ಶಿವಮೊಗ್ಗದ ಸಿ.ಭೀಮಸೇನರಾವ್ ಕಾನೂನು ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಾಮಾಜಿಕ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ ಉದ್ಘಾಟಿಸಿದರು. ಎಸ್.ಎನ್.ನಾಗರಾಜ, ಎಂ.ಆರ್.ಸೀತಾಲಕ್ಷ್ಮೀ, ಡಾ. ಎ.ಅನಲಾ, ವಿ.ಅನುಪಮಾ, ಡಾ.ಎಸ್.ಕಾಂತರಾಜ್ ಇದ್ದರು. 
ನ್ಯೂಸ್

ಹಣ ಬಲದ ನಡುವೆ ಲೆಕ್ಕಕ್ಕಿಲ್ಲ ದೌರ್ಜನ್ಯ:ಅಕ್ಕೈ ಪದ್ಮಶಾಲಿ

ಶಿವಮೊಗ್ಗ: ಹಣ ಬಲದ ನಡುವೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಮುಚ್ಚಿಹೋಗುತ್ತಿರುವ ಕಾಲಘಟ್ಟದಲ್ಲಿ ಮಹಿಳಾ ದಿನಾಚರಣೆ ಆಚರಿಸುವುದಾದರೂ ಹೇಗೆ ಎಂದು ಸಾಮಾಜಿಕ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ ಪ್ರಶ್ನಿಸಿದರು.

ನಗರದ ಸಿ.ಭೀಮಸೇನ ರಾವ್ ಕಾನೂನು ಮಹಾವಿದ್ಯಾಲಯ ಹಾಗೂ ಕಾನೂನು ಸ್ನಾತಕೋತ್ತರ ಅಧ್ಯಯನ ಕೇಂದ್ರದಿಂದ ಸೋಮವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ನಿಜವಾದ ದೋಷಿಗಳು ಹಣ ಬಲದಿಂದ ಸಾಕ್ಷಿಗಳನ್ನು ನಾಶ ಮಾಡಿ ತಲೆಯೆತ್ತಿ ಓಡಾಡುತ್ತಿದ್ದಾರೆ. ಗೌರಿ ಲಂಕೇಶ್ ಅವರಂತಹ ಸಾಮಾಜಿಕ ಹೋರಾಟಗಾರ್ತಿಯ ಕೊಲೆಗೆ ನ್ಯಾಯ ಸಿಕ್ಕಿಲ್ಲ. ಮೀನು ಕದ್ದ ಕಾರಣಕ್ಕೆ ಮಹಿಳೆಯನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿದ ಅಮಾನುಷ ಘಟನೆ ಕಣ್ಣೆದುರಿಗೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಬೇಕೆ ಎಂದು ಪ್ರಶ್ನಿಸಿದರು.

ಭಾರತದಲ್ಲಿ ಸಂವಿಧಾನದ ನೈತಿಕತೆ ಬಹುಮುಖ್ಯ. ಅದರಿಂದಲೇ ನಾವು ಇಷ್ಟು ಚೆನ್ನಾಗಿ ಬದುಕಲು ಸಾಧ್ಯವಾಗಿದೆ. ಇತರೆ ಮುಂದುವರಿದ ರಾಷ್ಟ್ರಗಳಿಗೆ ಭಾರತದ ಸಂವಿಧಾನ ಮಾದರಿ. ಆದರೆ ಶಿಕ್ಷಣ ಮತ್ತು ಉದ್ಯೋಗ ಶ್ರೀಮಂತರ ಕೈಯಲ್ಲಿದೆ. ನಮ್ಮ ಬಗ್ಗೆ ಯಾರು ಯೋಚಿಸುತ್ತಾರೆ ಎನ್ನುವ ಆತಂಕವನ್ನು ನೊಂದವರಿಂದ ದೂರಮಾಡಲು ಯುವ ಸಮೂಹ ಮುಂದೆ ಬರಬೇಕು ಎಂದು ಹೇಳಿದರು.

ತೃತೀಯ ಲಿಂಗಿಗಳ ಮೇಲೆ ನಿರಂತರ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ. ಅವರು ಭಿಕ್ಷಾಟನೆಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಆದರೆ ಪರಿಸ್ಥಿತಿಗಳು ಬದಲಾಗುತ್ತಿದೆ. ತೃತೀಯ ಲಿಂಗಿಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚು ಅವಕಾಶ ಸಿಗುವಂತಾಗಬೇಕು. ಸಮಾಜ ಮಡಿವಂತಿಕೆಯಿಂದ ಹೊರಬಂದು ಮತ್ತಷ್ಟು ಬದಲಾವಣೆಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಶಿಕ್ಷಣ ಮತ್ತು ಸಬಲೀಕರಣದಿಂದ ಸಮಾಜ ಸುಧಾರಿಸುತ್ತದೆ. ಕುಟುಂಬದಿಂದ ಸಾರ್ವಜನಿಕ ಆಡಳಿತದವರೆಗೆ ಪ್ರತಿ ಹಂತದಲ್ಲಿ ಸಮಾನತೆ ಸೃಷ್ಟಿಯಾಗಬೇಕು ಎಂದು ತಿಳಿಸಿದರು.

ಎನ್‌ಇಎಸ್ ನಿರ್ದೇಶಕಿ ಎಂ.ಆರ್.ಸೀತಾಲಕ್ಷ್ಮೀ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯೆ ಡಾ. ಎ.ಅನಲಾ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎಸ್.ಕಾಂತರಾಜ್, ಸಹ ಪ್ರಾಧ್ಯಾಪಕಿ ವಿ.ಅನುಪಮಾ ಇತರರಿದ್ದರು.