ನವದೆಹಲಿ: ಹೌದು. ನೀವು ಓದಿದ ಶೀರ್ಷಿಕೆ ಸರಿಯಾಗಿದೆ. ಇವು ನೋಡಲು ಕುರಿಗಳಂತೆ ಕಾಣುತ್ತವೆ. ಆದರೆ ವರ್ತನೆ ಮಾತ್ರ ನಾಯಿಗಳಂತೆ. ಆದರೆ ಇವು ನಿಜವಾಗಿಯೂ ಹಂದಿಗಳು!
ಇವನ್ನು ಮ್ಯಾಂಗಲಿಕ (ಮಾಂಗಳಿಕ್-ಕುಜ ದೋಷ ಇರುವವರು) ಹಂದಿ ಎಂದೂ ಕರೆಯಲಾಗುತ್ತದೆ. ಇವನ್ನು ನೋಡಿದ ತಕ್ಷಣವೇ ದಪ್ಪ ಚರ್ಮ ಇರುವ ನಾಯಿಗಳೇ ಅಥವಾ ಕುರಿಗಳೇ ಎಂಬ ಅನುಮಾನ ಸಹಜವಾಗಿ ಮೂಡುತ್ತದೆ. ಇವಕ್ಕೆ ನಾಯಿಗಳು ಮತ್ತು ಕುರಿಗಳಿಗೆ ಇರುವಂತೆ ಹೆಚ್ಚುವರಿ ಚರ್ಮದ ಪದರಗಳು ಇರುತ್ತವೆ. ಹಾಗಾಗಿಯೇ ಇವನ್ನು ಕೆಲವೊಮ್ಮೆ ಕುರಿ-ಹಂದಿ ಎಂದು ಕರೆಯುವುದೂ ಉಂಟು.
ಅಮೆರಿಕದ ಪೀಸ್ ರಿಡ್ಜ್ ವನ್ಯಧಾಮದಲ್ಲಿ ಒಂದು ಮ್ಯಾಂಗಲಿಕ ಕುರಿ ಹಂದಿ ಇದೆ. ಇದಕ್ಕೆ ಆಂಗಸ್ ಎಂದು ಹೆಸರಿಡಲಾಗಿದೆ. ಈ ಕುರಿ ಹಂದಿ ಪತ್ತೆಯಾದಾಗ ತುಂಬಾ ನಿಶ್ಯಕ್ತವಾಗಿತ್ತು. ದೇಹತೂಕ ತುಂಬಾ ಕಡಿಮೆಯಿತ್ತು. ಅದರ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಅತ್ಯಂತ ಹೀನಾಯ ಪರಿಸ್ಥಿತಿಯಲ್ಲಿ ವಾಸವಾಗಿದ್ದರಿಂದ ಅಪೌಷ್ಟಿಕ ಸಮಸ್ಯೆಯಿಂದ ಬಳಲುತ್ತಿತ್ತು. ಆದರೆ, ಪೀಸ್ ರಿಡ್ಜ್ ವನ್ಯಧಾಮಕ್ಕೆ ಸ್ಥಳಾಂತರಿಸಿದ ಬಳಿಕ ಅದರ ಆರೋಗ್ಯ ಸಾಕಷ್ಟು ಸುಧಾರಿಸಿದೆ ಎಂದು ವನ್ಯಧಾಮದ ಅಧಿಕಾರಿಗಳು ಹೇಳಿದ್ದಾರೆ.
ಗ್ರಾಮವೊಂದರಲ್ಲಿ ಅತ್ಯಂತ ಅಮಾನವೀಯ ವಾತಾವರಣದಲ್ಲಿ ಕುರಿ ಹಂದಿಗಳನ್ನು ರೈತನೊಬ್ಬ ಸಾಕುತ್ತಿದ್ದ. ಹಾಗಾಗಿ ಅವು ತುಂಬ ನಿಶ್ಯಕ್ತಗೊಂಡು, ಚರ್ಮ ಮೈಗೆ ಅಂಟಿಕೊಂಡಿತ್ತು. ಪ್ರಾಣಿ ದಯಾ ಸಂಸ್ಥೆಯವರು ಆ ಗ್ರಾಮಕ್ಕೆ ಭೇಟಿ ನೀಡುವ ಮುನ್ಸೂಚನೆ ದೊರೆಯುತ್ತಲೇ ಹಲವು ಕುರಿ-ಹಂದಿಗಳನ್ನು ಆತ ಸಾಯಿಸಿದ್ದ. ಆಂಗಸ್ ಒಂದೇ ಉಳಿದುಕೊಂಡಿದ್ದು. ಅದನ್ನು ಈಗ ವನ್ಯಧಾಮದಲ್ಲಿ ಸಂರಕ್ಷಿಸಲಾಗಿದೆ ಎಂದು ವನ್ಯಧಾಮದ ಅಧಿಕಾರಿಗಳು ತಿಳಿಸಿದ್ದಾರೆ.
ಮ್ಯಾಂಗಲಿಟ್ಸಾಸ್ ಎಂಬು ಗುಂಪಿಗೆ ಸೇರಿದ ಮ್ಯಾಂಗಲಿಕ ಕುರಿ ಹಂದಿಗಳು ಹಂಗೇರಿ ಮೂಲದ್ದಾಗಿವೆ. ಇವನ್ನು ಅಲ್ಲಿ ಆಹಾರಕ್ಕಾಗಿ ಸಾಕಲಾಗುತ್ತದೆ. 19ನೇ ಶತಮಾನದಲ್ಲಿ ಕ್ರಾಸ್ಬ್ರೀಡಿಂಗ್ ಮೂಲಕ ಈ ತಳಿಯನ್ನು ಸಂಶೋಧಿಸಲಾಗಿದೆ. ಮೂರು ಬಗೆಯ ಕುರಿ ಹಂದಿಗಳು ಲಭ್ಯ ಇವೆ. ಇವುಗಳು ಬೆಳೆದು ದೊಡ್ಡದಾದ ಬಳಿಕ 4 ಇಂಚಿನಷ್ಟು ದಪ್ಪನಾದ ಚರ್ಮವನ್ನು ಹೊಂದುತ್ತವೆ. ಬೆನ್ನುಹುರಿ ನಡುಗಿಸುವ ಚಳಿಯನ್ನೂ ಇವು ತಡೆದುಕೊಳ್ಳಬಲ್ಲವು.