Zodiac Signs : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು ಕೂಡ ಇದ್ದಾರೆ. ಪ್ರತಿಯೊಂದು ಕೆಲಸ, ಕಾರ್ಯಗಳನ್ನು ಮಾಡಬೇಕಾದರೂ ಜೋತಿಷ್ಯದ ಮೊರೆ ಹೋಗುತ್ತಾರೆ. ಏಕೆಂದರೆ, ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ದಿನಾಂಕ, ರಾಶಿ, ನಕ್ಷತ್ರ ಹಾಗೂ ಗ್ರಹಗಳ ಸ್ಥಾನ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ. ಅಲ್ಲದೆ, ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಇಡೀ ಜ್ಯೋತಿಷ್ಯ ನಿಂತಿರುವುದು ಗ್ರಹಗಳ ಆಧಾರದ ಮೇಲೆ. ಏಕೆಂದರೆ, ಗ್ರಹಗಳ ಚಲನೆಯು ರಾಶಿಚಕ್ರ ಮತ್ತು ನಕ್ಷತ್ರಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಏನಾದರೂ ನಡೆದರೆ ಎಲ್ಲದಕ್ಕೂ ಗ್ರಹಗತಿಗಳೇ ಕಾರಣ ಎಂದು ನಮ್ಮ ಹಿರಿಯರು ಹೇಳುವುದನ್ನು ಕೂಡ ನಾವು ನೋಡಿದ್ದೇವೆ. ಇದು ಬಹುತೇಕ ಸಂದರ್ಭಗಳಲ್ಲಿ ನಿಜವೂ ಆಗಿದೆ. ಹೀಗಾಗಿ ಜ್ಯೋತಿಷ್ಯವನ್ನು ಬಹುತೇಕ ಮಂದಿ ನಂಬುತ್ತಾರೆ. ಏನೇ ಕಹಿ ಘಟನೆ ನಡೆದರೆ ಅದಕ್ಕೆ ಜ್ಯೋತಿಷ್ಯದಲ್ಲಿ ಪರಿಹಾರ ಇದೆ ಎಂದು ಅನೇಕ ಮಂದಿ ನಂಬುತ್ತಾರೆ.
ಅಂದಹಾಗೆ, ಪ್ರತಿಯೊಬ್ಬ ಮನುಷ್ಯನು ಸಹ ವಿಶಿಷ್ಟ ಗುಣಗಳೊಂದಿಗೆ ಹುಟ್ಟುತ್ತಾನೆ. ಸಮಾಜದೊಂದಿಗೆ ಬೆಳೆಯುತ್ತಾ ಆತನ ಗುಣಲಕ್ಷಣಗಳಲ್ಲೂ ಸಾಕಷ್ಟು ಬದಲಾವಣೆಗಳಾಗುತ್ತವೆ. ಇಲ್ಲಿ ಎಲ್ಲರಿಗೂ ಎಲ್ಲವೂ ಇಷ್ಟವಾಗಬೇಕು ಅಂತೇನಿಲ್ಲ. ಉದಾಹರಣೆಗೆ ಕೆಲವು ದೇವರನ್ನು ನಂಬಿದರೆ, ಇನ್ನು ಕೆಲವರು ದೇವರೇ ಇಲ್ಲ ಎಂದು ವಾದಿಸುತ್ತಾರೆ. ಇದೆಲ್ಲವೂ ಮನುಷ್ಯನ ಸಹಜ ಗುಣ.
ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಜನ್ಮ ರಾಶಿಯು ಅವರ ಭವಿಷ್ಯದ ಜೀವನದ ಮೇಲೆ ಮತ್ತು ಅವರ ವೈಯಕ್ತಿಕ ನಂಬಿಕೆಗಳ ಮೇಲೆಯೂ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಅದರಂತೆ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿಯೇ ಆಧ್ಯಾತ್ಮಿಕತೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ದೇವರ ಬಗ್ಗೆ ಅಪಾರ ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ. ಆ ರಾಶಿಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ವೃಶ್ಚಿಕ ರಾಶಿಯವರು ದೇವರಲ್ಲಿ ಬಲವಾದ ಭಕ್ತಿಯನ್ನು ಹೊಂದಿರುತ್ತಾರೆ ಮತ್ತು ಆಧ್ಯಾತ್ಮಿಕ ಜೀವನದಲ್ಲಿ ಆಳವಾಗಿ ತೊಡಗಿಸಿಕೊಂಡಿರುತ್ತಾರೆ. ಅವರು ಆದರ್ಶವಾದ, ನಂಬಿಕೆ ಮತ್ತು ಪ್ರಾಮಾಣಿಕತೆಯಂತಹ ಕೆಲವು ಆಧ್ಯಾತ್ಮಿಕ ಗುಣಗಳನ್ನು ಹೊಂದಿರುತ್ತಾರೆ. ಅವರು ವಿವಿಧ ತತ್ವಶಾಸ್ತ್ರಗಳನ್ನು ಓದುವುದು ಮತ್ತು ಚರ್ಚಿಸುವುದನ್ನು ಆನಂದಿಸುತ್ತಾರೆ. ಅವರು ಕಾಲಕಾಲಕ್ಕೆ ಬದಲಾವಣೆ ಮತ್ತು ನವೀನತೆಯನ್ನು ಆನಂದಿಸುತ್ತಿದ್ದರು ಕೂಡ ಆಧ್ಯಾತ್ಮಿಕ ಜೀವನದಿಂದ ವಿಮುಕ್ತರಾಗುವುದಿಲ್ಲ.
ಧನುಸ್ಸು ರಾಶಿಯವರು ಆಧ್ಯಾತ್ಮಿಕ ಪ್ರವಾಸಿಗರು ಎಂದೇ ಹೇಳಬಹುದು. ಅವರು ಆಧ್ಯಾತ್ಮದ ಬಗ್ಗೆ ಸಾಕಷ್ಟು ಅನ್ವೇಷಿಸಲು ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸಿಕೊಳ್ಳಲು ಅಂತಹ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಈ ರಾಶಿಯವರು ವೈವಾಹಿಕ ಜೀವನವನ್ನು ಪ್ರವೇಶಿಸಿದರು ಕೂಡ ಒಂದು ನಿರ್ದಿಷ್ಟ ಅವಧಿಯಲ್ಲಿ ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೊಂದುವ ಮತ್ತು ಲೌಕಿಕ ಜೀವನವನ್ನು ದ್ವೇಷಿಸುವ ಸಾಧ್ಯತೆ ಇರುತ್ತದೆ. ಅವರು ಯಾವಾಗಲೂ ತಮ್ಮ ಅಂತಃಪ್ರಜ್ಞೆಯ ಮೇರೆಗೆ ವರ್ತಿಸುತ್ತಾರೆ. ತಮ್ಮನ್ನು ತಾವು ಅನುಮಾನಿಸದೆ, ಸ್ವಯಂ ಅರಿವು ಮತ್ತು ಆತ್ಮವಿಶ್ವಾಸದಿಂದಾಗಿ, ತಮ್ಮ ಭಾವನೆಗಳನ್ನು ಭಯವಿಲ್ಲದೆ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ.
ಕುಂಭ ರಾಶಿಯಲ್ಲಿ ಜನಿಸಿದ ಜನರು ಶನಿಯಿಂದ ಆಳಲ್ಪಡುವುದರಿಂದ, ಬ್ರಹ್ಮಾಂಡದ ಶಕ್ತಿಯ ಬಗ್ಗೆ ಬಲವಾದ ನಂಬಿಕೆಯನ್ನು ಹೊಂದಿರುತ್ತಾರೆ. ಅದೇ ಸಮಯದಲ್ಲಿ, ಅವರು ನ್ಯಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವ ಸ್ವಭಾವವನ್ನು ಹೊಂದಿರುತ್ತಾರೆ. ಅವರ ಆಧ್ಯಾತ್ಮಿಕ ಸ್ವಭಾವವೆಂದರೆ ಆಳವಾಗಿ ಗಮನಿಸುವುದು ಮತ್ತು ಜೀವನದಲ್ಲಿ ಅದನ್ನು ಕಾರ್ಯಗತಗೊಳಿಸುವುದು. ಅವರು ಶಾಂತಿ ಮತ್ತು ನೆಮ್ಮದಿಗಾಗಿ ಆಧ್ಯಾತ್ಮಿಕತೆಯನ್ನು ಬಳಸುತ್ತಾರೆ. ಅವರು ಖಂಡಿತವಾಗಿಯೂ ಆಧ್ಯಾತ್ಮಿಕತೆಯ ಮೂಲಕ ಬರುವ ಶಾಂತಿಯನ್ನು ಆನಂದಿಸುವ ಗುಣವನ್ನು ಹೊಂದಿರುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.