ನ್ಯೂಸ್

ಕೋಪವನ್ನು ನಿಯಂತ್ರಿಸಲು ಧ್ಯಾನವಲ್ಲದೆ ಅನ್ಯಮಾರ್ಗವಿಲ್ಲ

ನಿಮಗೆ ಕೋಪವೇಕೆ ಬರುತ್ತದೆಂದು ಗೊತ್ತೆ? ಏನೋ ಒಂದು ಬಲಹೀನತೆ ಇರುವುದರಿಂದ ಕೋಪ ಬರುತ್ತದೆ. ನೀವೇನೋ ಒಂದನ್ನು ಮಾಡಬೇಕೆಂದುಕೊಂಡಾಗ ಮತ್ತು ಅದನ್ನು ಮಾಡಲಾಗದಿದ್ದಾಗ, ಆ ಅಸಾಮರ್ಥ್ಯವು ಕೋಪವನ್ನುಂಟು ಮಾಡುತ್ತದೆ. ನಿಮ್ಮಲ್ಲಿ ಸಾಮರ್ಥ್ಯವಿದ್ದಾಗ ಮತ್ತು ನೀವು ಬಲಶಾಲಿಗಳು ಅನಿಸಿದಾಗ ನಿಮಗೆ ಕೋಪವಾದರೂ ಏಕೆ ಬರಬೇಕು? ಒಂದು ನೊಣದ ಮೇಲೆ ಅಥವಾ ಇರುವೆಯ ಮೇಲೆ ನೀವು ಕೋಪಿಸಿಕೊಳ್ಳುವುದಿಲ್ಲ. ನಿಮಗಿಂತಲೂ ಬಲಶಾಲಿಗಳಾದವರ ಮೇಲೆ ನಿಮಗೆ ಕೋಪ ಬರುತ್ತದೆ. ಯಾವುದೋ ಒಂದು ನಿಮ್ಮ ಕುಶಲತೆಗಳನ್ನು ಅಥವಾ ಸಾಮರ್ಥ್ಯವನ್ನು ಮೀರಿರುವಂಥದ್ದು ಎಂದು ಕಂಡಾಗ ಅಥವಾ ಅರಿತುಕೊಂಡಾಗ ನಿಮಗೆ ಕೋಪ ಬರುತ್ತದೆ. ನಿಮ್ಮ ಮಾತನ್ನು ಯಾರಾದರೂ ಕೇಳದಿದ್ದಾಗ ನಿಮಗೆ ಕೋಪ ಬರುತ್ತದೆ. ನಿಮಗಿಂತಲೂ ನಿಮ್ಮ ಮಾತುಗಳೇ ಹೆಚ್ಚು ಮಹತ್ವವಾದವು ಎಂದುಕೊಂಡಾಗಲೂ ಕೋಪವುಕ್ಕುತ್ತದೆ. ಕೆಲವೊಮ್ಮೆ ಕೋಪಿಸಿಕೊಂಡರೆ ಏನೂ ಪರವಾಗಿಲ್ಲ. ಕೋಪಿಸಿಕೊಳ್ಳಿ, ಆದರೆ ಬಹಳ ಕಾಲ ಅದು ನಿಮ್ಮ ತಲೆಯೊಳಗೆ ನಿಲ್ಲಬಾರದು. ಕೋಪವು ಸುಮ್ಮನೆ ಬಂದು ಹೋಗಿಬಿಡಬೇಕಷ್ಟೆ. ಕೋಪವು ಅವಶ್ಯಕ. ಕೆಲವು ಸಂದರ್ಭಗಳಲ್ಲಿ ಅದು ಬಹಳ ಅವಶ್ಯಕ. ಆದ್ದರಿಂದ, ಕೋಪವಿರಲಿ ಬಿಡಿ. ಕೋಪವು ಒಳ್ಳೆಯ ಕಾರಣಕ್ಕಾಗಿ ಆಗಿದ್ದರೆ, ಜನರಿಗೆ ಒಳ್ಳೆಯದನ್ನೇ ಮಾಡುತ್ತಿದ್ದರೆ ಸರಿ. ಆದರೆ ನಿಮ್ಮ ಕೋಪದಿಂದ ನಿಮ್ಮ ತಲೆಯೇ ಕತ್ತರಿಸಿ ಹೋಗುವಂತಾದರೆ, ನಿಮಗೆ ಬಾಧೆಯನ್ನು ಕೊಡುತ್ತಿದ್ದರೆ ಆಗ ಅದು ಒಳ್ಳೆಯದಲ್ಲ. ಅದರ ಮೇಲೆ ಗಮನವನ್ನು ಕೊಡಬೇಕಾಗುತ್ತದೆ. ನಿಮಗೆ ಕೋಪವೇಕೆ ಬರುತ್ತದೆಯೆಂದರೆ ಇತರರು ತಪ್ಪು ಮಾಡಿದ್ದಾರೆ ಅಥವಾ ನೀವು ತಪ್ಪು ಮಾಡಿದ್ದೀರಿ ಎಂದು ತಿಳಿದಾಗ ನಿಮ್ಮ ಮೇಲೆಯೇ ಕೋಪಿಸಿಕೊಳ್ಳುತ್ತೀರಿ. ಆದ್ದರಿಂದಲೇ ನಿಮಗೆ ಜ್ಞಾನ ಬಹಳ ಒಳ್ಳೆಯದು. ನಿಮ್ಮ ಮನಸ್ಸನ್ನು ಸಾಧುವಾಗಿ ಮಾಡುತ್ತದೆ. ಬಾಲ್ಯದಲ್ಲಿ ನಿಮ್ಮನ್ನು ಬಹಳ ಮುದ್ದಿಸಲಾಗಿದ್ದರೆ ನಿಮ್ಮ ಬಳಿ ಏನಿದೆ ಎಂದು ಮತ್ತು ನೀವು ಯಾರೆಂಬ ಅರಿವು ನಿಮಗಾಗುವುದಿಲ್ಲ. ಆದ್ದರಿಂದ ವಾಸ್ತವಕ್ಕೆ ಎಚ್ಚೆತ್ತುಕೊಳ್ಳಲು ಸಾಧ್ಯವಾಗುವಂತೆ ಪ್ರಕೃತಿಯು ನಿಮಗೆ ಸರಿಯಾದ ಸಮಯದಲ್ಲಿ ಸರಿಯಾದ ಪಾಠವನ್ನು ಕಲಿಸುತ್ತದೆ.

ಪ್ರತಿಯೊಂದು ಕೃತ್ಯವೂ ನಾಲ್ಕು ವಿಷಯಗಳಿಂದ ನಡೆಯುತ್ತದೆ : 1. ನಿಮಗೆ ಆ ಕೃತ್ಯವನ್ನು ಮಾಡಬೇಕೆಂಬ ಉದ್ದೇಶವಿತ್ತು. 2. ಬೇರೆ ಯಾರಿಗೋ ಅದನ್ನು ಮಾಡಬೇಕಾಗಿತ್ತು. ಅದರ ಕಾರಣದಿಂದಾಗಿ ನೀವದನ್ನು ಮಾಡುವ ಹಾಗಾಯಿತು. 3. ನಿಮಗೂ, ಇತರ ವ್ಯಕ್ತಿಗೂ ಅದು ಬೇಕಿರಲಿಲ್ಲ, ಆದರೆ ಹೇಗೋ, ನಿಮ್ಮಿಬ್ಬರ ಇಚ್ಛೆಗಳ ವಿರುದ್ಧವಾಗಿ ನಡೆದುಹೋಯಿತು. 4. ಇಬ್ಬರಿಗೂ ಬೇಕಾಗಿದ್ದರಿಂದ ನಡೆಯಿತು. ಒಂದು ಜಗಳದಲ್ಲಿಇಬ್ಬರು ಸಹಭಾಗಿಗಳಾಗಿರುತ್ತಾರೆ. ಮೊದಲನೆಯ ಸಾಧ್ಯತೆಯೆಂದರೆ, ನಿಮಗೆ ಸಹಿಸಲಸಾಧ್ಯವಾದ್ದರಿಂದ ಅದು ಹೊರಗೆ ಬಂದಿತು. ನಿಮಗೆ ಬಾಧೆಯಾಗಿ ನಿಮ್ಮದೇ ಕೋಪದಿಂದ ಹಾಗಾಯಿತು.

ಎರಡನೆಯ ಸಾಧ್ಯತೆಯಲ್ಲಿಯಾರೋ ಕೋಪದಿಂದಿರುವವರು ನಿಮ್ಮ ಬಳಿಗೆ ಬರುತ್ತಾರೆ ಮತ್ತು ನೀವು ಕೋಪದ ಆ ಕಂಪನಗಳನ್ನು ಹೀರಿಕೊಂಡು ಕಿರುಚಾಡುತ್ತೀರಿ. ನೀವು ಸಂತೋಷದಿಂದಿದ್ದರೂ ಇತರರ ಕಂಪನಗಳನ್ನು ನೀವು ಹೀರಿಕೊಂಡಿದ್ದರಿಂದ ಹಾಗೆ ಪ್ರತಿಕ್ರಿಯಿಸಿದಿರಿ. ಮೂರನೆಯ ಸಾಧ್ಯತೆಯಲ್ಲಿ ನೀವಾಗಲಿ, ಇತರ ವ್ಯಕ್ತಿಯಾಗಲಿ ಅದನ್ನು ಎದುರು ನೋಡಲಿಲ್ಲವಾದರೂ ಏನೋ ಒಂದು ನಡೆಯಿತು. ಇದು ಕಾಲದ ಪ್ರಭಾವದಿಂದಾಗಿ ಮತ್ತು ಯಾವುದೋ ಒಂದು ಕರ್ಮದ ಪ್ರಭಾವದಿಂದಾಗಿ ನಡೆಯಿತು. ನಾಲ್ಕನೆಯ ಸಾಧ್ಯತೆಯಲ್ಲಿ ನೀವಿಬ್ಬರೂ ಬಯಸಿದ್ದಕ್ಕಾಗಿ ನಡೆಯಿತು. ಆದ್ದರಿಂದ, ಕೃತ್ಯಗಳು ಅಥವಾ ತಪ್ಪುಗಳು ಈ ನಾಲ್ಕು ಸಾಧ್ಯತೆಗಳನ್ನು ಹೊಂದಿವೆ. ಗತದ ಬಗ್ಗೆ ಕುಳಿತು ಚಿಂತಿಸುವುದು ವ್ಯರ್ಥ. ಸುಮ್ಮನೆ ಮುನ್ನಡೆಯಿರಿ! ಪ್ರತಿ ಕ್ಷಣವೂ ನಿಮ್ಮೊಳಗೆ ಹೊಳೆಯುವ, ಆಕರ್ಷಣೀಯವಾದ ಶಕ್ತಿಯೊಂದಿದೆ. ಅದರೊಡನೆ ಮುನ್ನಡೆಯಿರಿ. ತಪ್ಪುಗಳಿಂದ ನಿಮಗೆ ನೋವುಂಟಾಗಿದೆ ಮತ್ತು ಆ ನೋವು ನಿಮ್ಮ ಬೆಳವಣಿಗೆಗಾಗಿ ಅವಶ್ಯಕ. ನೋವು ನಿಮಗೊಂದು ಆಳವನ್ನು ತಂದಿದೆ ಮತ್ತು ಅದರಿಂದ ಒಳ್ಳೆಯದೇ ಆಗಿದೆ.

ನಿಮ್ಮ ತಪ್ಪುಗಳಿಂದ ಕಲಿತಿದ್ದೀರಿ ಮತ್ತು ಅದೇ ತಪ್ಪನ್ನು ನೀವು ಪದೇ ಪದೇ ಮಾಡಲು ಹೋಗುವುದಿಲ್ಲ. ಇದುವೂ ಒಳ್ಳೆಯದೆ. ನಿಮ್ಮಲ್ಲಿ ಕೋಪವುಕ್ಕುತ್ತಿದ್ದಾಗ ನಿಮ್ಮ ದೇಹದಲ್ಲಿ, ತಲೆಯ ಮೇಲ್ಭಾಗದಲ್ಲಿ ಒಂದು ಸಂವೇದನೆಯನ್ನು ಅನುಭವಿಸಬಹುದು ಅಥವಾ ನಿಮ್ಮ ಹಣೆಯಲ್ಲಿ, ತಲೆಯ ಹಿಂಭಾಗದಲ್ಲಿ ಸಂವೇದನೆಯನ್ನು ಅನುಭವಿಸಬಹುದು. ಕತ್ತಿನಲ್ಲಿ, ಭುಜದ ಭಾಗದಲ್ಲಿ ಸ್ವಲ್ಪ ಬಿಗಿತನವನ್ನು ಅನುಭವಿಸಬಹುದು. ಆ ಕ್ಷಣದಲ್ಲಿ ಈ ಸಂವೇದನೆಗಳನ್ನು ಅನುಭವಿಸುವುದು ಒಂದು ಕುಶಲತೆಯೇ ಸರಿ. ಈ ಸಂವೇದನೆಗಳನ್ನು ಅನುಭವಿಸುವ ಅಭ್ಯಾಸವಾಗಿಬಿಟ್ಟರೆ ಕೋಪವನ್ನು ಸುಲಭವಾಗಿ ಗೆಲ್ಲಬಹುದು. ಆದ್ದರಿಂದಲೇ ಧ್ಯಾನವು ಬಹಳ ಮುಖ್ಯ. ಧ್ಯಾನವಲ್ಲದೆ ಬೇರೆ ಯಾವ ರೀತಿಯಲ್ಲೂ ಕೋಪವನ್ನು ಹತೋಟಿಗೆ ತರಲು ಸಾಧ್ಯವಿಲ್ಲ.

( ಪ್ರತಿಕ್ರಿಯಿಸಿ: instagram@srisriravishankar.kannada)