ಬೆಂಗಳೂರು: ನೀರಿನ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ(I don't do politics when it comes to water) . 25 ಟಿಎಂಸಿ ನೀರು ಪಡೆಯಲು ಎಲ್ಲ ಪಕ್ಷಗಳೊಂದಿಗೆ ಚರ್ಚಿಸಿ ಹೋರಾಟ ನಡೆಸಲು ನನಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ(H D Devegowda) ಹೇಳಿದರು.
ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗೋದಾವರಿ-ಕೃಷ್ಣ-ಕಾವೇರಿ ನೀರಾವರಿ ಯೋಜನೆಯಲ್ಲಿ ಕರ್ನಾಟಕಕ್ಕೆ 25 ಟಿಎಂಸಿ ಅಡಿ ನೀರು ಹಂಚಿಕೆ ಆಗಬೇಕು. ಈ ಗುರಿ ಸಾಧನೆಗಾಗಿ ಎಲ್ಲ ಪಕ್ಷಗಳನ್ನು.ಒಳಗೊಂಡು ಹೋರಾಟ ಮಾಡುತ್ತೇನೆ ಎಂದರು.
ನೀರಿಗಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಸಂಸದರ ಜತೆಗೂಡಿ ಹೋರಾಟ ನಡೆಸಲು ನನಗೆ ಹಿಂಜರಿಕೆ ಇಲ್ಲ. ರಾಜ್ಯದ ವಿಷಯ ಬಂದಾಗ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎನ್ನುವ ಭೇಧ ಮರೆತು ಒಟ್ಟಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ನೀರಾವರಿ ಯೋಜನೆಗಳ ಜಾರಿ ವಿಷಯದಲ್ಲಿ ಜೆಡಿಎಸ್ ಸುಮ್ಮನೆ ಕೂತಿಲ್ಲ, ಕೂರುವುದೂ ಇಲ್ಲ. ನದಿ ಜೋಡಣೆ ಮತ್ತು ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಸಹಕಾರ ಕೊಡುತ್ತೇವೆ ಎಂದು ಭರವಸೆ ನೀಡಿದರು.
ನೀರಾವರಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ಅದು ಸರಿಯಲ್ಲ. ಹಿಂದೆ ಸಿದ್ದರಾಮಯ್ಯ ಅವರು ನೀರಾವರಿ ಬಗ್ಗೆ ಚರ್ಚೆ ಮಾಡುವುದಕ್ಕೆ ನಮ್ಮ ಮನೆಗೆ ಬಂದಿದ್ದರು. ಆಗ ನನಗೂ ಅವರಿಗೂ ಮಾತೇ ಇರಲಿಲ್ಲ. ಆದರೂ ನಾನು ಅವರ ಹಿಂದೆ ಹೋದೆ. ನನಗೇನು ಬೇಸರ ಇಲ್ಲ. ನೀರಾವರಿ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಬೇಡ ಎಂದು ಕಿವಿ ಮಾತು ಹೇಳಿದರು.
ಸಂಸತ್‌ನಲ್ಲಿ ಗೋದಾವರಿ- ಕೃಷ್ಣ-ಕಾವೇರಿ ಯೋಜನೆ ವಿಚಾರವಾಗಿ ಚರ್ಚಿಸಿದ್ದೇನೆ. ರಾಜ್ಯಕ್ಕೆ ನೀರಿನ ಹಂಚಿಕೆ ಹೆಚ್ಚಳ ಮಾಡುವಂತೆ ನಾನು ಪ್ರಧಾನಿ ಹಾಗೂ ಕೇಂದ್ರದ ಜಲಶಕ್ತಿ ಸಚಿವರಿಗೆ ಮನವಿ ಮಾಡಿದ್ದೇನೆ. ಈ ಬಗ್ಗೆ 2022, 2024ರಲ್ಲಿ ಜಲಶಕ್ತಿ ಸಚಿವರಿಗೆ ಪತ್ರ ಬರೆದಿದ್ದೆ. ಸದ್ಯ ಈ ಯೋಜನೆಯಲ್ಲಿ ಕರ್ನಾಟಕಕ್ಕೆ 15.891 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಆದರೆ, ಈ ಪ್ರಮಾಣವನ್ನು 25 ಟಿಎಂಸಿಗೆ ಹೆಚ್ಚಳ ಮಾಡಬೇಕು ಎಂದು ಒತ್ತಾಯ ಮಾಡಿದ್ದೇನೆ ಎಂದು ಪುನರುಚ್ಚಾರ ಮಾಡಿದರು.
ಗೋದಾವರಿ ನದಿಯಿಂದ ರಾಜ್ಯಕ್ಕೆ 15.91 ಟಿಎಂಸಿ ಅಡಿಯಷ್ಟು ನೀರು ಹಂಚಿಕೆ ಮಾಡಿ, ಆ ನೀರನ್ನು ಘಟಪ್ರಭಾ ನದಿಗೆ ಹರಿಸುತ್ತೇವೆ ಎಂದು ಹೇಳಿದ್ದಾರೆ. ಇದು ಹೇಗೆ ಸಾಧ್ಯ? ಎಂದು ನಾನು ಸಂಸತ್ತಿನಲ್ಲಿ ಕೇಳಿದ್ದೇನೆ. ಜತೆಗೆ, ಕರ್ನಾಟಕಕ್ಕೆ ಗೋದಾವರಿಯಿಂದ ಹರಿಸುವ ನೀರನ್ನು ಕಾವೇರಿಗೆ ಎಲ್ಲಿ ಜೋಡಿಸುತ್ತೀರಿ? ಎಂದು ಸಹ ಕೇಳಿದ್ದೇನೆ. ಈ ಬಗ್ಗೆ ರಾಜ್ಯಕ್ಕೆ ನಿಖರ ಮಾಹಿತಿ ಬೇಕಿದೆ. ಈ ಕುರಿತು ಪ್ರಧಾನಿಗೆ ಪತ್ರ ಬರೆಯುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜ್ಯದ ನೀರಾವರಿ ಯೋಜನೆಗಳ ಜಾರಿಗೆ ನಾನು ಕೇಂದ್ರವನ್ನು ಕಾಲಕಾಲಕ್ಕೆ ಒತ್ತಾಯಿಸಿದ್ದೇನೆ. ನಾನು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ. ಮಹದಾಯಿ ಬಗ್ಗೆ ಕೂಡ ನಾನು ಹೋರಾಟ ನಡೆಸಿದ್ದೇನೆ ಎಂದು ಹೇಳಿದರು.
ಕಾವೇರಿ ನೀರು ಹಂಚಿಕೆಯಲ್ಲಿ ನಮಗೆ ಅನ್ಯಾಯವಾಗಿದೆ. ಇದನ್ನು ಮೋದಿ ಗಮನಕ್ಕೆ ತಂದಿದ್ದೇನೆ. ನಮ್ಮ ರಾಜ್ಯದ ಒಬ್ಬರು ಪುಣ್ಯಾತ್ಮರು ನೀರು ಕೊಡುತ್ತೇನೆ ಎಂದು ಹೇಳಿದ್ದಾರೆ. ಅವರು ನೀರು ಕೊಟ್ಟರೆ ಸಂತೋಷ. ಚಿತ್ರದುರ್ಗ, ತುಮಕೂರು ಸೇರಿದಂತೆ ನೀರೇ ಕಾಣದ ಪ್ರದೇಶಗಳಿಗೆ ನೀರು ಹೋಗಬೇಕು. ಎಲ್ಲಿಂದಾದರೂ ನೀರು ಕೊಡಲಿ ಎಂದು ಹೇಳಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವ ಸಿ.ಎಸ್ ಪುಟ್ಟರಾಜು, ಸಂಸದ ಮಲ್ಲೇಶ್ ಬಾಬು, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಕೆ.ಎ.ತಿಪ್ಪೇಸ್ವಾಮಿ, ಜವರಾಯಿ ಗೌಡ, ಮಾಜಿ ಶಾಸಕ ಇ.ಕೃಷ್ಣಪ್ಪ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಉಪಸ್ಥಿತರಿದ್ದರು.
ರಾಜ್ಯಕ್ಕೆ ನೀರಿನ ವಿಷಯದಲ್ಲಿ ನ್ಯಾಯ ಸಿಗಬೇಕು. ಅದೇ ನನ್ನ ಜೀವನದ ಕೊನೆಯ ಆಸೆ. ಈ ದೇಹ ಅಂತ್ಯ ಆಗುವುದರ ಒಳಗಾಗಿ ನಮ್ಮ ರಾಜ್ಯಕ್ಕೆ ನೀರಾವರಿ ವಿಷಯದಲ್ಲಿ ಆಗಿರುವ ಅನ್ಯಾಯ ಸರಿ ಹೋಗಬೇಕು. ನಾನು ಇನ್ನೂ ನಾಲ್ಕಾರು ವರ್ಷ ಬದುಕಿರುತ್ತೇನೆ. ಅಷ್ಟರಲ್ಲಿ ಈ ನೀರಿನ ಸಮಸ್ಯೆ ಬಗೆಹರಿಸಬೇಕು ಎನ್ನುವ ಛಲವಿದೆ, ಬಗೆಹರಿಸುತ್ತೇನೆ. ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ನಾನು ಹೋರಾಟ ಮಾಡುತ್ತೇನೆ ಎಂದು ದೇವೇಗೌಡ ಭಾವುಕರಾದರು.
ಕಾವೇರಿ, ಕಳಸಾ-ಬಂಡೂರಿ ಯೋಜನೆಗಳಲ್ಲಿ ರಾಜ್ಯಕ್ಕೆ ಭಾರೀ ಅನ್ಯಾಯ ಆಗಿದೆ. ಈಗ ಗೋದಾವರಿ-ಕಾವೇರಿ ಜೋಡಣೆ ಯೋಜನೆಯಲ್ಲಿಯೂ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ನಾವು ದನಿಯೆತ್ತಬೇಕಿದೆ ಎಂದು ದೇವೇಗೌಡ ತಿಳಿಸಿದರು.
ಜೆಡಿಎಸ್‌ನಿಂದ ರಾಜ್ಯದಲ್ಲಿ ಬೃಹತ್ ಸಮಾವೇಶ ನಡೆಸುತ್ತೇವೆ. ಈ ಸಂಬಂಧ ಮಾರ್ಚ್ 6 ರಂದು ಪೂರ್ವಭಾವಿ ಸಭೆ ಕರೆದಿದ್ದೇವೆ ಎಂದು ದೇವೇಗೌಡ ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ೋಷಿಸಿದ ಅನುದಾನ ಕೇಳುವ ಮುನ್ನ ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ಮೊದಲು ಬಿಡುಗಡೆ ಮಾಡಲಿ. ರಾಜ್ಯ ಸರ್ಕಾರ ಅನೇಕ ನೀರಾವರಿ ಯೋಜನೆ ಘೋಷಣೆ ಮಾಡಿದೆ. ಆದರೆ, ಹಣ ಕೊಡಲು ಸಾಧ್ಯವಾಗಿಲ್ಲ. ಅವರು ಮೊದಲು ಆ ಕೆಲಸ ಮಾಡಲಿ.
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ.