ಸುಮಾರು 35 ವರ್ಷಗಳಿಂದ ದೂರವಿದ್ದ ನಾನಾ ಪಾಟೇಕರ್ ದಂಪತಿ 
ನ್ಯೂಸ್

35 ವರ್ಷ ಪ್ರತ್ಯೇಕವಾಗಿದ್ದರೂ ಡಿವೋರ್ಸ್ ಆಗಿರಲಿಲ್ಲ; ನಾನಾ ಪಾಟೇಕರ್-ನೀಲಕಾಂತಿ ಯಾಕೆ ದೂರವಾದ್ರು? | Nana Patekar Wife

ನಾನಾ ಪಾಟೇಕರ್ ಮತ್ತು ನೀಲಕಾಂತಿ ಪಾಟೇಕರ್ ಸುಮಾರು 35 ವರ್ಷಗಳಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಆದರೆ ಇಬ್ಬರೂ ವಿಚ್ಛೇದನ ಪಡೆದಿರಲಿಲ್ಲ. ಅವರ ದಾಂಪತ್ಯದ ಕುರಿತು ಇಲ್ಲಿದೆ ಮಾಹಿತಿ.

Nana Patekar: ಹಿರಿಯ ನಟ ನಾನಾ ಪಾಟೇಕರ್ ತಮ್ಮ 75ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದ ಬೆನ್ನಲ್ಲೇ ಸಿನಿಮಾ ಬದುಕಿನ ಜತೆಗೆ ವೈಯಕ್ತಿಕ ಜೀವನದ ಹಲವು ವಿಚಾರಗಳೂ ಮತ್ತೆ ಚರ್ಚೆಗೆ ಬಂದಿವೆ.

ನಾನಾ ಪಾಟೇಕರ್ ಅವರ ವೈಯಕ್ತಿಕ ಬದುಕಿನ ವಿಚಾರ ಬಂದಾಗ ಹೆಚ್ಚು ಕುತೂಹಲ ಮೂಡಿಸುವುದು ಅವರ ದಾಂಪತ್ಯ ಜೀವನ. ಪತ್ನಿ ನೀಲಕಾಂತಿ ಪಾಟೇಕರ್ ಅವರಿಂದ ಸುಮಾರು 35 ವರ್ಷಗಳ ಕಾಲ ಪ್ರತ್ಯೇಕವಾಗಿ ಬದುಕಿದ್ದರೂ, ಇಬ್ಬರೂ ವಿಚ್ಛೇದನ ಪಡೆದಿರಲಿಲ್ಲ. ಹಾಗಾದ್ರೆ ಈ ದಂಪತಿ ಯಾಕೆ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು?

ರಂಗಭೂಮಿಯಲ್ಲಿ ಶುರುವಾದ ಸ್ನೇಹ

ನಾನಾ ಪಾಟೇಕರ್ ಮತ್ತು ನೀಲಕಾಂತಿ ಪಾಟೇಕರ್ ಅವರು ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಒಟ್ಟಿಗೆ ಕೆಲಸ ಮಾಡುತ್ತಿದ್ದಂತೆ ಇಬ್ಬರ ನಡುವೆ ಸ್ನೇಹ ಬೆಳೆದು, ಅದು ಮುಂದೆ ಪ್ರೀತಿಗೆ ತಿರುಗಿತ್ತು. ಬಳಿಕ 1978ರಲ್ಲಿ ಇಬ್ಬರೂ ಮದುವೆಯಾದರು.

ದಂಪತಿಗೆ ಇಬ್ಬರು ಪುತ್ರರು

ನೀಲಕಾಂತಿ ಕೂಡ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿಕೊಂಡಿದ್ದಾರೆ. ಕೇವಲ ಆರು ವರ್ಷದವರಿದ್ದಾಗಲೇ ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ಬಳಿಕ ಮರಾಠಿ ಸಿನಿಮಾಗಳಲ್ಲಿ ನಟಿಸಿದರು. ನಟನೆಯ ಜತೆಗೆ ಬರವಣಿಗೆಯಲ್ಲೂ ಗುರುತಿಸಿಕೊಂಡ ಅವರು, ತಮ್ಮ ಬರವಣಿಗೆಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಸಿನಿಮಾದಿಂದ ಹಲವು ವರ್ಷ ದೂರ ಉಳಿದಿದ್ದ ನೀಲಕಾಂತಿ, ಬಳಿಕ ವಿಕ್ಕಿ ಕೌಶಲ್ ಅಭಿನಯದ ‘ಛಾವಾ’ ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿದ್ದರು.

ಎರಡೂವರೆ ವರ್ಷದ ಮಗನನ್ನು ಕಳೆದುಕೊಂಡ ನೋವು

ನಾನಾ ಮತ್ತು ನೀಲಕಾಂತಿ ಅವರ ದಾಂಪತ್ಯ ಜೀವನದಲ್ಲಿ ಮರೆಯಲಾಗದ ನೋವಿನ ಘಟನೆಯೂ ನಡೆದಿತ್ತು. ಅವರ ಹಿರಿಯ ಪುತ್ರ ದುರ್ವಾಸ ಕೇವಲ ಎರಡೂವರೆ ವರ್ಷದವನಾಗಿದ್ದಾಗಲೇ ನಿಧನರಾಗಿದ್ದರು. ವರದಿಗಳ ಪ್ರಕಾರ, ದುರ್ವಾಸ ಹುಟ್ಟಿನಿಂದಲೇ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಮಗನನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡ ನೋವು ದಂಪತಿಯ ಬದುಕಿನ ಮೇಲೆ ದೊಡ್ಡ ಪರಿಣಾಮ ಬೀರಿತ್ತು.

ನಾನಾ ಪಾಟೇಕರ್ ದಂಪತಿಗೆ ಇಬ್ಬರು ಪುತ್ರರು

ಇನ್ನು ಕಿರಿಯ ಪುತ್ರ ಮಲ್ಹಾರ್ ಪಾಟೇಕರ್ ಸಿನಿಮಾ ಕ್ಷೇತ್ರದಲ್ಲಿ ಕ್ಯಾಮೆರಾ ಮುಂದೆ ಬರುವ ಬದಲು ಹಿಂದಿನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ದಿ ಅಟ್ಯಾಕ್ಸ್ ಆಫ್ 26/11’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ನಾನಾ ಸಾಹೇಬ್ ಪ್ರೊಡಕ್ಷನ್ ಹೌಸ್‌ನೊಂದಿಗೂ ಅವರು ಕೆಲಸ ಮಾಡಿದ್ದಾರೆ ಎಂದು ವರದಿಯಾಗಿದೆ. ತಂದೆಯಂತೆ ಮಲ್ಹಾರ್ ಕೂಡ ಹೆಚ್ಚು ಪ್ರಚಾರದಲ್ಲಿರಲು ಇಷ್ಟಪಡದೆ, ತಮ್ಮ ವೈಯಕ್ತಿಕ ಬದುಕನ್ನು ಖಾಸಗಿಯಾಗಿಯೇ ಇಟ್ಟುಕೊಂಡಿದ್ದಾರೆ.

35 ವರ್ಷ ಪ್ರತ್ಯೇಕವಾಗಿದ್ದರೂ ಡಿವೋರ್ಸ್ ಆಗಲಿಲ್ಲ?

ನಾನಾ ಪಾಟೇಕರ್ ಮತ್ತು ನೀಲಕಾಂತಿ ದಂಪತಿ ಸುಮಾರು 35 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ. ಆದ್ರೆ ಇಬ್ಬರೂ ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿರಲಿಲ್ಲ. ಈ ಬಗ್ಗೆ ನಾನಾ ಪಾಟೇಕರ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದರು.

ತಮ್ಮಿಬ್ಬರ ವ್ಯಕ್ತಿತ್ವ ಹಾಗೂ ಆಲೋಚನಾ ರೀತಿಯಲ್ಲಿ ಸಾಕಷ್ಟು ವ್ಯತ್ಯಾಸವಿದ್ದ ಕಾರಣ, ಒಂದೇ ಮನೆಯಲ್ಲಿ ಬದುಕುವುದು ಕಷ್ಟವಾಗಿತ್ತು ಎಂದು ಅವರು ಹೇಳಿದ್ದರು ಎನ್ನಲಾಗಿದೆ. ಹೀಗಾಗಿ ಇಬ್ಬರೂ ಪರಸ್ಪರ ಅರ್ಥ ಮಾಡಿಕೊಂಡು ಪ್ರತ್ಯೇಕವಾಗಿ ಜೀವನ ನಡೆಸಲು ನಿರ್ಧರಿಸಿದ್ದರು. ವಿಚ್ಛೇದನ ಪಡೆಯದಿದ್ದರೂ, ನೀಲಕಾಂತಿ ಬಗ್ಗೆ ನಾನಾ ಗೌರವ ಹೊಂದಿದ್ದರು ಎಂದು ವರದಿಯಾಗಿದೆ.

ಡಿವೋರ್ಸ್ ಇಲ್ಲದೆ ತಮ್ಮದೇ ದಾರಿ

ನಾನಾ ಪಾಟೇಕರ್ ಮತ್ತು ನೀಲಕಾಂತಿ ಅವರ ಸಂಬಂಧ ಸಾಮಾನ್ಯ ದಾಂಪತ್ಯಗಳಿಗಿಂತ ಕೊಂಚ ಭಿನ್ನವಾಗಿತ್ತು. ವ್ಯಕ್ತಿತ್ವ ಮತ್ತು ಆಲೋಚನೆಗಳಲ್ಲಿ ಭಿನ್ನತೆ ಇದ್ದರೂ, ಇಬ್ಬರೂ ಪರಸ್ಪರ ಒಪ್ಪಿಗೆಯಿಂದಲೇ ಪ್ರತ್ಯೇಕವಾಗಿ ಬದುಕಲು ನಿರ್ಧರಿಸಿದ್ದರು. ಕಾನೂನಾತ್ಮಕವಾಗಿ ಸಂಬಂಧ ಮುರಿದುಕೊಳ್ಳದೆ, ತಮ್ಮದೇ ಜೀವನ ನಡೆಸಿದ ಈ ದಂಪತಿಯ ಕಥೆ ನಾನಾ ಪಾಟೇಕರ್ ಅವರ ನಿಧನದ ಬಳಿಕ ಮತ್ತೊಮ್ಮೆ ಚರ್ಚೆಗೆ ಬಂದಿದೆ. (ಏಜೆನ್ಸೀಸ್)