಲೆ ಕುಳಿತು ಕಾಲು ಹಾಕಿಕೊಂಡು ಟೀ ಕುಡಿದು ರೀಲ್ಸ್ ಮಾಡಿದ್ದ ಯುವಕ ಮೇಲೆ ಕೇಸ್ ದಾಖಲಿಸಿ ಎಸ್.ಜೆ. ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
ನಂದಿನಿ ಲೇಔಟ್ ನಿವಾಸಿ ಪ್ರಶಾಂತ್ ಅಲಿಯಾಸ್ ಸಿಂಬು ಬಂಧಿತ. ಎಸ್‌ಜೆಪಿ ರಸ್ತೆಯಲ್ಲಿ ಟೆಂಪೋ ಚಾಲಕನಾಗಿದ್ದು, ರೀಲ್ಸ್ ಮಾಡಿ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಿದ್ದ. ಸಾರ್ವಜನಿಕರಿಗೆ ತೊಂದರೆ ಕೊಟ್ಟ ಹಿನ್ನೆಲೆಯಲ್ಲಿ ಆತನ ಮೇಲೆ ಎ್ಐಆರ್ ದಾಖಲಿಸಿ ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಸ್‌ಜೆಪಿ ರಸ್ತೆಯ ನಡುವೆ ಚೇರ್ ಮೇಲೆ ಕುಳಿತು ಕಾಲು ಹಾಕಿಕೊಂಡು ಟೀ ಕುಡಿಯುತ್ತಾ ರೀಲ್ಸ್ ಮಾಡಿ ಆ ವಿಡಿಯೋವನ್ನು ಇನ್‌ಸ್ಪಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದ. ಇದನ್ನು ಗಮನಿಸಿದ ಸೋಷಿಯಲ್ ಮೀಡಿಯಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್‌ಸ್ಟೆಬಲ್ ಬಸಪ್ಪ ಶಿರಗುಪ್ಪಿ ಗಮನಿಸಿ ದೂರು ಸಲ್ಲಿಸಿದ್ದಾರೆ.
ರಸ್ತೆ ನಡುವೆ ಚೇರ್ ಮೇಲೆ ಕುಳಿತು ರೀಲ್ಸ್ ಮಾಡುವ ಮೂಲಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಜತೆಗೆ ವಿಡಿಯೋವನ್ನು ಜಾಲತಾಣದಲ್ಲಿ ಅಪ್‌ಲೋಡ್ ಮಾಡುವ ಮೂಲಕ ಯುವ ಜನರಿಗೆ ತಪ್ಪು ಪ್ರೇರಣೆ ನೀಡುವ ಸಾಧ್ಯತೆ ಇರುತ್ತದೆ. ಆರೋಪಿತನ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಇದರ ಮೇರೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.