ಈಡಿಗ ಭವನದಲ್ಲಿ ಚಿಂತನ ಮಂಥನ ಸಮಾರಂಭವನ್ನು ಶ್ರೀ ಕ್ಷೇತ್ರ ಸಿಗಂದೂರು ಧರ್ಮದರ್ಶಿ ಡಾ. ಎಸ್.ರಾಮಪ್ಪ ಉದ್ಘಾಟಿಸಿದರು. ಶ್ರೀ ಯೋಗೇಂದ್ರ ಗುರೂಜಿ, ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ, ಸತ್ಯಜಿತ್ ಸೂರತ್ಕಲ್, ಡಾ. ಜಿ.ಡಿನಾರಾಯಣಪ್ಪ, ಮಧುಗಣಪತಿ ಮಡೆನೂರು ಇದ್ದರು. 
ನ್ಯೂಸ್

ಈಡಿಗ ಸಮುದಾಯಕ್ಕೆ ದಾರಿದ್ರ್ಯ ಬಂದಿಲ್ಲ: ಶ್ರೀ ಯೋಗೇಂದ್ರ ಗುರೂಜಿ

ಶಿವಮೊಗ್ಗ: ಈಡಿಗ ಸಮುದಾಯ ಸಾಕಷ್ಟು ಕಷ್ಟ ನೋಡಿದೆ. ನೊಂದು ಬೆಂದಿರುವ ಸಮುದಾಯಕ್ಕೆ ಇಂದು ದಾರಿದ್ರ್ಯ ಬಂದಿಲ್ಲ. ಸಂಘಟನಾತ್ಮಕವಾಗಿ ನ್ಯಾಯವಾಗಿ ಧಕ್ಕಬೇಕಿರುವುದನ್ನು ಪಡೆಯಬೇಕಿದೆ. ಈ ನೆಲೆಯಲ್ಲಿ ಸಮಾಜ ಸಂಘಟನೆಯಾಗಬೇಕು ಎಂದು ಸಾರಗನಜಡ್ಡು ಕಾರ್ತಿಕೇಯ ಕ್ಷೇತ್ರದ ಅವಧೂತ ಶ್ರೀ ಯೋಗೇಂದ್ರ ಗುರೂಜಿ ಹೇಳಿದರು.

ನಗರದ ಈಡಿಗ ಭವನದಲ್ಲಿ ಭಾನುವಾರ ಶ್ರೀ ನಾರಾಯಣಗುರು ವಿಚಾರ ವೇದಿಕೆಯಿಂದ ಚಿಂತನ ಮಂಥನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಎಲ್ಲವನ್ನೂ ಅರಗಿಸಿಕೊಳ್ಳುವ ಶಕ್ತಿ ಇಂದು ಈಡಿಗ ಸಮಾಜಕ್ಕಿದೆ. ನಮ್ಮ ಜನಸಂಖ್ಯೆಗನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಆದರೂ ಸಮಾಜದ ಹಲವು ಸಂಘಟನೆಗಳಿದ್ದು, ಎಲ್ಲವೂ ಅವರವರ ನೆಲೆಯಲ್ಲಿ ಸಮಾಜದ ಕೆಲಸ ಮಾಡುತ್ತಿದ್ದಾರೆ. ಈಗ ಎಲ್ಲರನ್ನೂ ಒಗ್ಗೂಡಿಸಿ ಸರ್ಕಾರಕ್ಕೆ ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಿ ನ್ಯಾಯ ಪಡೆಯಬೇಕಿದೆ ಎಂದರು.
ಯುವಕರನ್ನು ಸಂಘಟಿಸಬೇಕು. ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಸಮಾಜ ಬಲಗೊಳ್ಳಬೇಕು. ಈಡಿಗ ಸಮುದಾಯದ ರಾಜಕೀಯ ನಾಯಕರು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಗಣ್ಯರ ನಡುವೆ ಒಂದು ಸಮನ್ವಯ ಮೂಡಬೇಕಿದೆ. ನಮ್ಮ ನಡುವಿನ ಗೊಂದಲ ತೊಲಗಬೇಕಿದೆ. ಈ ಚಿಂತನ ಮಂಥನ ಪ್ರತಿ ಜಿಲ್ಲೆಯಲ್ಲಿ ನಡೆದು ಮುಂದೆ ಒಂದು ಹೋರಾಟವಾಗಲಿದೆ ಎಂದು ಹೇಳಿದರು.
ಸೋಲೂರು ರೇಣುಕಾ ಪೀಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ, ಈಡಿಗ ಸಮುದಾಯದ ಎಲ್ಲ ಸ್ವಾಮೀಜಿಗಳ ನಡುವೆ ಒಂದು ಒಗ್ಗಟ್ಟು ಮೂಡಿದೆ. ಹಿಂದಿನ ಸರ್ಕಾರದ ಅವಧಿಯಿಂದಲೂ ನಮ್ಮ ಬೇಡಿಕೆ ಮಂಡಿಸಿದ್ದೇವೆ. ಅವುಗಳ ಅನುಷ್ಠಾನಕ್ಕೆ ಹೋರಾಟ ಮುಂದುವರಿಯಲಿದೆ. ಸಮಾಜದ ಜನರು ಹೆಚ್ಚು ವಿದ್ಯಾವಂತರಾಗಬೇಕು. ವಿಲಾಸಿ ಜೀವನದಿಂದ ಮುಕ್ತರಾಗಿ ಆರೋಗ್ಯಕರ ಸಮಾಜ ನಿರ್ಮಾಣದತ್ತ ಚಿತ್ತ ಹರಿಸಬೇಕು ಎಂದರು.
ಬೆಂಗಳೂರಿನ ಶಿ.ಗ ಫೌಂಡೇಷನ್‌ನ ಶ್ರೀ ಗುರುಮೂರ್ತಿ ಗುರೂಜಿ ಮಾತನಾಡಿ, ಸಮಾಜದ ಭಾವನೆಗಳು ಮತ್ತು ಚಿಂತನೆಗಳು ಬದಲಾಗಬೇಕು. ಎಲ್ಲರನ್ನೂ ಒಗ್ಗೂಡಿಸಿ ಧಾರ್ಮಿಕ ಮತ್ತು ಆಧ್ಯಾತ್ಮದ ನೆಲೆಯಲ್ಲಿ ಸಮಾಜ ಬಲಗೊಳ್ಳಬೇಕು. ಈಡಿಗ ಸಮಾಜದ ಯುವಕರು ಸಂಸ್ಕಾರಯುತವಾದ ಜೀವನ ಮೌಲ್ಯ ಅಳವಡಿಸಿಕೊಳ್ಳಬೇಕು. ಈ ಸಮಾಜದಲ್ಲಿ ಹುಟ್ಟಿದ ಮೇಲೆ ಈ ಜನರ ಸೇವೆಗೆ ಕಂಕಣಬದ್ಧರಾಗಬೇಕು ಎಂದು ಹೇಳಿದರು.
ಮಾಜಿ ಶಾಸಕರ ಡಾ. ಜಿ.ಡಿನಾರಾಯಣಪ್ಪ, ಸಂಶೋಧಕ ಮಧುಗಣಪತಿ ಮಡೆನೂರು, ಡಾ. ಮೋಹನ್ ಚಂದ್ರಗುತ್ತಿ, ಡಾ. ಅಣ್ಣಪ್ಪ ಮಳೀಮಠ್, ಪ್ರಮುಖರಾದ ಕಲಗೋಡು ರತ್ನಾಕರ್, ಸುರೇಶ್ ಬಾಳೇಗುಂಡಿ, ಸಿದ್ದಾಪುರದ ಎನ್.ಡಿ.ನಾಯ್ಕ್, ದೇವಪ್ಪ, ಮಮತೇಶ್ ಕಡೂರು, ಪ್ರೊ. ಕಲ್ಲನ, ಭುಜಂಗಯ್ಯ, ಎಸ್‌ಎನ್‌ಜಿವಿ ಸಂಘಟನೆ ರಾಜ್ಯ ಕಾರ್ಯಾಧ್ಯಕ್ಷ ಮುಡುಬ ರಾಘವೇಂದ್ರ, ವಕೀಲರಾದ ಉಮೇಶ್ ಕೆ.ಎಲ್ ಶಿರಿಗಾರು, ರಾಘವೇಂದ್ರ ಸುಂಟ್ರಳ್ಳಿ, ದಿನೇಶ್ ಮಳಲಗದ್ದೆ, ಮೋಹನ್, ವೆಂಕಟೇಶ್ ನಾಯ್ಕ್, ಪ್ರವೀಣ್ ಹಿರೇ ಇಡಗೋಡು ಸೇರಿ ಈಡಿಗ ಸಮಾಜದ 26 ಪಂಗಡಗಳ ಪ್ರಮುಖರು ಪಾಲ್ಗೊಂಡಿದ್ದರು.