ಕೋಲ್ಕತಾ: ದೇಶಾದ್ಯಂತ ಲಾಕ್ಡೌನ್ ಅನ್ನು ಮೇ 17ರವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ಮದ್ಯ ಮಾರಾಟದ ಜತೆಗೆ ಅನಗತ್ಯ ಓಡಾಟ, ಸಂಚಾರವನ್ನೂ ನಿಷೇಧಿಸಲಾಗಿದೆ. ಆದರೂ ಇಲ್ಲಿನ ಮೂವರು ವಾಣಿಜ್ಯೋದ್ಯಮಿಗಳು ಒಂದೆಡೆ ಸೇರಿ ಮದ್ಯಪಾನ ಮಾಡಿದ್ದರು.
ಸಂಪೂರ್ಣ ಪಾನಮತ್ತರಾದ ಬಳಿಕ ನಡುರಾತ್ರಿಯಲ್ಲಿ ಜಾಲಿ ರೈಡ್ಗೆ ಹೋಗಬೇಕಿಸಿತು. ತಕ್ಷಣವೇ ಐಷಾರಾಮಿ ಆಡಿ ಕಾರನ್ನು ತೆಗೆದುಕೊಂಡು ಅವರೆಲ್ಲರೂ ಜಾಲಿ ರೈಡ್ಗೆ ಹೊರಟರು. ಆದರೆ, ಸೇರಿದ್ದು ಮಾತ್ರ ಜೈಲು...!
ಹೌದು. ಕಂಠಮಟ್ಟ ಕುಡಿದಿದ್ದ ಕಾರಿನ ಚಾಲಕ ಬರಿದಾದ ರಸೆಲ್ ಸ್ಟ್ರೀಟ್ ಮತ್ತು ಮಿಡಲ್ಟನ್ ಸ್ಟ್ರೀಟ್ನ ಮಧ್ಯೆ ಮಿತಿಮೀರಿದ ವೇಗದಲ್ಲಿ ಕಾರು ಚಲಾಯಿಸುತ್ತಿದ್ದ. ಇದನ್ನು ಗಮನಿಸಿದ ಕೋಲ್ಕತದ ಶೇಕ್ಸ್ಪಿಯರ್ ಸರಾನಿ ಪೊಲೀಸ್ ಠಾಣೆ ಸಿಬ್ಬಂದಿ ಕಾರನ್ನು ತಡೆದಿದ್ದರು.
ಕಾರಿನ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ನೋಂದಣಿ ಸಂಖ್ಯೆ ಅಳವಡಿಸಿಕೊಂಡು ಬಳಸುತ್ತಿರುವುದು ಪತ್ತೆಯಾಯಿತು. ಈ ನಕಲಿ ನಂಬರ್ ಬಳಸಿ ಕೆಲವರ್ಷಗಳ ಹಿಂದೆ ಈ ಕಾರನ್ನು ಕೊರಿಯಾದ ರಾಯಭಾರ ಕಚೇರಿಗೆ ಬಾಡಿಗೆಗೆ ಬಿಟ್ಟಿದ್ದೂ ಗೊತ್ತಾಯಿತು.
ಇದನ್ನೂ ಓದಿ: ರೆಡ್ ಜೋನ್ನಲ್ಲೂ ಆರ್ಥಿಕ ಚಟುವಟಿಕೆ ಆರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್, ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯ
ಈ ಎಲ್ಲ ಕಾರಣಗಳಿಗಾಗಿ ಕಾರಿನ ಮಾಲೀಕ ಹಾಗೂ ಅದಲ್ಲಿದ್ದ ಇನ್ನಿಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ 419, 417, 420, 120ಬಿ, 467, 469, 468 ಮತ್ತು 471 ವಿಧಿಗಳನ್ವಯ ವಂಚನೆ, ಕ್ರಿಮಿನಲ್ ಸಂಚು ಮತ್ತು ಮೋಸದ ಆರೋಪಗಳಡಿ ದೂರು ದಾಖಲಿಸಿಕೊಳ್ಳಲಾಗಿದೆ.
ಅಲ್ಲದೆ, ಮೋಟಾರು ವಾಹನ ಕಾಯ್ದೆಯ 85ನೇ ವಿಧಿಯನ್ವಯ (ಪಾನಮತ್ತನಾಗಿ ವಾಹನ ಚಾಲನೆ) ಹಾಗೂ ಕೋಲ್ಕತಾ ಪೊಲೀಸ್ ಅಧಿನಿಯಮಗಳ ಉಲ್ಲಂಘನೆ ಆರೋಪದಲ್ಲಿ ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಕೋಲ್ಕತಾ ಪೊಲೀಸರು ಮಾಹಿತಿ ನೀಡಿದ್ದಾರೆ.