ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಮತ್ತು ಅಶಿಸ್ತಿಗೆ ಅವಕಾಶ ಇಲ್ಲ. ಅಂತಹ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಬೆಳಗ್ಗೆ ಸೇವಾ ಕವಾಯಿತಿನಲ್ಲಿ ಡಿಜಿ-ಐಜಿಪಿ ಡಾ.ಅಲೋಕ್ ಮೋಹನ್ ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಮಾತನಾಡಿದ ಡಿಜಿ-ಐಜಿಪಿ, ದೇಶದಲ್ಲಿ ಕರ್ನಾಟಕ ಪೊಲೀಸ್ ಇಲಾಖೆಗೆ ಉತ್ತಮ ಪಡೆಯಾಗಿದೆ. ಮತ್ತಷ್ಟು ಉತ್ತಮ ಮಾಡುವುದು ನಮ್ಮೆಲ್ಲರ ಗುರಿ. ಆದರೆ, ಇಲಾಖೆಯಲ್ಲಿ ಭ್ರಷ್ಟಾಚಾರ ಮತ್ತು ಅಶಿಸ್ತಿ ತೋರುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಅಲೋಕ್ ಮೋಹನ್ ಎಚ್ಚರಿಸಿದರು.
ಪರೇಡ್‌ನಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿ ಒಂದೇ ಸ್ಥಳದಲ್ಲಿ ಸೇರಿ ಏಕತೆ, ಟೀಮ್, ಆತ್ಮವಿಶ್ವಾಸ ಮತ್ತು ಶಿಸ್ತು ಪ್ರದರ್ಶನ ಮಾಡಲಾಗುತ್ತದೆ. ವೈಯಕ್ತಿಕ ಮತ್ತು ವೃತ್ತಿ ಜೀವನ ಕೆಲಸ ನಿರ್ವಹಿಸಲು ಮಾನಸಿಕ ಮತ್ತು ದೈಹಿಕವಾಗಿ ಬಲಿಷ್ಠರಾಗಿರುವುದು ಅವಶ್ಯಕ. ಎಲ್ಲ ಪೊಲೀಸರು ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆ ಗಮನ ಮತ್ತು ಕಾಳಜಿ ವಹಿಸಬೇಕೆಂದು ಸಲಹೆ ನೀಡಿದರು.
ಮಾದಕ ದ್ರವ್ಯ, ರೌಡಿಗಳ ಅಟ್ಟಾಹಾಸ ಇನ್ನಿತ್ತರ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ಇಲಾಖೆಯಲ್ಲಿ ಪ್ರತಿಯೊಬ್ಬರು ಇದಕ್ಕೆ ಬದ್ಧರಾಗಿರಬೇಕು. ಜನರ ಸೇವೆಗಾಗಿ ಪೊಲೀಸ್ ಇಲಾಖೆ ಇರುವುದು. ಜನರಿಗೆ ಸಹಾಯ ಮಾಡುವುದೇ ಮುಖ್ಯ ಗುರಿ. ಅದನ್ನು ನಾವು ಮರೆಯಬಾರದು. ನಾವೆಲ್ಲರೂ ಸಮಯ ಪ್ರಜ್ಞೆ ಮತ್ತು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಡಾ. ಅಲೋಕ್ ಮೋಹನ್ ಕರೆ ನೀಡಿದರು.
ಡಿಜಿಪಿಗಳಾದ ಡಾ.ಪಿ. ರವೀಂದ್ರನಾಥ್, ಕಮಲ್ ಪಂತ್, ಪ್ರತಾಪ್ ರೆಡ್ಡಿ, ಡಾ.ಎಂ.ಎ.ಸಲೀಂ ಮತ್ತು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಉಪಸ್ಥಿತರಿದ್ದರು.