K.H.Muniyappa 
ನ್ಯೂಸ್

ಗ್ಯಾರೆಂಟಿಗಳಿಗೆ ಹಣದ ಕೊರತೆಯಿಲ್ಲ

ಕೋಲಾರ: ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಂಪನ್ಮೂಲ ಕೊರತೆಯಿಲ್ಲ, ಸರ್ವ ಸಮಸ್ಯೆಯಿಂದಾಗಿ ಪಡಿತರ ಹಣ ಬಾಕಿ ಉಳಿದುಕೊಂಡಿದ್ದು, ಒಂದು ವಾರದೊಳಗೆ ಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ಆಹಾರ ಇಲಾಖೆ ಸಚಿವ ಕೆ.ಎಚ್​.ಮುನಿಯಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ವರ್​ ಸಮಸ್ಯೆಯಿಂದ 2 ತಿಂಗಳಿಂದ ಬಿಡುಗಡೆಯಾಗಿಲ್ಲ. ಇದೀಗ ಸಮಸ್ಯೆ ಬಗೆಹರಿದಿದ್ದು, ವಾರದೊಳಗೆ ಹಣ ಪಾವತಿಯಾಗಲಿದೆ. ಪ್ರತಿ ತಿಂಗಳು 10ರಂದು ಬಿಡುಗಡೆಯಾಗುತ್ತಿದ್ದು, ಈ ಬಾರಿ ತಡವಾಗಿದೆಯಷ್ಟೇ ಎಂದು ಸ್ಪಷ್ಟಪಡಿಸಿದರು.
ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಮಾತ್ರ ಶೇ.80ರಷ್ಟು ಬಿಪಿಎಲ್​ ಕಾರ್ಡ್​ಗಳು ಇವೆ. ಉಳಿದ ರಾಜ್ಯಗಳಲ್ಲಿ ಶೇ.50ಕ್ಕಿಂತ ಕಡಿಮೆಯಿದೆ. ಹೀಗಾಗಿ ಪರಿಷ್ಕರಣೆ ಮಾಡಿದ ಬಳಿಕ ಬಿಪಿಎಲ್​ಗೆ ಅರ್ಹತೆ ಇಲ್ಲದ ಕಾರ್ಡ್​ಗಳನ್ನು ಎಪಿಎಲ್​ ಎಂದು ಪರಿಗಣಿಸಲಾಗುತ್ತದೆ. ಪ್ರತಿ ಕೆಜಿ ಅಕ್ಕಿಗೆ 15ರೂಗಳನ್ನು ಪಡೆದು, ಸಬ್ಸಿಡಿ ನೀಡಲಾಗುತ್ತದೆ. ಉಳಿದ ಹಣವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು.
ಕೋವಿಡ್​ ಹಗರಣದ ವಿಚಾರವಾಗಿ ಸಮಿತಿಯನ್ನು ರಚಿಸಲಾಗಿದ್ದು, ವರದಿ ಬಂದಿದೆ. ತನಿಖೆಗೆ ಎಸ್​ಐಟಿಗೆ ನೀಡಲಾಗಿದೆ. ಪ್ರಕರಣವನ್ನು ಸರ್ಕಾರದ ಇತಿಮಿತಿಯಲ್ಲಿರುವ ಸಂಸ್ಥೆಗೆ ನೀಡಬೇಕು ಹೊರತು ಸಂಬಂಧವಿಲ್ಲದ್ದಕ್ಕೆ ಕೊಡುವುದುಕ್ಕೆ ಬರುವುದಿಲ್ಲ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಕೆ.ಚಂದ್ರಾರೆಡ್ಡಿ ಅವರನ್ನು ಪುನ@ ಕಾಂಗ್ರೆಸ್​ ಪಕ್ಷಕ್ಕೆ ಸೇರಿಸಿಕೊಳ್ಳಲು ಸ್ಥಳಿಯ ಶಾಸಕರು ಮುಂದಾಗಿದ್ದಾರೆಂದರೆ ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ನಾನು ಬೆಳೆಸಿದ ಶಿಷ್ಯರು ಯಾರ್ಯಾರು ಏನೇನು ಮಾಡಿದ್ದಾರೆ, ಆಗಿದ್ದಾರೆ ಎನ್ನುವುದು ಗೊತ್ತೇ ಇದೆಯಲ್ಲವೇ ?, ಜಿಲ್ಲೆಯಲ್ಲಿನ ಗುಂಪುಗಾರಿಕೆ ವಿಚಾರವನ್ನು ಕೆಪಿಸಿಸಿ ಗಮನಕ್ಕೆ ತರಲಾಗಿದ್ದು, ಕರೆಯಿಸಿ ಮಾತನಾಡುವ ಭರವಸೆಯನ್ನು ನೀಡಿದ್ದಾರೆ. ಈ ಮಧ್ಯದಲ್ಲಿ ಅವರು ಕರೆಯಿಸಿ ಮಾತನಾಡುವವರೆಗೂ ಹಾಗೂ ಪಕ್ಷ ಕೈಗೊಳ್ಳುವ ರ್ನಿಣಯಕ್ಕೂ ಕಾದುನೋಡಬೇಕಿದೆ ಎಂದರು.
ದಲಿತ ಸಿಎಂ ಕೂಗು ಇವತ್ತಿಂದಲ್ಲ
ಸಚಿವ ಸಂಪುಟದಲ್ಲಿ 136 ಶಾಸಕರಿದ್ದು ಸುಸ್ಥಿರವಾಗಿದೆ. ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತಾರೆ. ಕೆಲವು ಮಂತ್ರಿಗಳು ಸೇರಿದ್ದಕ್ಕೆ ಯಾವುದೋ ಕತೆ ಕಟ್ಟಿದರೆ ನಾವೇನು ಮಾಡಲಾಗುತ್ತದೆ ? ಸಿಎಂ ವಿಚಾರವಾಗಿ ಸಭೆ ಯಾವುದೇ ಕಾರಣಕ್ಕೂ ಮಾಡಿಲ್ಲ ಎಂದರು.
ಸಚಿವರಾದ ಪರಮೇಶ್ವರ್​, ಸತೀಶ್​ ಜಾರಕಿಹೊಳಿ, ಮಹದೇವಪ್ಪ ಅಥವಾ ನಾನಾಗಲಿ ಸಿದ್ದರಾಮಯ್ಯರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಹೇಳಿದ್ದೇವೆ ಹೊರತು ನಾವು ಸಿಎಂ ಆಗಬೇಕು ಎಂದು ಎಲ್ಲಿಯೂ ಹೇಳಿಲ್ಲ. ದಲಿತ ಸಿಎಂ ಕೂಗು ಇವತ್ತಿಂದಲ್ಲ 20-&30 ವರ್ಷಗಳಿಂದ ಇದೆ. ಯಾರ ವಿಚಾರವಾಗಿಯೂ ಸಿಎಂ ಸಿದ್ದರಾಮಯ್ಯ ಎಂದಿಗೂ ಬೇಸರ ಮಾಡಿಕೊಂಡಿಲ್ಲ, ಪಕ್ಷದಲ್ಲಿ ಎಡ ಬಲ ಯಾವುದೂ ಇಲ್ಲ, ಕಾಂಗ್ರೆಸ್​ನಲ್ಲಿ ಎಲ್ಲವೂ ಒಂದೇ ಎಂದು ತಿಳಿಸಿದರು.

ಜಾಹೀರಾತಿನಲ್ಲಿ ವಿಪಕ್ಷದವರನ್ನು ಟೀಕಿಸಿಲ್ಲ
ಪತ್ರಿಕೆಗಳಿಗೆ ನೀಡಿರುವ ಜಾಹೀರಾತು ವಿಚಾರವಾಗಿ ಮಾತನಾಡಿದ ಸಚಿವರು, ಚಾಮುಂಡೇಶ್ವರಿ ತಾಯಿಯು ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುವ ಪ್ರತಿತಿ ನಡೆದುಕೊಂಡು ಬರಲಾಗಿದೆ. ದುಷ್ಟರು, ಸಮಾಜಕ್ಕೆ ತೊಂದರೆ ಮಾಡುವವರ ಕುರಿತಾಗಿ ಜಾಹೀರಾತಿನಲ್ಲಿ ನೀಡಲಾಗಿದೆಯೇ ಹೊರತು ವಿಪಕ್ಷದವರನ್ನು ಟೀಕಿಸಿಲ್ಲ, ಅವರ ಹೆಸರನ್ನೂ ಬಳಸಿಲ್ಲವೆಂದು ಸ್ಪಷ್ಟಪಡಿಸಿದರು.

ಆಪಾದನೆಗಳಿದ್ದರೆ ಕಾನೂನು ಕ್ರಮ
ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಪ್ರಕರಣ ವಾಪಸ್​ ಪಡೆದಿರುವ ವಿಚಾರವಾಗಿ ಮಾತನಾಡಿದ ಸಚಿವರು, ಗಲಬೆಗಳು ಕೆಲವು ರಾಜಕೀಯವಾಗಿ, ರೈತರ ಪರವಾಗಿ ಆಗುತ್ತವೆ, ಕೆಲವೊಮ್ಮೆ ದೊಂಬಿ ಗಲಬೆಗಳಾಗುತ್ತವೆ, ಎಲ್ಲ ವಿಚಾರ ಪರಿಗಣಿಸಿ ವಾಪಸ್​ ಪಡೆಯಲಾಗುತ್ತದೆ. ಗುರುತರವಾದ ಆಪಾದನೆಗಳಿದ್ದರೆ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಆದರೆ ದೊಂಬಿ ಗಲಾಟೆಯಲ್ಲಿ ವಿನಾಕಾರಣ ಸಂಬಂಧವಿಲ್ಲದದ ಅಮಾಯಕರನ್ನು ಸೇರಿಸಲಾಗಿರುತ್ತದೆ, ತಪ್ಪು ಮಾಡಿದವರನ್ನು ಶಿಕ್ಷೆಯಿಂದ ತಪ್ಪಿಸುವ ಪ್ರಮೇಯವೇ ಇರುವುದಿಲ್ಲ. ಎಲ್ಲ ಪ್ರಕರಣಗಳ ಕುರಿತಾಗಿ ಪೊಲೀಸ್​ ಇಲಾಖೆಯಿಂದ ವರದಿ ಬಂದ ಬಳಿಕವೇ ಮುಂದಿನ ಕ್ರಮವಹಿಸಲಾಗುವುದು ಎಂದು ಮುನಿಯಪ್ಪ ಹೇಳಿದರು.