ಬೆಂಗಳೂರಿನ ಆರ್​.ವಿ. ಟೀಚರ್ಸ್​ ಕಾಲೇಜಿನಲ್ಲಿ ನಡೆದ ಎಸ್ಎಸ್ಎಲ್​ಸಿ ಪರೀಕ್ಷೆಯ ದೃಶ್ಯ. 
ನ್ಯೂಸ್

ಎಸ್ಎಸ್​​ಎಲ್​ಸಿ ಪರೀಕ್ಷೆ: ಮೊದಲ ದಿನ ರಾಜ್ಯದ ಎಲ್ಲೆಲ್ಲಿ, ಏನೇನಾಯ್ತು?

ಬೆಂಗಳೂರು: ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಮೊದಲ ದಿನ ಯಶಸ್ವಿಯಾಗಿ ನಡೆದಿದೆ. ಕಳೆದ ವಾರ್ಷಿಕ ಪರೀಕ್ಷೆಗಿಂತಲೂ ಹೆಚ್ಚಿನ ಹಾಜರಾತಿ ಈ ಸಲ ಕಂಡುಬಂದಿದ್ದು, ಮೊದಲ ದಿನದ ಪರೀಕ್ಷೆ ಸುಸೂತ್ರವಾಗಿ ನಡೆದಿರುವ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್​. ಸುರೇಶ್​ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಮೊದಲ ದಿನದ ಪರೀಕ್ಷೆ ವೇಳೆ ರಾಜ್ಯದಲ್ಲಿ ಕಂಡುಬಂದಿರುವ ಕೆಲವು ವಿಶೇಷಗಳನ್ನೂ ಸುದ್ದಿಗಾರರ ಮುಂದೆ ಹಂಚಿಕೊಂಡಿದ್ದಾರೆ.

ಎಸ್​ಎಸ್​ಎಲ್​ಸಿ ಪರೀಕ್ಷಾ ಸಮಯದಲ್ಲಿ ಕಂಡು ಬಂದ ವಿಶೇಷಗಳು

  • ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಇಬ್ಬರು ವಿದ್ಯಾರ್ಥಿನಿಯರಾದ ಶಿಲ್ಪಾ ಮತ್ತು ಸಂಜನಾ ಅವರಿಗೆ ಪರೀಕ್ಷೆಗೆ ಬಂದು ಹೋಗಲು ದೋಣಿಯ ವ್ಯವಸ್ಥೆ ಮಾಡಲಾಗಿತ್ತು. ತಮ್ಮೂರು ಕುರು ದ್ವೀಪ ಪ್ರದೇಶದ ಮನೆಗಳಿಂದ ಈ ಮಕ್ಕಳು ಬೋಟ್ ಮೂಲಕ ಬಂದು ಪರೀಕ್ಷೆ ಬರೆದು ಬೋಟ್‍ನಲ್ಲಿಯೇ ಹಿಂದಿರುಗಿದರು.
  • ದಕ್ಷಿಣಕನ್ನಡದ ಮಂಗಳೂರು ತಾಲೂಕಿನ ತೊಕ್ಕೊಟ್ಟು ಗ್ರಾಮದ ಖಾಸಗಿ ಪ್ರೌಢಶಾಲಾ ಪರೀಕ್ಷಾ ಕೇಂದ್ರದ ಶಾಲೆಯ ವಿಜ್ಞಾನ ಪ್ರಯೋಗಾಲಯದಲ್ಲಿ ವಿದ್ಯುತ್ ಶಾರ್ಟ್ ಸ‌ರ್ಕ್ಯೂಟ್‍ನಿಂದ ಸ್ವಲ್ಪ ಬೆಂಕಿ ಕಾಣಿಸಿಕೊಂಡಿತು. ಕೂಡಲೇ ಆ ಪ್ರಯೋಗಾಲಯದ ಅಕ್ಕಪಕ್ಕದ ಮೂರು ಕೊಠಡಿಯ 36 ಅಭ್ಯರ್ಥಿಗಳನ್ನು ಅದೇ ಪರಿಸರದಲ್ಲಿರುವ ಅದೇ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ 3 ಕೊಠಡಿಗಳಿಗೆ ಸ್ಥಳಾಂತರಿಸಲಾಯಿತು. ಈ ಸ್ಥಳಾಂತರಕ್ಕೆ ತೆಗೆದುಕೊಂಡ ಸಮಯವನ್ನು ಹೆಚ್ಚುವರಿಯಾಗಿ ಈ 3 ಕೊಠಡಿಯ ಅಭ್ಯರ್ಥಿಗಳಿಗೆ ನೀಡಲಾಯಿತು.
  • ಬೆಂಕಿ ಪ್ರಕರಣದಿಂದ ಯಾವುದೇ ತೊಂದರೆಯಾಗಲೀ ಹಾನಿಯಾಗಲಿ ಸಂಭವಿಸಿಲ್ಲ. ಸದರಿ ಪರೀಕ್ಷಾ ಕೇಂದ್ರಕ್ಕೆ ಜಿಪಂ ಸಿಇಒ ಅಗ್ನಿಶಾಮಕದಳದ ಅಧಿಕಾರಿಗಳು, ಪೊಲೀಸ್ ಆಯುಕ್ತರು, ಡಿಡಿಪಿಐ ಪರಿಶೀಲಿಸಿದರು.
  • ದಕ್ಷಿಣಕನ್ನಡ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಸೇರಿ ಹಲವಾರು ಗಡಿ ಭಾಗದ ಜಿಲ್ಲೆಗಳ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಂದ ಒಟ್ಟು 770 ಮಕ್ಕಳು ಬಂದು ಪರೀಕ್ಷೆ ಬರೆದಿದ್ದಾರೆ. ಒಬ್ಬ ನೊಂದಾಯಿತ ಅಭ್ಯರ್ಥಿ ಗೈರು ಹಾಜರಾಗಿದ್ದಾನೆ. ಅವರಿಗೆ ಗಡಿ ಪ್ರದೇಶದಿಂದ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.
  • ಕಲಬುರಗಿ ಜಿಲ್ಲೆಯ ಚಿಮ್ಮನಚೋಡ ಗ್ರಾಮದಲ್ಲಿ ರಾತ್ರಿಯಿಡೀ ಸುರಿದ ತೀವ್ರ ಮಳೆಯಿಂದ ಶಾಲೆಗೆ ಹಾದುಹೋಗುವ ರಸ್ತೆಯಲ್ಲಿ ಮಳೆ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿ ರಸ್ತೆ ಬಂದ್ ಅಗಿತ್ತು. ಅದನ್ನು ನಿಗದಿತ ಅವಧಿಯಲ್ಲಿ ಸರಿಪಡಿಸಲಾದ ಬಳಿಕ ಎಲ್ಲ ಮಕ್ಕಳು ರಸ್ತೆಯಲ್ಲಿ ಸಾಗಿ ಪರೀಕ್ಷೆ ಬರೆದರು.
  • ಕೋಲಾರದ ಕುರುಬರ ಪೇಟೆಯ ನಿವಾಸಿ, ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ 55 ವರ್ಷ ವಯಸ್ಸಿನ ವ್ಯಕ್ತಿ ಪರೀಕ್ಷೆಗೆ ಹಾಜರಾಗಿದ್ದುದು ವಿಶೇಷವಾಗಿತ್ತು. ಖಾಸಗಿ ಅಭ್ಯರ್ಥಿಯಾದ ಅವರು ಕಳೆದ ವರ್ಷ ಪರೀಕ್ಷೆಗೆ ಹಾಜರಾಗಿ ಅನುತ್ತೀರ್ಣರಾಗಿದ್ದರಿಂದ ಈ ಬಾರಿ ಪುನರಾವರ್ತಿತ ಅಭ್ಯರ್ಥಿಯಾಗಿ ಕೋಲಾರದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿದ್ದರು.
  • ರಾಜ್ಯದ ಬಹುತೇಕ ಕಡೆಗಳಲ್ಲಿ ಸಂಘ-ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಉಪಹಾರ ವ್ಯವಸ್ಥೆ ಮಾಡಿದ್ದರು.
  • ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಪರೀಕ್ಷೆ ಬರೆದ ಮಕ್ಕಳ ಉತ್ತರ ಪತ್ರಿಕೆಗಳನ್ನು ಪೊಲೀಸ್ ಕಣ್ಗಾವಲಿನಲ್ಲಿ ನಿಗದಿತ ಪರೀಕ್ಷಾ ಕೇಂದ್ರಕ್ಕೆ ತಂದು ಉತ್ತರ ಪತ್ರಿಕೆಗಳನ್ನು ಬಂಡಲ್ ಮಾಡಲಾಗಿದೆ.
  • ಹಲವಾರು ಕಡೆಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಳಿರು ತೋರಣ ಕಟ್ಟಲಾಗಿತ್ತು. ನಂಜನಗೂಡು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಪರೀಕ್ಷಾ ಕೇಂದ್ರವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಹಲವಾರು ಕಡೆಗಳಲ್ಲಿ ರಂಗೋಲಿ ಹಾಕಲಾಗಿತ್ತು.
  • ಹಲವಾರು ಕಡೆಗಳಲ್ಲಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಕೆಲವೆಡೆ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ಸಾರಿಗೆ ಸೌಲಭ್ಯವಿಲ್ಲದೇ ಯಾವೊಬ್ಬ ಅಭ್ಯರ್ಥಿಯೂ ಪರೀಕ್ಷೆಗೆ ಗೈರು ಹಾಜರಾಗಿಲ್ಲ.
  • ಪರೀಕ್ಷಾ ಪ್ರಕ್ರಿಯೆಯಲ್ಲಿ ನಿಯೋಜಿತರಾಗುವ ಎಲ್ಲ ಸ್ತರದ 1,19,469 ಸಿಬ್ಬಂದಿ ಲಸಿಕೆ ಪಡೆದಿದ್ದರು.
  • ಯಾವುದೇ ಅಭ್ಯರ್ಥಿ ಪರೀಕ್ಷಾ ಅವ್ಯವಹಾರದಲ್ಲಿ ತೊಡಗಿಲ್ಲ.
  • ಅನಾರೋಗ್ಯ ಕಾರಣಗಳಿಂದ 111 ಅಭ್ಯರ್ಥಿಗಳು ವಿಶೇಷ ಕೊಠಡಿಗಳಲ್ಲಿ ಪರೀಕ್ಷೆ ಬರೆದರು.
  • 10,693 ವಲಸೆ ವಿದ್ಯಾರ್ಥಿಗಳು ಸನಿಹದ ಪರೀಕ್ಷಾ ಕೇಂದ್ರಗಳನ್ನು ಆರಿಸಿಕೊಂಡಿದ್ದರು.
  • 2870 ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿದ್ದು ಪರೀಕ್ಷೆ ಬರೆದವರು.
  • ಮುಖ್ಯೋಪಾಧ್ಯಾಯರ ಲಾಗಿನ್‍ನಿಂದ ಪ್ರವೇಶ ಪತ್ರಗಳನ್ನು ವಿತರಿಸಲಾಗಿದೆ. ಶುಲ್ಕ ಪಾವತಿಸದ ಅಭ್ಯರ್ಥಿಗಳಿಗೂ ಬಿಇಒ ಮತ್ತು ಡಿಡಿಪಿಐ ಹಂತದಲ್ಲಿ ಪ್ರವೇಶ ಪತ್ರ ವಿತರಿಸಲಾಗಿದೆ.
  • ಹಾವೇರಿ ಜಿಲ್ಲೆಯ ಚಿಕ್ಕೇರೂರು ಶಾಲೆಯ 30 ವಿದ್ಯಾರ್ಥಿಗಳು ಪರೀಕ್ಷಾ ಅರ್ಜಿ ಭರ್ತಿ ಮಾಡಿ ನಿಗದಿತ ಶುಲ್ಕ ಪಾವತಿಸಿದ್ದರೂ ಶಾಲೆಯ ಶಿಕ್ಷಕರೊಬ್ಬರು ಶುಲ್ಕವನ್ನು ಮಂಡಳಿಗೆ ಪಾವತಿಸದೇ ಇರುವುದರಿಂದ 30 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಾಗಿಲ್ಲ. ಆ 30 ವಿದ್ಯಾರ್ಥಿಗಳು, ಬಾಗಲಕೋಟೆ ಜಿಲ್ಲೆಯ 3 ಮತ್ತು ಕೊರಟಗೆರೆ ವಿದ್ಯಾರ್ಥಿನಿ ಗ್ರೀಷ್ಮಾ ಎನ್. ನಾಯಕ್ ಅವರಿಗೆ ಮುಂದೆ ಆಗಸ್ಟ್​​ನಲ್ಲಿ ನಡೆಯಲಿರುವ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು.
  • ಮಕ್ಕಳು ಸರತಿ ಸಾಲಿನಲ್ಲಿ ಸಾಮಾಜಿಕ ಅಂತರದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಬಂದರು. ನೇರವಾಗಿ ಪರೀಕ್ಷಾ ಕೇಂದ್ರದ ಆರೋಗ್ಯ ತಪಾಸಣಾ ಘಟಕಕ್ಕೆ ಭೇಟಿ ನೀಡಿ ಅಲ್ಲಿ ಜ್ವರ ಪರೀಕ್ಷೆಯ ನಂತರ ಪರೀಕ್ಷಾ ಕೇಂದ್ರದ ಮುಂದೆ ಹಾಕಲಾಗಿದ್ದ ಫಲಕದಲ್ಲಿ ತಮ್ಮ ಕೊಠಡಿ ಸಂಖ್ಯೆಯನ್ನು ನೋಡಿಕೊಂಡು ಪರೀಕ್ಷಾ ಕೊಠಡಿಗಳಿಗೆ ತೆರಳುವ ವ್ಯವಸ್ಥೆ ಮಾಡಲಾಗಿತ್ತು.
  • ಪರೀಕ್ಷಾ ಕೇಂದ್ರದಿಂದ ಹೋಗುವಾಗಲೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ.
  • ಸ್ಕೌಟ್ಸ್-ಗೈಡ್ಸ್ ಸ್ವಯಂಸೇವಕರು ಹಾಜರಿದ್ದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
  • ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಕ್ರಮವಾಗಿ ಕೇರಳದ 441 ಮತ್ತು ಮಹಾರಾಷ್ಟ್ರದ 152 ಮಕ್ಕಳು ಬಂದು ಪರೀಕ್ಷೆ ಬರೆದಿದ್ದಾರೆ. ಅವರಿಗೆ ಗಡಿ ಪ್ರದೇಶದಿಂದ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.

ಒಟ್ಟಾರೆಯಾಗಿ ಪರೀಕ್ಷೆ ಯಾವುದೇ ವಿಘ್ನಗಳಿಲ್ಲದೇ ಯಶಸ್ವಿಯಾಗಿ ನಡೆದಿದ್ದು ಇದಕ್ಕೆ ಕಾರಣೀಭೂತರಾದ ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿ ವೃಂದಕ್ಕೆ ಸಚಿವರು ಕೃತಜ್ಞತೆ ಸಲ್ಲಿಸಿದರು.