ನ್ಯೂಸ್

ಬೆಂಗಳೂರಿನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ವಿಸ್ತರಿಸಿದ ಥರ್ಮೊ ಫಿಷರ್ ಸೈಂಟಿಫಿಕ್

ಪ್ರತಿಕಾಯ ಸಂಶೋಧನೆ ಮತ್ತು ತಯಾರಿಕೆಯಲ್ಲಿ ನಾವೀನ್ಯತೆ ಹೆಚ್ಚಿಸಲು ₹ 160 ಕೋಟಿ ಹೂಡಿಕೆ

• ಮುಂಬರುವ ವರ್ಷಗಳಲ್ಲಿ ಕರ್ನಾಟಕದಲ್ಲಿ 100ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ

ಬೆಂಗಳೂರು: ಥರ್ಮೊ ಫಿಷರ್ನ ವಿಸ್ತರಣೆಗೊಂಡ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆ್ಯಂಡ್ ಡಿ) ಶ್ರೇಷ್ಠತಾ ಕೇಂದ್ರವನ್ನು ಇಂದು ಬೆಂಗಳೂರಿನಲ್ಲಿ ಉದ್ಘಾಟಿಸಲಾಯಿತು. ಈ ಶ್ರೇಷ್ಠತಾ ಕೇಂದ್ರವು ಪ್ರತಿಕಾಯ ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ಪ್ರವರ್ತಕ ಪ್ರಗತಿಗೆ ಬದ್ಧವಾಗಿದೆ. ಭಾರತದಿಂದ ನಾವೀನ್ಯತೆ ಮತ್ತು ವೈಜ್ಞಾನಿಕ ಸಹಯೋಗಕ್ಕೆ ವೇಗ ನೀಡುವ ಕಂಪನಿಯ ಪ್ರಯತ್ನಗಳಲ್ಲಿ ಇದು ಮಹತ್ವದ ಮೈಲಿಗಲ್ಲು ಆಗಿದೆ.

ಶ್ರೇಷ್ಠತಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್, ಕಿಯೊನಿಕ್ಸ್, ಕರ್ನಾಟಕ ಇನ್ನೋವೇಷನ್ ಆ್ಯಂಡ್ ಟೆಕ್ನಾಲಜಿ ಸೊಸೈಟಿಯ (ಕೆಐಟಿಎಸ್) ಹಿರಿಯ ಅಧಿಕಾರಿಗಳು ಹಾಜರಿದ್ದರು.

ಥರ್ಮೊ ಫಿಷರ್ ಸೈಂಟಿಫಿಕ್ ನ ಜೀವ ವಿಜ್ಞಾನ, ರೋಗನಿರ್ಣಯ ಮತ್ತು ಅನ್ವಯಿಕ ವಲಯದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ವಲಯ ಅಧ್ಯಕ್ಷ ಜಿಯಾನ್ಲುಕಾ ಪೆಟ್ಟಿಟಿ, ಥರ್ಮೊ ಫಿಷರ್ ಸೈಂಟಿಫಿಕ್ನ ಭಾರತ ಮತ್ತು ದಕ್ಷಿಣ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ಶ್ರೀನಾಥ್ ವೆಂಕಟೇಶ್ ಮತ್ತು ಥರ್ಮೊ ಫಿಷರ್ ಸೈಂಟಿಫಿಕ್ನ ಎಪಿಎಸಿ ಮತ್ತು ಎಂಇಎ-ದ ಐಟಿ ಮತ್ತು ಡಿಜಿಟಲ್ ಸೊಲ್ಯುಷನ್ಸ್ನ ಉಪಾಧ್ಯಕ್ಷ ಮನೋಜ್ ಪ್ರಸಾದ್ ಅವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಈ ವಿಸ್ತರಣೆ ಯೋಜನೆಗೆ ಥರ್ಮೊ ಫಿಷರ್ ₹ 160 ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆ ಮಾಡಿದೆ. ಇದು ಭಾರತದಲ್ಲಿನ ಸಂಶೋಧನಾ ಪರಿಸರ ವ್ಯವಸ್ಥೆಗೆ ಕಂಪನಿಯ ದೀರ್ಘಕಾಲೀನ ಬದ್ಧತೆಯನ್ನು ಬಲಪಡಿಸುತ್ತದೆ. 37,000 ಚದರ ಅಡಿ ವಿಸ್ತೀರ್ಣದ ಈ ಶ್ರೇಷ್ಠತಾ ಕೇಂದ್ರವು ಇಮ್ಯುನೊಅಸ್ಸೆಸ್, ಪ್ರೋಟೀನ್ ವಿಶ್ಲೇಷಣೆ ಮತ್ತು ಕೋಶ ಆಧಾರಿತ ಅಧ್ಯಯನಗಳಿಗೆ ನೆರವಾಗಲು ಸುಧಾರಿತ ಸ್ವಯಂಚಾಲನೆ ಮತ್ತು ವಿಶ್ಲೇಷಣಾತ್ಮಕ ಸೌಲಭ್ಯಗಳನ್ನು ಒಳಗೊಂಡಿದೆ. ಮುಂಬರುವ ವರ್ಷಗಳಲ್ಲಿ, ವಿಸ್ತರಣೆಯು 100ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ. ಸ್ಥಳೀಯ ಪ್ರತಿಭೆಗಳ ಕೌಶಲವನ್ನು ಬಲಪಡಿಸಲಿದೆ. ಕರ್ನಾಟಕದ ಅಭಿವೃದ್ಧಿ ಹೊಂದುತ್ತಿರುವ ಜೀವ ವಿಜ್ಞಾನ ಪರಿಸರ ವ್ಯವಸ್ಥೆಗೆ ಗಮನಾರ್ಹ ಕೊಡುಗೆ ನೀಡಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಜೈವಿಕ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು , “ಕರ್ನಾಟಕವು ಬಹಳ ಹಿಂದಿನಿಂದಲೂ ಜೈವಿಕ ತಂತ್ರಜ್ಞಾನ ಮತ್ತು ಜೀವ ವಿಜ್ಞಾನಗಳಿಗೆ ಕ್ರಿಯಾಶೀಲ ಕೇಂದ್ರವಾಗಿ ಗಮನ ಸೆಳೆಯುತ್ತಿದೆ. ಥರ್ಮೊ ಫಿಷರ್ನ ಸಂಶೋಧನಾ ಕೇಂದ್ರದ ವಿಸ್ತರಣೆಯು ರಾಜ್ಯ ಸರ್ಕಾರವು ಈ ಉದ್ದೇಶಕ್ಕೆ ನಿರಂತರವಾಗಿ ಒತ್ತು ನೀಡುತ್ತಿರುವುದಕ್ಕೆ ನಿದರ್ಶನವಾಗಿದೆ” ಎಂದು ಹೇಳಿದ್ದಾರೆ.

ಥರ್ಮೊ ಫಿಷರ್ ಸೈಂಟಿಫಿಕ್ ನ ಜೀವ ವಿಜ್ಞಾನ, ರೋಗನಿರ್ಣಯ ಮತ್ತು ಅನ್ವಯಿಕ ವಲಯದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ವಲಯ ಅಧ್ಯಕ್ಷ ಜಿಯಾನ್ಲುಕಾ ಪೆಟ್ಟಿಟಿ ಅವರು ಮಾತನಾಡಿ, "ಕರ್ನಾಟಕ ಸರ್ಕಾರದ ಜೊತೆಗಿನ ನಮ್ಮ ಪಾಲುದಾರಿಕೆಯನ್ನು ಇನ್ನಷ್ಟು ಹೆಚ್ಚಿಸುವುದು ನಮ್ಮ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ. ಥರ್ಮೊ ಫಿಷರ್ಗೆ ಬೆಂಗಳೂರು ಕಾರ್ಯತಂತ್ರದ ಕೇಂದ್ರವಾಗಿದೆ. ಸಂಶೋಧನಾ ಕೇಂದ್ರದ ಈ ವಿಸ್ತರಣೆಯು ಭಾರತದ ನಾವೀನ್ಯತೆ ಪರಿಸರ ವ್ಯವಸ್ಥೆಗೆ ಪೂರಕವಾಗಿರುವ ನಮ್ಮ ದೀರ್ಘಕಾಲೀನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇಲ್ಲಿಯ ಪ್ರತಿಭೆ ಮತ್ತು ಸಾಮರ್ಥ್ಯಗಳಲ್ಲಿ ಹೂಡಿಕೆ ಮಾಡುವ ಮೂಲಕ, ನಾವು ವೈಜ್ಞಾನಿಕ ಪ್ರಗತಿಗೆ ವೇಗ ನೀಡುತ್ತಿದ್ದೇವೆ. ಭಾರತದ ಮತ್ತು ವಿಶ್ವದಾದ್ಯಂತ ಇರುವ ನಮ್ಮ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲಿದ್ದೇವೆ" ಎಂದು ಹೇಳಿದ್ದಾರೆ.

ಈ ವಿಸ್ತರಣೆಯೊಂದಿಗೆ, ಥರ್ಮೊ ಫಿಷರ್ನ ಬೆಂಗಳೂರು ಶ್ರೇಷ್ಠತಾ ಕೇಂದ್ರವು ಕಂಪನಿಯ ಜಾಗತಿಕ ಸಂಶೋಧನೆ ಹಾಗೂ ಅಭಿವೃದ್ಧಿ (R&D) ಸಂಪರ್ಕ ಜಾಲದ ಆಧಾರ ಸ್ತಂಭವಾಗಿ ಕಾರ್ಯನಿರ್ವಹಿಸಲಿದೆ. ಕಳೆದ 18 ವರ್ಷಗಳಲ್ಲಿ, ಈ ಸೌಲಭ್ಯವು ಸಾಂಕ್ರಾಮಿಕ ರೋಗಗಳು, ವೈರಸ್ ನಿರೋಧಕ ಅಧ್ಯಯನಗಳು ಮತ್ತು ಕ್ಯಾನ್ಸರ್ ಜೀವಶಾಸ್ತ್ರದಲ್ಲಿನ ಪ್ರಗತಿಗೆ ಕಾರಣವಾದ 2,000ಕ್ಕೂ ಹೆಚ್ಚು ಉತ್ತಮ-ಗುಣಮಟ್ಟದ ಮರುಸಂಯೋಜಿತ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಿದೆ. ಇದರ ಪ್ರತಿಕಾಯ ದೃಢೀಕರಣ ಕಾರ್ಯಕ್ರಮವು 25,000 ಕ್ಕೂ ಹೆಚ್ಚು ಪ್ರತಿಕಾಯಗಳನ್ನು ಪರೀಕ್ಷಿಸಿದೆ. ಉತ್ಪಾದನಾ ಸಾಮರ್ಥ್ಯಗಳು 2,000ಕ್ಕೂ ಹೆಚ್ಚು ಪ್ರಾಥಮಿಕ ಮತ್ತು ಮಾಧ್ಯವಿಕ ಪ್ರತಿಕಾಯಗಳನ್ನು ಉತ್ಪಾದಿಸಿವೆ. ಇದು ವಿಶ್ವದಾದ್ಯಂತ ಸಂಶೋಧಕರಿಗೆ ಗುಣಮಟ್ಟ ಮತ್ತು ಪುನರುತ್ಪಾದನೆಯನ್ನು ಖಚಿತಪಡಿಸಿದೆ.

ಬೆಂಗಳೂರು- ಭಾರತದಲ್ಲಿನ ಥರ್ಮೊ ಫಿಷರ್ನ ಕಾರ್ಯತಂತ್ರದ ಕೇಂದ್ರವಾಗಿದೆ. ಈ ಕೇಂದ್ರದಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ (ಆರ್ಆ್ಯಂಡ್ಡಿ), ಸಾಫ್ಟ್ವೇರ್ ಮತ್ತು ವೈಜ್ಞಾನಿಕ ಉತ್ಪನ್ನ ತಂಡಗಳಲ್ಲಿ 1,400 ಕ್ಕೂ ಹೆಚ್ಚು ವೃತ್ತಿಪರರು ಕೆಲಸ ಮಾಡುತ್ತಿದ್ದಾರೆ. ಪ್ರತಿಭೆ, ಮೂಲಸೌಕರ್ಯ ಮತ್ತು ಸಾಂಸ್ಥಿಕ ಬೆಂಬಲದಲ್ಲಿನ ನಗರದ ಸಾಮರ್ಥ್ಯವು ಏಷ್ಯಾದಲ್ಲಿ ಪ್ರಮುಖ ಜೀವ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರವಾಗಿ ಕರ್ನಾaಟಕದ ಸ್ಥಾನವನ್ನು ಭದ್ರಪಡಿಸಿದೆ.

ಈ ವಿಸ್ತರಣೆಯು ಕರ್ನಾಟಕದ ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ) ಮಹತ್ವಾಕಾಂಕ್ಷೆಗಳೊಂದಿಗೆ ಸ್ಥಿರವಾಗಿದೆ. ರಾಜ್ಯವನ್ನು ಹೆಚ್ಚಿನ ಮೌಲ್ಯದ ಸಂಶೋಧನೆ-ಆಧಾರಿತ ಕಾರ್ಯಾಚರಣೆಗಳ ತಾಣವಾಗಿ ಬಲಪಡಿಸಲಿದೆ. ಆವಿಷ್ಕಾರ, ವಿನ್ಯಾಸ ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಒಂದೇ ಸೂರಿನಡಿ ಸಂಯೋಜಿಸಲಿದೆ.