Benjamin Netanyahu:ಈ ವಾರ ವಿಶ್ವ ನಾಯಕರು ಪ್ಯಾಲೆಸ್ಟೈನ್ ರಾಷ್ಟ್ರವನ್ನು ಗುರುತಿಸಿದ್ದಾರೆ. ಆದರೆ, ಪ್ಯಾಲೆಸ್ಟೈನ್ ರಾಷ್ಟ್ರ ಇರುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಅಲ್ಲದೆ, ಈ ಶುಕ್ರವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನನ್ನ ಭಾಷಣದಲ್ಲಿ ವಿಶ್ವ ನಾಯಕರನ್ನು ಖಂಡಿಸುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ನ್ಯೂಯಾರ್ಕ್‌ಗೆ ತೆರಳುವ ಮೊದಲು ಬೆನ್ ಗುರಿಯನ್ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ನೆತನ್ಯಾಹು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ನಾನು ನಮ್ಮ ದೇಶದ ಸತ್ಯವನ್ನು, ಇಸ್ರೇಲ್ ನಾಗರಿಕರ ಸತ್ಯವನ್ನು, ನಮ್ಮ ಐಡಿಎಫ್ ಸೈನಿಕರ ಬಗ್ಗೆ ಸತ್ಯವನ್ನು ಮತ್ತು ನಮ್ಮ ದೇಶದ ಬಗ್ಗೆ ಸತ್ಯವನ್ನು ಮಾತನಾಡುತ್ತೇನೆ. ಕೊಲೆಗಾರರು, ಅತ್ಯಾಚಾರಿಗಳು ಮತ್ತು ಮಕ್ಕಳನ್ನು ಸುಡುವವರನ್ನು ಖಂಡಿಸುವ ಬದಲು, ಇಸ್ರೇಲ್ ಭೂಮಿಯ ಹೃದಯಭಾಗದಲ್ಲಿ ಉಗ್ರರಿಗೆ ಒಂದು ದೇಶವನ್ನು ನೀಡಲು ಬಯಸುವ ನಾಯಕರನ್ನು ನಾನು ಖಂಡಿಸುತ್ತೇನೆ. ಪ್ಯಾಲೆಸ್ಟೈನ್ ರಾಷ್ಟ್ರ ಆಗಲು ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಇದನ್ನೂ ಓದಿ: ಭಾರತ, ರಷ್ಯಾ ಹೊರತುಪಡಿಸಿ ಬೇರೆ ರಾಷ್ಟ್ರಗಳಿಂದ ತೈಲ ಖರೀದಿಸಲಿ: ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್| oil purchase
ಹಲವಾರು ಪಾಶ್ಚಿಮಾತ್ಯ ದೇಶಗಳ ಪ್ಯಾಲೆಸ್ಟೈನ್ ದೇಶದ ಸ್ಥಾಪನೆಯ ಕ್ರಮಗಳನ್ನು ತಿರಸ್ಕರಿಸುವ ಹೇಳಿಕೆಯನ್ನು ನೆತನ್ಯಾಹು ಕಚೇರಿ ಬಿಡುಗಡೆ ಮಾಡಿತು. ಅಲ್ಲದೆ, ಪ್ಯಾಲೆಸ್ಟೀನಿಯನ್ ಭಯೋತ್ಪಾದನೆಗೆ ಶರಣಾಗತಿ ಸ್ವೀಕಾರಿಸಲು ಇಸ್ರೇಲ್ ಬದ್ಧವಾಗಿಲ್ಲ. ಪ್ಯಾಲೆಸ್ಟೀನಿಯನ್ ರಾಷ್ಟ್ರ ಇರುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಆದರೆ, ಫ್ರಾನ್ಸ್ ಮತ್ತು ಬೆಲ್ಜಿಯಂ ಸೇರಿದಂತೆ 6 ಯುರೋಪಿಯನ್ ರಾಷ್ಟ್ರಗಳು ಈ ವಾರದ ಆರಂಭದಲ್ಲಿ ಪ್ಯಾಲೆಸ್ಟೈನ್ ದೇಶಕ್ಕೆ ಮಾನ್ಯತೆ ನೀಡುವುದಾಗಿ ಘೋಷಿಸಿದವು.
ಇದೇ ಸೋಮವಾರ ವಾಷಿಂಗ್ಟನ್‌ನಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಭೇಟಿ ಮಾಡುವುದಾಗಿ ನೆತನ್ಯಾಹು ಹೇಳಿದ್ದಾರೆ. ನಾನು ಅಧ್ಯಕ್ಷ ಟ್ರಂಪ್ರನ್ನು ನಾಲ್ಕನೇ ಬಾರಿಗೆ ಭೇಟಿಯಾಗುತ್ತೇನೆ. ನಮ್ಮ ಸೇನೆ ತಂದಿರುವ ಗೆಲುವುಗಳು ಉತ್ತಮ ಅವಕಾಶಗಳ ಬಗ್ಗೆ ಮತ್ತು ಯುದ್ಧದ ಗುರಿಗಳನ್ನು ಪೂರ್ಣಗೊಳಿಸುವ ಅಗತ್ಯತೆಯ ಬಗ್ಗೆ ಚರ್ಚಿಸುತ್ತೇನೆ. ನಮ್ಮ ಎಲ್ಲಾ ಒತ್ತೆಯಾಳುಗಳನ್ನು ಹಿಂದಿರುಗಿಸುವುದು, ಹಮಾಸ್ ಅನ್ನು ಸೋಲಿಸುವುದು ಮತ್ತು ಆಪರೇಷನ್ ರೈಸಿಂಗ್ ಲಯನ್ನಲ್ಲಿನ ಐತಿಹಾಸಿಕ ವಿಜಯವು ಶಾಂತಿಯ ಮಾರ್ಗವನ್ನು ತೆರೆದಿದೆ.
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯು ಭಾರೀ ಟೀಕೆಗೆ ಗುರಿಯಾಗಿದೆ. ಹಮಾಸ್‌ಗೆ ಟ್ರಂಪ್ ಎಚ್ಚರಿಕೆ ನೀಡಿದ್ದರೂ, ಬ್ರಿಟನ್, ಫ್ರಾನ್ಸ್, ಕೆನಡಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಅಮೆರಿಕದ ಮಿತ್ರರಾಷ್ಟ್ರಗಳ ಪ್ಯಾಲೆಸ್ಟೈನ್ ದೇಶದ ಮಾನ್ಯತೆಗೆ ಬೆಂಬಲದ ಸಂಖ್ಯೆ ಹೆಚ್ಚುತ್ತಿದೆ.
ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಟ್ರಂಪ್, ಇಸ್ರೇಲ್‌ಗೆ ತಮ್ಮ ಬಲವಾದ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಇಂತಹ ಘೋಷಣೆಗಳು ಹಮಾಸ್‌ಗೆ ಭಯಾನಕ ದೌರ್ಜನ್ಯಗಳಿಗೆ ಪ್ರತಿಫಲವನ್ನು ನೀಡುವ ಮೂಲಕ ನಿರಂತರ ಸಂಘರ್ಷವನ್ನು ಪ್ರೋತ್ಸಾಹಿಸಲು ಮಾತ್ರ ಸಹಾಯ ಮಾಡುತ್ತದೆ ಎಂದು ಟ್ರಂಪ್ ಕಿಡಿಕಾರಿದ್ದಾರೆ. (ಏಜೆನ್ಸೀಸ್)