ನ್ಯೂಸ್

ಜಾತಿ ಗಣತಿ ವರದಿ ಅಂಗೀಕಾರಕ್ಕೆ ಆತುರ ಸಲ್ಲದು: ವಿಜಯೇಂದ್ರ ಆಕ್ಷೇಪ | Ministers not convinced

ಮೃತ್ಯುಂಜಯ ಕಪಗಲ್

ಬೆಂಗಳೂರು: ದಶಕದ ಹಿಂದೆ ನಡೆದ ಸಮೀಕ್ಷೆ ಆಧರಿತ ದತ್ತಾಂಶಗಳು ಅವಧಿ ಮೀರಿದ್ದಾಗಿವೆ ಎಂದು ಮಾಜಿ ಸಿಎಂ ವೀರಪ್ಪ ಮೊಯಿಲಿ ಸೇರಿ ಅನೇಕ ಹಿಂದುಳಿದ ವರ್ಗಗಳು ವಿರೋಧಿಸುತ್ತಿವೆ. ಜಾತಿ ಜನಗಣತಿ ವರದಿ ಬಗ್ಗೆ ಸರ್ಕಾರದ ಆತುರದ ನಿರ್ಧಾರ ಸರಿಯಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ಷೇಪಿಸಿದರು.

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಜಾತಿ ಜನಗಣತಿ ಮಾಡುವುದಕ್ಕೆ ಯಾವುದೇ ವಿರೋಧವಿಲ್ಲ. ಅವೈಜ್ಞಾನಿಕವಾದ ವರದಿ ಕೈಬಿಟ್ಟು, ಹೊಸದಾಗಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ನಿಖರ ದತ್ತಾಂಶಗಳನ್ನು ಸಂಗ್ರಹಿಸಬೇಕು ಎಂದು ಒತ್ತಾಯಿಸಿದರು.

ಸಿಎಂ ಸಿದ್ದರಾಮಯ್ಯ ಅವರಿಗೆ ಅಷ್ಟೊಂದು ಕಾಳಜಿಯಿದ್ದರೆ ತಮ್ಮ ಮೊದಲ ಅಧಿಕಾರಾವಧಿಯಲ್ಲೇ ಕಾಂತರಾಜು ಸಿದ್ಧಪಡಿಸಿದ ವರದಿಯನ್ನು ಅಂಗೀಕರಿಸಬಹುದಿತ್ತು. ನಂತರದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಈ ಬಗ್ಗೆ ಚಕಾರವೆತ್ತಲಿಲ್ಲ ಎಂದು ಟೀಕಿಸಿದರು.

ಕಾಂತರಾಜು ಸಮೀಕ್ಷೆ ನಡೆಸಿದ ಕೆ.ಜಯಪ್ರಕಾಶಹೆಗ್ಡೆಯವರ ದತ್ತಾಂಶಗಳ ವರದಿಯನ್ನು ದಿಢೀರ್‌ನೆ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿದ್ದಾರೆ. ಆದರೆ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಅಪೂರ್ಣವಾಗಿದೆ.

ಅದಕ್ಕೂ ಮುನ್ನ ನಂತರವೂ ಬಹುತೇಕ ಸಚಿವರ ಜತೆಗೆ ಹಲವು ಸುತ್ತಿನ ಮಾತುಕತೆ ನಡೆಸಿಯೂ ಸಿಎಂ ಸಿದ್ದರಾಮಯ್ಯ ಅವರಿಗೆ ಒಪ್ಪಿಸಲು ಸಾಧ್ಯವಾಗಿಲ್ಲ ಎಂದು ಬಿ.ವೈ.ವಿಜಯೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.