ಹುಬ್ಬಳ್ಳಿ: ಮೂಡಾ ಹಗರಣದಲ್ಲಿ ಸಿಲುಕಿದ FIR Against Siddaramaiah ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡದಿದ್ದರೆ ಸಿಬಿಐ ತನಿಖೆಗೆ ವಹಿಸಲಿ. ಅವರು ನೈತಿಕತೆ ಇದ್ದರೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ಇಲ್ಲವೇ, ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಒತ್ತಾಯ ಮಾಡಿದರು.
ಮೂಡಾ ಹಗರಣದ A1 ಆರೋಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಗಿದ್ದರಿಂದ ಇಲ್ಲಿಯ ಅಧಿಕಾರಿಗಳು ತಮ್ಮ ವಿರುದ್ಧ ಸರಿಯಾದ ತನಿಖೆ ಮಾಡಲ್ಲ. ಪರಿಣಾಮ ಸತ್ಯ ಹೊರ ಬರುವುದಿಲ್ಲ ಎಂದು ಜೋಶಿ ಹೇಳಿದರು.
ಇದನ್ನೂ ಓದಿ: Telangana: ಡಿಸಿಎಂ ಭಟ್ಟಿ ವಿಕ್ರಮಾರ್ಕ ಮಲ್ಲು ಮನೆಯಲ್ಲಿ ಕಳ್ಳತನ; ಚಿನ್ನದ ಬಿಸ್ಕತ್, ನಗದು, ಚಿನ್ನಾಭರಣ ದರೋಡೆ
ಇತ್ತೀಚೆಗೆಷ್ಟೇ ಲೋಕಾಯುಕ್ತಕ್ಕೆ ತಮಗೆ ಬೇಕಾದವರನ್ನು ನೇಮಕ ಮಾಡಿಕೊಂಡಿದ್ದಾರೆ. ಹೀಗಿರುವಾಗ ಸಿಎಂ ವಿರುದ್ಧ ಲೋಕಾಯುಕ್ತ ಎಸ್ಪಿ ಆಗಲಿ ಕರ್ನಾಟಕ ಪೊಲೀಸ್ ಆಗಲಿ ಪಾರದರ್ಶಕ ತನಿಖೆ ನಡೆಸೋದು ಅಸಾಧ್ಯದ ಮಾತು. ಹಾಗಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ಇಲ್ಲವೇ ಸಿಬಿಐಗೆ ವಹಿಸಬೇಕು ಎಂದು ಜೋಶಿ ಒತ್ತಾಯಿಸಿದರು.
ಸಿಎಂ ಸಿದ್ದರಾಮಯ್ಯ ಅವರ ಬಂಧನ ಕಾನೂನಿಗೆ ಬಿಟ್ಟ ವಿಷಯ. ಆದರೆ, ಅವರದ್ದೇ ಸರ್ಕಾರ ಇರುವುದರಿಂದ ಪ್ರಕರಣ ಸುದೀರ್ಘವಾಗಲಿದೆ. ನಮ್ಮ ಹೋರಾಟವೂ ಮುಂದುವರಿಯಲಿದೆ. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ನೈತಿಕವಾಗಿ ದಿವಾಳಿ ಎದ್ದಿದೆ. ನಿರ್ಲಜ್ಜೆಯ ಸಂಸ್ಕೃತಿ, ಸರ್ಕಾರ ಇವರದ್ದಾಗಿದೆ ಎಂದು ಜೋಶಿ ಕಿಡಿ ಕಾರಿದರು.
ವಾದ್ರಾ, ಭೂ ಅಕ್ರಮ ಹೀಗೆ ಸಾಕಷ್ಟು ಪ್ರಕರಣಗಳನ್ನು ಹೊತ್ತಿರುವ ಕಾಂಗ್ರೆಸ್ ಹೈಕಮಾಂಡೇ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದೆ. 2011ರಲ್ಲಿ ರಾಜ್ಯಪಾಲರು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದು ಇದೇ ಕಾಂಗ್ರೆಸ್ ನಾಯಕರು ಹೇಳಿದ್ದರು ಎಂದು ಜೋಶಿ ಲೇವಡಿ ಮಾಡಿದರು.
ಈಗ ತಮ್ಮ ವಿರುದ್ಧ ತನಿಖೆಗೆ ಅನುಮತಿ ನೀಡಿದಾಕ್ಷಣ ರಾಜ್ಯಪಾಲರು ಸಂವಿಧಾನ ಮೀರಿದ್ದಾರೆ ಎನ್ನುತ್ತಿದ್ದಾರೆ. ಇದು ಕಾಂಗ್ರೆಸ್ಸಿಗರ ಅವಕಾಶವಾದಿತನ ಹಾಗೂ ಸಮಯ ಸಾಧಕ ಪ್ರವೃತ್ತಿಯನ್ನು ತೋರುತ್ತದೆ ಎಂದು ಸಚಿವ ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡರು.
2011ರಲ್ಲಿ ಗೋಧ್ರಾ ಘಟನೆ ಆದಾಗ ಸಿಎಂ ಸಿದ್ದರಾಮಯ್ಯ ಏಕೆ ಮೋದಿ ಅವರ ವಿರುದ್ಧ ಧ್ವನಿ ಎತ್ತಲಿಲ್ಲ? ಎಂದು ಪ್ರಶ್ನಿಸಿದ ಜೋಶಿ, ಆಗ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಅದರಲ್ಲಿ ಸಿಲುಕಿಸುವ ಪ್ರಯತ್ನ ಮಾಡಿದ್ದು ಕಾಂಗ್ರೆಸ್ ಎಂದು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸರ್ವರನ್ನೂ ಸಾಮಾಜಿಕ ನ್ಯಾಯದಲ್ಲೇ ಕಾಣುತ್ತಿದ್ದಾರೆ. ಗೋದ್ರಾ, ಗೋದ್ರೋತ್ತರ ಘಟನೆಗಳಲ್ಲಿ ಗುಜರಾತಿನ ಅಂದಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ಪಾತ್ರವೇ ಇಲ್ಲವೆಂದು ಕೇಂದ್ರ ಜೋಶಿ ಸ್ಪಷ್ಟಪಡಿಸಿದರು.