Tsunami : ಜಪಾನ್‌ನ ಬಾಬಾ ವಂಗಾ ಎಂದೇ ಪ್ರಖ್ಯಾತಿ ಪಡೆದಿರುವ ರಿಯೋ ಟ್ಯಾಟ್ಸುಕಿ ಅವರ ಮೆಗಾ ಸುನಾಮಿ ಭವಿಷ್ಯವಾಣಿ ವಿಫಲವಾಗಿದೆ. ಜಪಾನಿಗರಿಗೆ ಇದು ಖುಷಿಯ ವಿಚಾರವಾದರೂ ಆರ್ಥಿಕ ಸುನಾಮಿ ಜಪಾನ್ನಲ್ಲಿ ತಲ್ಲಣ ಸೃಷ್ಟಿಸಿದೆ. ಹೌದು, ಟ್ಯಾಟ್ಸುಕಿ ಭವಿಷ್ಯವಾಣಿಯಿಂದಾಗಿ ಪ್ರವಾಸೋದ್ಯಮ ಆದಾಯದಲ್ಲಿ ಜಪಾನ್ 30,000 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದೆ ಎಂದು ಮಾಧ್ಯಮ ವರದಿಗಳು ಸೂಚಿಸಿವೆ. ಆದಾಗ್ಯೂ, ಈ ಅಂಕಿ ಅಂಶವನ್ನು ಸರ್ಕಾರ ದೃಢಪಡಿಸಿಲ್ಲ.
ಜುಲೈ 5ರಂದು ಬೆಳಗ್ಗೆ 4.18ಕ್ಕೆ ದೊಡ್ಡ ವಿಪತ್ತು ಸಂಭವಿಸುತ್ತದೆ ಎಂದು ಮಂಗಾ ಕಲಾವಿದೆ ರಿಯೋ ಟ್ಯಾಟ್ಸುಕಿ ತಮ್ಮ ಮಂಗಾ ಪುಸ್ತಕ ‘ದಿ ಫ್ಯೂಚರ್ ಐ ಸೀ’ ನಲ್ಲಿ ಭವಿಷ್ಯ ನುಡಿದಿದ್ದರು. ಪ್ರಮುಖ ನಗರಗಳು ಸಮುದ್ರದ ಪಾಲಾಗುತ್ತವೆ ಎಂದು ಟ್ಯಾಟ್ಸುಕಿ ಹೇಳಿದ್ದರು. ಇದರಿಂದಾಗಿ ಜನರು ಭೂಕಂಪ ಮತ್ತು ಮೆಗಾ ಸುನಾಮಿಯ ಭಯದಲ್ಲಿದ್ದರು. ಆದರೆ, ಟ್ಯಾಟ್ಸುಕಿ ಹೇಳಿದಂತೆ ಯಾವುದೇ ವಿಪತ್ತು ಸಂಭವಿಸದಿದ್ದರೂ, ಆಕೆ ನುಡಿದ ಭವಿಷ್ಯವಾಣಿಯು ಜಪಾನ್‌ನ ಆರ್ಥಿಕತೆ ಮತ್ತು ಪ್ರವಾಸೋದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ.
ಪ್ರವಾಸಿಗರು ಜಪಾನ್‌ಗೆ ತಮ್ಮ ಪ್ರವಾಸಗಳನ್ನು ಸಾಮೂಹಿಕವಾಗಿ ರದ್ದುಗೊಳಿಸಿದ್ದಾರೆ. ಇತ್ತೀಚೆಗೆ ಸಂಭವಿಸಿದ ನೂರಾರು ಸಣ್ಣ, ಕಡಿಮೆ ತೀವ್ರತೆಯ ಭೂಕಂಪಗಳು ಕೂಡ ಪ್ರವಾಸಿಗರಲ್ಲಿ ಕಳವಳ ಹೆಚ್ಚಿಸಿತು. ಕ್ಯುಶು ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟವೂ ಆತಂಕ ಉಂಟುಮಾಡಿತು. ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ, ಹಾಂಗ್ ಕಾಂಗ್‌ನಿಂದ ಕೆಲವು ವಿಮಾನಗಳನ್ನು ಸಹ ರದ್ದುಗೊಳಿಸಬೇಕಾಯಿತು. ಜನರ ಭಯವನ್ನು ನಿವಾರಿಸಲು ಸರ್ಕಾರದ ನಿರ್ದೇಶನದಂತೆ ತಾನೇನು "ಪ್ರವಾದಿಯಲ್ಲ" ಎಂದು ಟ್ಯಾಟ್ಸುಕಿ, ಹೇಳಿದರು ಕೂಡ ಯಾವುದೇ ಪರಿಣಾಮ ಬೀರಿಲ್ಲ.
ಜಪಾನ್ ಪೆಸಿಫಿಕ್ ರಿಂಗ್ ಆಫ್ ಫೈರ್ನಲ್ಲಿದೆ. ಇದು ವಿಶ್ವದ ಅತ್ಯಂತ ಭೂಕಂಪ ಪೀಡಿತ ಮತ್ತು ಜ್ವಾಲಾಮುಖಿ ಸಕ್ರಿಯ ಪ್ರದೇಶವಾಗಿದೆ. ಜಪಾನ್ನಲ್ಲಿ ಸಣ್ಣ ಭೂಕಂಪಗಳು ಸಾಮಾನ್ಯವಾಗಿದೆ ಮತ್ತು ಕಟ್ಟಡಗಳನ್ನು ಅವುಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಎಷ್ಟೇ ಸುನಾಮಿ, ಭೂಕಂಪಗಳು ಸಂಭವಿಸಿದರೂ ಜಪಾನ್ ಮಾತ್ರ ಆರ್ಥಿಕತೆಯಲ್ಲಿ ಮುನ್ನಗ್ಗುತ್ತಿದೆ. ಈಗಾಗಲೇ ಟೆಕ್ನಾಲಜಿಯಲ್ಲಿ ಜಪಾನ್ ಮುಂದುವರಿದಿದೆ.
ಅಂದಹಾಗೆ, ರಿಯೊ ಟ್ಯಾಟ್ಸುಕಿ ಹೇಳಿದ ಅನೇಕ ವಿಷಯಗಳು ಇಲ್ಲಿಯವರೆಗೆ ನಿಜವಾಗಿವೆ. ಅವಳು ಕನಸಿನಲ್ಲಿ ಏನು ಕಂಡರೂ ಅದು ನಿಜವಾಗುತ್ತದೆ ಎಂದು ಹೇಳಲಾಗುತ್ತದೆ. ರಾಜಕುಮಾರಿ ಡಯಾನಾ, ಗಾಯಕ ಫ್ರೆಡ್ಡಿ ಮರ್ಕ್ಯುರಿ ಅವರ ಮರಣವನ್ನು ಟಾಟ್ಸುಕಿ ಭವಿಷ್ಯ ನುಡಿದಿದ್ದರು, ಅದು ನಿಜವಾಯಿತು. ಇಷ್ಟು ಮಾತ್ರವಲ್ಲದೆ, ಅವರು 1999 ರಲ್ಲಿ ತಮ್ಮ ಪುಸ್ತಕದಲ್ಲಿ ಕರೊನಾ ಸಾಂಕ್ರಾಮಿಕ ರೋಗದ ಬಗ್ಗೆ ಭವಿಷ್ಯ ನುಡಿದಿದ್ದರು. ಇದು 2020ರಲ್ಲಿ ನಿಜವಾಗಿದೆ.
ರಿಯೊ ಟ್ಯಾಟ್ಸುಕಿ ತಮ್ಮ ಪುಸ್ತಕದಲ್ಲಿ ಮತ್ತೊಮ್ಮೆ ಕೊರೊನಾ ಸಾಂಕ್ರಾಮಿಕ ರೋಗದ ಮರಳುವಿಕೆಯ ಬಗ್ಗೆ ಬರೆದಿದ್ದಾರೆ. ಈ ಸಾಂಕ್ರಾಮಿಕ ರೋಗವು 2030 ರಲ್ಲಿ ಮತ್ತೊಮ್ಮೆ ಮರಳುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಈ ಸಾಂಕ್ರಾಮಿಕ ರೋಗವು ಕಣ್ಮರೆಯಾಗಿ 2030ರಲ್ಲಿ ಮತ್ತೆ ಮರಳುತ್ತದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಜಗತ್ತಿನಲ್ಲಿ ಭೀಕರ ವಿನಾಶದ ಸಾಧ್ಯತೆಯಿದೆ ಎಂದು ಅವರು ಬರೆದಿದ್ದಾರೆ. ಹೀಗಾಗಿ ಟ್ಯಾಟ್ಸುಕಿ ಅವರನ್ನು ಜಪಾನ್‌ನ ಬಾಬಾ ವಂಗಾ ಎಂದು ಕರೆಯುತ್ತಾರೆ.
ಬಲ್ಗೇರಿಯನ್ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರ ಭವಿಷ್ಯವಾಣಿ ಇದಾಗಲೇ ಜಗದ್ವಿಖ್ಯಾತಿ ಪಡೆದಿದೆ. ವರದಿಗಳ ಪ್ರಕಾರ, ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟ್ರುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ ಎಂದು. ತಮ್ಮ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡರಂತೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ. (ಏಜೆನ್ಸೀಸ್)