- ಯಾದಗಿರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ಸ್ಥಾಪನೆಗೆ ಅಡ್ಡಿ
- ಕಳೆದ 20 ವರ್ಷಗಳ ಹಿಂದೆಯೇ ವಾಲ್ಮೀಕಿ ವೃತ್ತದಲ್ಲಿ ನಾಮಫಲಕ ಅಳವಡಿಕೆ
ರಾಯಚೂರು: ಯಾದಗಿರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ಸ್ಥಾಪನೆಗೆ ಅಡ್ಡಿಪಡಿಸುತ್ತಿದ್ದು, ಕ್ರಮಕೈಗೊಳ್ಳಬೇಕೆಂದು ಅಖಿಲಾಂಡ ವಾಲ್ಮೀಕಿ ನಾಯಕ ಸಮಿತಿ ಅಧ್ಯಕ್ಷ ವೆಂಕಟೇಶ ನಾಯಕ ಅಸ್ಕಿಹಾಳ ಒತ್ತಾಯಿಸಿದರು.
ಕಾಣದ ಕೈಗಳ ಕೆಲಸ
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 20 ವರ್ಷಗಳ ಹಿಂದೆಯೇ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ನಾಮಫಲಕ ಅಳವಡಿಸಲಾಗಿತ್ತು. ಯಾದಗಿರಿ ನಗರಸಭೆಯಿಂದಲೇ ಮೂರ್ತಿ ಸ್ಥಾಪಿಸಲು ಟೆಂಡರ್ ಕರೆಯಲಾಗಿದೆ. ಕಾಮಗಾರಿ ಆರಂಭಿಸಿದರೆ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದು ಕಾಣದ ಕೈಗಳು ಕೆಲಸ ಮಾಡುತ್ತಿವೆ.
ಜಿಲ್ಲಾಧಿಕಾರಿ, ನಗರಸಭೆ ಪೌರಾಯುಕ್ತ, ಉಸ್ತುವಾರಿ ಸಚಿವರು, ಶಾಸಕರು ವಾಲ್ಮೀಕಿ ಪುತ್ಥಳಿ ಸ್ಥಾಪನೆ ಸಹಕರಿಸಬೇಕು. ಇಲ್ಲದಿದ್ದರೆ ಸಮುದಾಯದ ಒಂದು ಲಕ್ಷ ಜನ ಸೇರಿಸಿ ಬೃಹತ್ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು. ಪ್ರಮುಖರಾದ ರಾಘವೇಂದ್ರ ನಾಯಕ, ಹುಸೇನಪ್ಪ, ಬಸವಲಿಂಗಪ್ಪ ಖಾನಾಪುರ, ನರಸರೆಡ್ಡಿ, ದುಳ್ಳಯ್ಯ ನಾಯಕ, ಮಾರುತಿ ನಾಯಕ, ಸಿದ್ದಯ್ಯ ಇದ್ದರು.