Bihar Viral Video: ಪಾಟ್ನಾದಲ್ಲಿ ರಸ್ತೆ ನಿರ್ಮಾಣಕ್ಕೆ ತಂದಿದ್ದ ಹಸಿ ಸಿಮೆಂಟ್ ಮಿಶ್ರಣವನ್ನೇ ಗ್ರಾಮಸ್ಥರು ಬಾಚಿಕೊಂಡು ಮನೆಗೆ ಹೊತ್ತೊಯ್ದಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ಪಾತ್ರೆ, ಬಕೆಟ್, ಬುಟ್ಟಿಗಳಲ್ಲಿ ಸಿಮೆಂಟ್ ತುಂಬಿಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆ ಜೆಹಾನಾಬಾದ್ ಜಿಲ್ಲೆಯ ಮಖ್ದುಂಪುರ್ ಬ್ಲಾಕ್‌ನ ಔದಾನ್ ಬಿಘಾ ಗ್ರಾಮದಲ್ಲಿ ನಡೆದಿದ್ದು, ಇದೀಗ ವಿಡಿಯೋ ಮತ್ತೆ ಹರಿದಾಡುತ್ತಿದೆ.
ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಯೋಜನೆಯಡಿ ನಿರ್ಮಿಸುತ್ತಿದ್ದ 3 ಕಿ.ಮೀ. ರಸ್ತೆ ಕಾಮಗಾರಿ ವೇಳೆ, ರಸ್ತೆ ಸಮತಟ್ಟುಗೊಳಿಸುವ ಮೊದಲೇ ಗ್ರಾಮಸ್ಥರು ಬಂದು ಹಸಿ ಸಿಮೆಂಟ್ ಮಿಶ್ರಣವನ್ನು ತಟ್ಟೆ, ಬಕೆಟ್, ಬುಟ್ಟಿಗಳಲ್ಲಿ ತುಂಬಿಕೊಂಡು ಹೋಗಿದ್ದಾರೆ. ಮನೆಗಳ ನಿರ್ಮಾಣಕ್ಕೆ ಬಳಸಿಕೊಳ್ಳಲು ಸಿಮೆಂಟ್ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಸಿಮೆಂಟ್ ಮಿಶ್ರಣವನ್ನು ಗ್ರಾಮಸ್ಥರು ತೆಗೆದುಕೊಂಡು ಹೋಗಿದ್ದರಿಂದ ರಸ್ತೆ ಕಾಮಗಾರಿಗೂ ತೊಂದರೆಯಾಗಿದೆ. ಹಾಕಿದ್ದ ಮಿಶ್ರಣ ಬಹುತೇಕ ಖಾಲಿಯಾದ ಹಿನ್ನೆಲೆಯಲ್ಲಿ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ಆಸ್ತಿ ಹಾಗೂ ನಾಗರಿಕ ಪ್ರಜ್ಞೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ.
ವಿಡಿಯೋ ನೋಡಿದ ನೆಟ್ಟಿಗರು ಘಟನೆಯನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ. ಕೆಲವರು ಇದನ್ನು ‘ಟೇಕ್ ಹೋಮ್ ಇನ್‌ಫ್ರಾಸ್ಟ್ರಕ್ಚರ್ ಯೋಜನೆ’ ಎಂದು ಕರೆದರೆ, ಮತ್ತೆ ಕೆಲವರು ಬಿಹಾರದ ‘ರಿಸೈಕ್ಲಿಂಗ್ ಗೇಮ್’ ಎಂದು ವ್ಯಂಗ್ಯವಾಡಿದ್ದಾರೆ.
ಬಿಹಾರದಲ್ಲಿ ಸಾರ್ವಜನಿಕ ಆಸ್ತಿ ಕಳ್ಳತನದ ಇಂಥ ವಿಚಿತ್ರ ಪ್ರಕರಣಗಳು ಈ ಹಿಂದೆಯೂ ನಡೆದಿವೆ. ರೋಹತಾಸ್‌ನಲ್ಲಿ ಕಬ್ಬಿಣದ ಸೇತುವೆ ಕದ್ದರೆ, ಸಮಸ್ತಿಪುರ ಮತ್ತು ಮಧುಬನಿಯಲ್ಲಿ ರೈಲ್ವೆ ಇಂಜಿನ್, ಹಳಿಗಳ ಕಳ್ಳತನವಾಗಿತ್ತು. ಪಾಟ್ನಾದಲ್ಲಿ ಮೊಬೈಲ್ ಟವರ್ ಕದ್ದ ಪ್ರಕರಣವೂ ವರದಿಯಾಗಿತ್ತು.