ಪಾಟ್ನಾ: ಬಿಹಾರದ ರಾಜಕೀಯದಲ್ಲಿ ಯಾವುದೇ ಸ್ಥಾನ ಖಾಲಿ ಇಲ್ಲ ಎಂದು ವಿಪಕ್ಷಗಳ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಷಾ(Amit Shah) ಬುಧವಾರ (ಅ.29) ಕಿಡಿಕಾರಿದ್ದಾರೆ.
ಈ ಬಗ್ಗೆ ಬಿಹಾರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾ, ಬಿಹಾರದಲ್ಲಿ ಯಾವುದೇ ಸಿಎಂ ಸೀಟು ಖಾಲಿ ಇಲ್ಲ ಮತ್ತು ಇಲ್ಲಿ ಕೇವಲ ನಿತೀಶ್ ಕುಮಾರ್ ಇದ್ದಾರೆ. ಅಲ್ಲದೆ, ದೇಶದಲ್ಲಿ ಪಿಎಂ ಮೋದಿ ಅಡಳಿತ ಮಾಡುತ್ತಿದ್ದಾರೆ ಎಂದು ವಿಪಕ್ಷಗಳನ್ನು ತೋರಿಸುತ್ತಾ ವ್ಯಂಗ್ಯವಾಡಿದ್ದಾರೆ.
ವಿರೋಧ ಪಕ್ಷದೊಳಗಿನ ನಾಯಕತ್ವದ ಮಹತ್ವಾಕಾಂಕ್ಷೆಗಳ ಕುರಿತು ನಡೆಯುತ್ತಿರುವ ಊಹಾಪೋಹಗಳ ಮಧ್ಯೆ ಶಾ, ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿ ಮುಂದುವರೆದಿದ್ದಾರೆ ಮತ್ತು ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರಿಯುತ್ತಾರೆ ಎಂದು ಹೇಳುವ ಮೂಲಕ, ಬಿಹಾರದಲ್ಲಿ ಯಾವುದೇ ರಾಜಕೀಯ ಬದಲಾವಣೆ ಇಲ್ಲ ಎಂದು ಹೊಸ ವದಂತಿಗಳನ್ನು ಹತ್ತಿಕ್ಕಿದ್ದಾರೆ.
ಮುಂದುವರೆದು ಮಾತನಾಡಿದ ಷಾ, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡುವ ಮೂಲಕ ಬಿಹಾರದ ವರ್ಚಸ್ಸನ್ನು ಹೆಚ್ಚಿಸಿದ್ದಕ್ಕಾಗಿ ಮತ್ತು ರಾಜ್ಯದ ಪರಂಪರೆಯನ್ನು ಗೌರವಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದ್ದಾರೆ. ಈ ಸನ್ನೆಯು ಭಾರತದ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಅಭಿವೃದ್ಧಿಗೆ ಬಿಹಾರದ ಕೊಡುಗೆಗೆ ಕೇಂದ್ರದ ಗೌರವವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಕೇಂದ್ರದ ಬಲವಾದ ನಿರ್ಧಾರಗಳನ್ನು ಶ್ಲಾಘಿಸಿದ ಷಾ, ಪಹಲ್ಗಾಮ್ ದಾಳಿಯ ನಂತರ, ಪ್ರಧಾನಿ ಮೋದಿ ಆಪರೇಷನ್ ಸಿಂಧೂರವನ್ನು ಪ್ರಾರಂಭಿಸಿದರು. ಆದರೆ ಸರ್ಕಾರವು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಅನ್ನು ನಿಷೇಧಿಸಿ ಅದರ ಸದಸ್ಯರನ್ನು ವಶಕ್ಕೆ ತೆಗೆದುಕೊಂಡಿರುವುದನ್ನು ಎತ್ತಿ ತೋರಿಸಿದರು.
ರಾಮ ಮಂದಿರ ನಿರ್ಮಾಣದ ಬಗ್ಗೆ ಮಾತನಾಡಿದ ಷಾ, ಹಲವು ವರ್ಷಗಳ ಕಾಲ ಶ್ರೀರಾಮನು ಒಂದು ಗುಡಾರದಲ್ಲಿ ವಾಸಿಸುತ್ತಿದ್ದನು. ಅಲ್ಲದೆ, ಕಾಂಗ್ರೆಸ್, ಟಿಎಂಸಿ ಮತ್ತು ಸಮಾಜವಾದಿ ಪಕ್ಷಗಳು ದೇವಾಲಯವನ್ನು ನಿರ್ಮಿಸಲು ಎಂದಿಗೂ ಅವಕಾಶ ನೀಡಲಿಲ್ಲ. ಆದರೆ ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಾಗ, ಆ ಭರವಸೆಯನ್ನು ಈಡೇರಿಸಿದರು. ಈಗ, ನಾವು ಮಿಥಿಲಾದಲ್ಲಿ ಸೀತಾ ದೇವಿಗೆ ದೇವಾಲಯವನ್ನು ನಿರ್ಮಿಸಬೇಕು ಮತ್ತು ಭೇಟಿ ನೀಡಿದ ಎಲ್ಲಾ ಸ್ಥಳಗಳನ್ನು ರಾಮ ಸರ್ಕ್ಯೂಟ್ ಮೂಲಕ ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.
ಶಾಂತಿಪುರದಲ್ಲಿ ಮತ್ತೊಂದು ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಷಾ, ಬಿಹಾರವು ನಿತೀಶ್ ಕುಮಾರ್ ಮತ್ತು ಚಿರಾಗ್ ಪಾಸ್ವಾನ್ ಅವರ ನಾಯಕತ್ವವನ್ನು ಹೊಂದಿದೆ ಮತ್ತು ಪ್ರಧಾನಿ ಮೋದಿಯವರ ಆಶೀರ್ವಾದವನ್ನು ಹೊಂದಿದೆ. ಇದು ರಾಜ್ಯದಲ್ಲಿ ಎನ್‌ಡಿಎ ಸ್ಥಾನವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. (ಏಜೆನ್ಸೀಸ್)