ಬೆಂಗಳೂರು: ರೌಡಿಶೀಟರ್ ಹೈದರ್ ಅಲಿ (೩೮) ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳು ಒಟ್ಟಿಗೆ ಸೇರಿ ಭೋಜನ ಸೇವಿಸಿರುವ ವಿಡಿಯೋ ವೈರಲ್ ಆಗಿದೆ.
ಕಳೆದ ವರ್ಷ ರಂಜಾನ್ ವೇಳೆ ರೆಸ್ಟೋರೆಂಟ್‌ವೊಂದರಲ್ಲಿ ಸೇರಿದ್ದ ಆರೋಪಿಗಳು ಒಟ್ಟಿಗೆ ಊಟ ಮಾಡಿದ್ದರು. ಈ ವೇಳೆ ಒಬ್ಬರಿಗೊಬ್ಬರು ಬಾಯಿಗೆ ತುತ್ತಿಟ್ಟಿದ್ದರು. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರೋಪಿಗಳು ಒಂದೇ ತಟ್ಟೆಯಲ್ಲಿ ಅನ್ನ ತಿಂದು ಮುಹೂರ್ತ ಇಟ್ಟಿದ್ದಾರೆ ಎಂಬ ಮಾತು ಹರಿದಾಡುತ್ತಿದೆ.
ಕಳೆದ ವರ್ಷ ರಂಜಾನ್ ವೇಳೆ ಆರೋಪಿ ನಾಜ್ ಹಾಗೂ ಹೈದರ್ ಅಲಿ ರಾಜಿಯಾಗಿದ್ದರು. ಈ ರಾಜಿ ವೇಳೆ ಎಲ್ಲರೂ ಒಟ್ಟಿಗೆ ಸೇರಿ ಭರ್ಜರಿ ಊಟ ಕೂಡ ಮಾಡಿದ್ದರು. ಈ ಸಮಯದಲ್ಲಿ ಹೈದರ್ ಖುದ್ದು ಅಬ್ಬಾಸ್ ಎಂಬಾತನ ಬಾಯಿಗೆ ತುತ್ತು ತಿನ್ನಿಸಿದ್ದಾನೆ. ಆರೋಪಿ ನಾಜ್ ಕೂಡ ಖುಷಿಖುಷಿಯಾಗಿ ಹೈದರ್ ಜತೆಗೆ ಊಟ ಮಾಡಿ ವರ್ಷದ ನಂತರ ಇದೇ ಹೈದರ್‌ನನ್ನು ಸಂಚು ರೂಪಿಸಿ ಮಾರಕಾಸಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ.
ಹತ್ಯೆಗೆ ರಾಜಕೀಯ ವೈಷಮ್ಯವೇ ಕಾರಣ!
ಹೈದರ್ ಅಲಿಯ ಕೊಲೆಗೆ ರಾಜಕೀಯ ವೈಷಮ್ಯವೇ ಕಾರಣ ಎಂದು ಅವನ ಅತ್ತಿಗೆ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತಾಡಿರುವ ಅವರು, ಹೈದರ್ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದ ಮತ್ತು ಕೆಪಿಸಿಸಿಯಲ್ಲಿ ಸ್ಥಾನವೊಂದು ಸಿಕ್ಕ ಬಳಿಕ ಏರಿಯಾದಲ್ಲಿ ಅವನ ವರ್ಚಸ್ಸು ಮತ್ತು ಪ್ರಭಾವ ಹೆಚ್ಚಾಗಿತ್ತು, ಅದೂ ಅಲ್ಲದೆ ನನ್ನ ಪತಿ ಸೈಯಾದ್ ಸಲೀಂ ವಾರ್ಡ್ ಪ್ರೆಸಿಡೆಂಟ್ ಆಗಿದ್ದು, ಕಳೆದ ೨೨ ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನೆಲ ಸಹಿಸಲಾಗದೆ ಅಬ್ಬಾಸ್ ಮತ್ತು ಸುಲ್ತಾನ್ ಸೇರಿ ಹೈದರ್ ಕೊಲೆ ಮಾಡಿಸಿದ್ದಾರೆ. ಇವರೊಂದಿಗೆ ನಯಾಜ್ ಪಾಷಾ ಕೂಡ ದುಷ್ಟನೇ, ಅದರೆ ಮುಗ್ಧನಂತೆ ನಟಿಸುತ್ತಾನೆ ಎಂದು ಆರೋಪಿಸಿದ್ದಾರೆ. ಮತ್ತೊಂದೆಡೆ ಹೈದರ್ ಅಲಿ ಹತ್ಯೆಗೆ ದುಬೈನಿಂದ ಹಣ ಂಡಿಗ್ ಆಗಿತ್ತು ಎನ್ನಲಾಗಿದೆ. ಆರೋಪಿಗಳು ಫೆ.೨೩ರ ಮುಂಜಾನೆ ೧.೧೦ಕ್ಕೆ ಅಶೋಕನಗರ ಫುಟ್‌ಬಾಲ್ ಸ್ಟೇಡಿಯಂನ ಗೇಟ್ ಬಳಿ ಹೈದರ್ ಅಲಿ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಿದ್ದರು.